ಬಿಜೆಪಿಯಲ್ಲಿ ಪಕ್ಷ ನಿಷ್ಠರಿಗೆ ಶಿಕ್ಷೆ !ಮುನಿದ್ವಯರ ಆರ್ಭಟ

ಸಂಸದ ಮುನಿಸ್ವಾಮಿ, ಸಚಿವ ಮುನಿರತ್ನ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್​, ಬಿಜೆಪಿ ವಿವಿಧ ಪ್ರಕೋಷ್ಠಗಳ ರಾಜ್ಯ ಸಮಿತಿ ಸದಸ್ಯ ಹೂಡಿ ವಿಜಯಕುಮಾರ್​
ಸಂಸದ ಮುನಿಸ್ವಾಮಿ, ಸಚಿವ ಮುನಿರತ್ನ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್​, ಬಿಜೆಪಿ ವಿವಿಧ ಪ್ರಕೋಷ್ಠಗಳ ರಾಜ್ಯ ಸಮಿತಿ ಸದಸ್ಯ ಹೂಡಿ ವಿಜಯಕುಮಾರ್​
Published on

ಕೋಲಾರ: ಗೆಲ್ಲುವ ಕುದುರೆಗಳ ಹಿಂದೆ ಬಿದ್ದಿರುವ ಬಿಜೆಪಿ ಜಿಲ್ಲಾ ನಾಯಕತ್ವ ಪಕ್ಷ ನಿಷ್ಠರ ವಿರುದ್ಧ ಸಮರ ಸಾರಿದೆ. ಇದರ ಪರಿಣಾಮ ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ಅಶಿಸ್ತು, ಅಸಹನೆ ರೆಕ್ಕೆ ಬಿಚ್ಚಿದ್ದು, ರಾಜ್ಯ ನಾಯಕತ್ವ ಮಧ್ಯ ಪ್ರವೇಶಿಸದಿದ್ದರೆ ಗೆಲ್ಲುವ ಸಾಧ್ಯತೆ ಇರುವ ಮಾಲೂರು, ಕೋಲಾರ, ಬಂಗಾರಪೇಟೆ, ಕೆಜಿಎಫ್​ನಲ್ಲಿ ಫಲಿತಾಂಶ ಮುಳುವಾಗುವ ಸಾಧ್ಯತೆ ನಿಚ್ಚಳವಾಗಿದೆ.

ಮಾಲೂರಿನಲ್ಲಿ 2018ರ ಚುನಾವಣೆಯಲ್ಲಿ ಬಿಜೆಪಿ ಕೃಷ್ಣಯ್ಯ ಶೆಟ್ಟಿ ಸೋತ ಬಳಿಕ ಪಕ್ಷದ ಕಾರ್ಯಕರ್ತರು ಚದುರದಂತೆ ನೋಡಿಕೊಂಡು, ಪಕ್ಷದ ಕಾರ್ಯಕ್ರಮಗಳ ಜತೆಗೆ ಕಾಲಕಾಲಕ್ಕೆ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದ್ದ ಹೂಡಿ ವಿಜಯಕುಮಾರ್​ ವಿರುದ್ಧ ಜಿಲ್ಲಾನಾಯಕರಾದ ಸಂಸದ ಎಸ್​.ಮುನಿಸ್ವಾಮಿ, ಉಸ್ತುವಾರಿ ಸಚಿವ ಮುನಿರತ್ನ ವಾಗ್ಧಾಳಿ ನಡೆಸುತ್ತಿದ್ದಾರೆ.

ಇದಕ್ಕೆ ಕಾರಣವೂ ಇಲ್ಲದಿಲ್ಲ, ಹೈಕಮಾಂಡ್​ ಮುಂದೆ ಗೆಲ್ಲುವ ಮಾನದಂಡ ಮುಂದಿಟ್ಟು ಇತ್ತೀಚೆಗಷ್ಟೇ ಪಕ್ಷ ಸೇರ್ಪಡೆ ಮಾಡಿಕೊಂಡಿರುವ ಕೋಡಿಹಳ್ಳಿ ಮಂಜುನಾಥಗೌಡಗೆ ಬಿಜೆಪಿ ಸಂಪ್ರದಾಯಕ್ಕೆ ವಿರುದ್ಧವಾಗಿ ಟಿಕೆಟ್​ ಘೋಷಿಸಿರುವ ಈ ಮುನಿದ್ವಯರು ಮುಂದೆ ಎದುರಾಗಬಹುದಾದ ಡ್ಯಾಮೇಜ್​ ಕಂಟ್ರೋಲ್​ ಮಾಡದೆ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ.

