ಇಂಡಿಗೋ ವಿಮಾನ ಸಿಬ್ಬಂದಿಯ ಮುಖಕ್ಕೆ ಗುದ್ದಿದ ಪ್ರಯಾಣಿಕ! ಇಲ್ಲಿದೆ ನೋಡಿ ವಿಡಿಯೋ

ವಿಜಯವಾಣಿ - 2024-01-15T092832.188
Published on

ಹೊಸದಿಲ್ಲಿ: ಇಂಡಿಗೋ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಏರ್​ಲೈನ್​ ಸಿಬ್ಬಂದಿ ಮುಖಕ್ಕೆ ಗುದ್ದಿದ ಘಟನೆಯ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ವಿಮಾನದ ಟೈಮಿಂಗ್ಸ್​ನಲ್ಲಿ ವಿಳಂಬವಾಗಲಿದೆ ಎಂದು ಹೇಳಿದ್ದಕ್ಕೆ ಇಷ್ಟೆಲ್ಲಾ ಅವಾಂತರ ನಡೆದಿದೆ ಎಂದು ವರದಿಯಾಗಿದೆ.

ಈ ವಿಡಿಯೋಗೆ ಸಂಬಂಧಿಸಿದಂತೆ ಸದ್ಯ ಪೊಲೀಸರು ದೂರು ಸ್ವೀಕರಿಸಿದ್ದು, ಎಫ್‌ಐಆರ್ ಕೂಡ ದಾಖಲಿಸಿಕೊಂಡಿದ್ದಾರೆ. ವೀಡಿಯೋ ಪ್ರಕಾರ, ಏರ್​ಲೈನ್​ ಸಿಬ್ಬಂದಿ ವಿಮಾನ ವಿಳಂಬವಾಗಲಿದೆ ಎಂದು ಘೋಷಣೆ ಮಾಡಿದ ಬೆನ್ನಲ್ಲೇ ಹಳದಿ ಬಟ್ಟೆ ಧರಿಸಿದ್ದ ಪ್ರಯಾಣಿಕರೊಬ್ಬರು ತಾವು ಕುಳಿತ ಸ್ಥಳದಿಂದ ಎದ್ದು ಬಂದು ಸಿಬ್ಬಂದಿ ಮುಖಕ್ಕೆ ಗುದ್ದಿರುವುದು ದೃಶ್ಯದಲ್ಲಿ ಕಂಡುಬಂದಿದೆ.

ಸಿಬ್ಬಂದಿಗೆ ಥಳಿಸಲು ಬಂದ ಪ್ರಯಾಣಿಕನನ್ನು ಪಕ್ಕದಲ್ಲೇ ನಿಂತಿದ್ದ ಫ್ಲೈಟ್ ಅಟೆಂಡೆಂಟ್ ತಕ್ಷಣವೇ ತಡೆಯುವ ಮೂಲಕ ಸಿಬ್ಬಂದಿಯ ರಕ್ಷಣೆಗೆ ಮುಂದಾಗಿದ್ದಾರೆ. ಘಟನೆಗೆ ಕೆಲವು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದರೆ, ಇನ್ನು ಕೆಲವರು ವಿಮಾನ ವಿಳಂಬಕ್ಕೆ ಇಂಡಿಗೋ ಸಂಸ್ಥೆಯನ್ನು ದೂಷಿಸಿದ್ದಾರೆ.

ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ನೆಟ್ಟಿಗರು ಪ್ರಯಾಣಿಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net