

ಬೆಂಗಳೂರು: ಅತಿವೇಗವಾಗಿ ಕಾರು ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಪ್ರಯಾಣಿಕ ಮೃತಪಟ್ಟು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹುಳಿಮಾವು ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬೇಗೂರು ನಿವಾಸಿ ಶ್ರೀನಿವಾಸ(೩೪) ಮೃತರು. ಕಾರು ಚಾಲಕ ದೀಪಕ್(೩೧) ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಶನಿವಾರ ತಡರಾತ್ರಿ ೧೨.೩೦ಕ್ಕೆ ಅಕ್ಷಯನಗರ-ಎಲೇನಹಳ್ಳಿ ಮುಖ್ಯರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಿವಾಸ್ ಮತ್ತು ದೀಪಕ್ ಸ್ನೇಹಿತರಾಗಿದ್ದು, ರಾತ್ರಿ ಕಾರಿನಲ್ಲಿ ಅಕ್ಷಯನಗರದ ಕಡೆಯಿಂದ ಎಲೇನಹಳ್ಳಿ ಕಡೆಗೆ ತೆರಳುತ್ತಿದ್ದರು. ದೀಪಕ್ ವೇಗವಾಗಿ ಕಾರು ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿದ ಕಾರು ರಸ್ತೆಯ ಎಡಭಾಗದ ಪಾದಚಾರಿ ಮಾರ್ಗದ ಮರಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಚಾಲಕ ದೀಪಕ್ ಹಾಗೂ ಪಕ್ಕದ ಆಸನದಲ್ಲಿ ಕುಳಿತ್ತಿದ್ದ ಶ್ರೀನಿವಾಸ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಸ್ಥಳೀಯರು ಇಬ್ಬರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದ ಪರಿಣಾಮ ಭಾನುವಾರ ಮುಂಜಾನೆ ಚಿಕಿತ್ಸೆ ಫಲಿಸದೆ ಶ್ರೀನಿವಾಸ್ ಮೃತಪಟ್ಟಿದ್ದಾರೆ. ಚಾಲಕ ದೀಪಕ್‌ಗೆ ಚಿಕಿತ್ಸೆ ಮುಂದುವರೆದಿದೆ.
ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಇನ್ನು ಅಪಘಾತಕ್ಕೆ ಒಳಗಾಗಿರುವ ಕಾರಿಗೆ ವಿಮೆ(ಇನ್ಶೂರೆನ್ಸ್) ಹಾಗೂ ಸಧೃಡತೆಯ ಪ್ರಮಾಣ ಪತ್ರ (ಎಫ್‌ಸಿ) ಇಲ್ಲದಿರುವುದು ಕಂಡು ಬಂದಿದೆ. ಈ ಸಂಬಂಧ ಕಾರು ಚಾಲಕ ದೀಪಕ್ ವಿರುದ್ಧ ಹುಳಿಮಾವು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಂಕಷ್ಟಕ್ಕೆ ಸಿಲುಕಿದ ಕುಟುಂಬ:
ಅಪಘಾತಕ್ಕೊಳಗಾಗಿರುವ ಕಾರಿಗೆ ವಿಮೆ ಹಾಗೂ ಎಫ್‌ಸಿ ಇಲ್ಲ. ಹೀಗಾಗಿ ಮೃತ ಶ್ರೀನಿವಾಸ್ ಕುಟುಂಬಕ್ಕೆ ಯಾವುದೇ ಪರಿಹಾರ ಸಿಗುವುದಿಲ್ಲ. ಶ್ರೀನಿವಾಸ್‌ಗೆ ವೃದ್ಧ ತಂದೆ-ತಾಯಿ ಇದ್ದಾರೆ. ಮನೆಗೆ ಆಧಾರ ಸ್ತಂಭವಾಗಿದ್ದ ಆತನ ಅಕಾಲಿಕ ಸಾವಿನಿಂದ ಕುಟುಂಬ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ವಾಹನಗಳಿಗೆ ವಿಮೆ ಹಾಗೂ ಎಫ್‌ಸಿ ಮಾಡಿಸುವಂತೆ ಪೊಲೀಸರು ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದರೂ ವಾಹನ ಸವಾರರು ನಿರ್ಲಕ್ಷಿಸುತ್ತಿದ್ದಾರೆ. ಇನ್ನಾದರೂ ಎಚ್ಚೆತ್ತುಕೊಂಡು ಸವಾರರು ತಮ್ಮ ವಾಹನಗಳಿಗೆ ವಿಮೆ, ಎಫ್‌ಸಿ ಮಾಡಿಸಿಕೊಳ್ಳಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.