ಕೋಲಾರ ಕ್ಷೇತ್ರಕ್ಕೆ ಗೆಲ್ಲುವ ಕುದುರೆ (ಅಭ್ಯರ್ಥಿ) ವರ್ತೂರು ಪ್ರಕಾಶ್​ರನ್ನು ಕರೆತರುವ ಸಂದರ್ಭ ಮಾಲೂರು ಕಾರ್ಯಕರ್ತರ ಆಕ್ರೋಶ ಕಡೆಗಣಿಸಿ ಜೆಡಿಎಸ್​ನ ಮಾಜಿ ಶಾಸಕ ಮಂಜುನಾಥಗೌಡರನ್ನು ಪಕ್ಷ ಸೇರ್ಪಡೆ ಮಾಡಿಕೊಂಡ ಉಸ್ತುವಾರಿ ಸಚಿವ ಮುನಿರತ್ನ, ಸಂಸದ ಎಸ್​. ಮುನಿಸ್ವಾಮಿ ಅಂದೇ ಅಭ್ಯರ್ಥಿ ಘೋಷಣೆ ಮಾಡಿಬಿಟ್ಟರು.

ಅಂದಿನಿಂದ ಶುರುವಾದ ಕುಸ್ತಿ ಟೇಕಲ್​ನಲ್ಲಿ ಕೆಂಪೇಗೌಡ ರಥಯಾತ್ರೆ ಸಾಗುವಾಗ ಬೀದಿ ಬಡಿದಾಟಕ್ಕೆ ಕಾರಣವಾಗಿತ್ತು. ಆದರೆ ಇತ್ತೀಚೆಗೆ ಹೂಡಿ ವಿಜಯಕುಮಾರ್​ ಜಿಲ್ಲಾಧ್ಯಕ್ಷ ವೇಣುಗೋಪಾಲ್​ ವಿರುದ್ಧ ಅಸಮಾಧಾನ ಹೊರಹಾಕಿದ್ದೇ ತಡ, ಕಾಂಗ್ರೆಸ್​ನ ನಂಜೇಗೌಡರೊಂದಿಗೆ ಹೂಡಿ ಮ್ಯಾಚ್​ಫಿಕ್ಸಿಂಗ್​ ಮಾಡಿಕೊಂಡಿದ್ದಾರೆಂದು ವೇಣುಗೋಪಾಲ್​ ಜರಿದರೆ, ಸರಿಪಡಿಸಬೇಕಿದ್ದ ಸಂಸದ ಮುನಿಸ್ವಾಮಿ ಟೀಕಿಸುವ ಭರದಲ್ಲಿ ಆತನೊಬ್ಬ ವಾಟರ್​ಕ್ಯಾನ್​ ಗಿರಾಕಿ ಎಂದು ಆಳಿಗೊಂದು ಕಲ್ಲು ಎಂಬಂತೆ ಜೇನುಗೂಡಿಗೆ ಕಲ್ಲು ಹೊಡೆದಿದ್ದಾರೆ. ಸೇರಿಗೆ ಸವ್ವಾಸೇರು ಎಂಬಂತೆ ಉಸ್ತುವಾರಿ ಸಚಿವ ಮುನಿರತ್ನ ಮಾಲೂರಿನಲ್ಲಿ ಮಂಜುನಾಥಗೌಡ ಅಭ್ಯರ್ಥಿ ಎಂದು ಪುನರುಚ್ಚರಿಸುವ ಮೂಲಕ ಬಿರುಕು ಮತ್ತಷ್ಟು ಹೆಚ್ಚಾಗುವಂತೆ ಮಾಡಿದ್ದಾರೆ.

ತಿಗಳರ ಮತ ಕೈತಪು$್ಪವ ಭೀತಿ: ಕೋಲಾರದಲ್ಲಿ ದಳಪತಿ ಕುಮಾರಸ್ವಾಮಿ ಪಂಚರತ್ನ ಯಾತ್ರೆ ಬಳಿಕ ಜೆಡಿಎಸ್​ ಪರ ಒಕ್ಕಲಿಗರ ಮತ ಧ್ರುವಿಕರಣಗೊಂಡಿರುವುದು ಸುಳ್ಳಲ್ಲ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಬಾರದಿದ್ದರೆ ಒಬಿಸಿ ಮತ ವರ್ತೂರು ಪ್ರಕಾಶ್​ ಕೈ ಹಿಡಿಯುವುದೂ ಸತ್ಯ. ಅದೇ ರೀತಿ ಮುಸ್ಲಿಂರು ಜೆಡಿಎಸ್​ನತ್ತ ವಾಲುತ್ತಿರುವುದನ್ನು ಕಾಣಬಹುದಾಗಿದೆ.

ಜಾತಿ ಸಮೀಕರಣ ವರ್ಕೌಟ್​ ಆಗುತ್ತಿರುವ ಈ ಸಂದರ್ಭದಲ್ಲಿ ಹೂಡಿ ವಿಜಯಕುಮಾರ್​ ವಿರುದ್ಧ ವಾಗ್ಧಾಳಿ ನಡೆಸುತ್ತಿರುವುದು ಆ ಕ್ಷೇತ್ರದಲ್ಲಿನ 25 ಸಾವಿರ ವಹ್ನಿಕುಲ ಕ್ಷತ್ರಿಯರ ಮತ, ಬಿಜೆಪಿ ಸಾಂಪ್ರದಾಯಿಕ ಮತ ಕೈ ಜಾರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಅಷ್ಟೇ ಅಲ್ಲ, ಕೋಲಾರ, ಬಂಗಾರಪೇಟೆ, ಕೆಜಿಎಫ್​ನಲ್ಲಿ ನಿರ್ಣಾಯಕ ಸಂಖ್ಯೆ (5ರಿಂದ 10ಸಾವಿರ ಮತ)ಯಲ್ಲಿ ವಹ್ನಿಕುಲ ಕ್ಷತ್ರಿಯರಿರುವುದು ಈ ಮತಗಳು ಕೈತಪ್ಪಿದರೆ ಬಿಜೆಪಿಯ ಗೆಲ್ಲುವ ಕುದುರೆಗಳಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.

ಆದರೆ ಮತವಿಭಜನೆ ಪರಿವೆಯೂ ಇಲ್ಲದೆ ಜಿಲ್ಲಾ ಬಿಜೆಪಿ ನೊಗ ಹೊತ್ತ ಮುನಿದ್ವಯರು, ಅಧ್ಯಕ್ಷ ವೇಣುಗೋಪಾಲ್​ ಪಕ್ಷ ಸಂಘಟನೆ ಮಾಡುವುದಕ್ಕೆ ಆದ್ಯತೆ ನೀಡದೆ ಹಾದಿ, ಬೀದಿ ರಂಪಾಟಕ್ಕೆ ಕಾರಣವಾಗಿರುವುದು ಪಕ್ಷ ನಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ತ್ರಿಮೂರ್ತಿಗಳಿಗೆ ತಿರುಗುಬಾಣ: ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ನೇತೃತ್ವದ ಘಟಬಂಧನ್​ ಟೀಂನೊಂದಿಗೆ ಮ್ಯಾಚ್​ ಫಿಕ್ಸಿಂಗ್​ ಮಾಡಿಕೊಂಡು ಜಯಭೇರಿ ಭಾರಿಸಿದ ಸಂಸದ ಎಸ್​.ಮುನಿಸ್ವಾಮಿ ಆಪರೇಷನ್​ ಕಮಲ ಮೂಲಕ ಬಿಜೆಪಿ ಸೇರಿ ಸರ್ಕಾರದಲ್ಲಿ ಸಚಿವರಾದ ಮುನಿರತ್ನ, ಸ್ವಕ್ಷೇತ್ರ ಶ್ರೀನಿವಾಸಪುರದಲ್ಲಿ ಪಕ್ಷಕ್ಕೆ ಬುನಾದಿ ಹಾಕಿಕೊಡದ ಅಧ್ಯಕ್ಷ ಡಾ.ವೇಣುಗೋಪಾಲ್​ರಿಂದ ಪಕ್ಷ ಸಂಘಟನೆಯಾಗುವುದು ಕನಸಿನ ಮಾತಾದೀತು ಎಂದು ಕಮಲ ಕಲಿಗಳು ಪಕ್ಷ ಚಟುವಟಿಕೆಯಿಂದ ದೂರ ಸರಿಯುತ್ತಿದ್ದಾರೆ. ಇತ್ತೀಚಿನ ಬೆಳವಣಿಗೆಗಳಿಂದ ರಾಷ್ಟ್ರಭಕ್ತಿಯನ್ನೇ ಉಸಿರಾಗಿಸಿಕೊಂಡಿರುವ ಪಕ್ಷ ನಿಷ್ಠರು, ರಾಜ್ಯ ನಾಯಕತ್ವ ಮಧ್ಯಪ್ರವೇಶಿಸಿ ಪ್ರಮಾದಗಳನ್ನು ಶೀಘ್ರ ಸರಿಪಡಿಸಬೇಕು. ಇಲ್ಲವಾದರೆ 2018ರ ಚುನಾವಣೆಯಂತೆ 2023ರ ಚುನಾವಣೆಯಲ್ಲೂ ಶೂನ್ಯ ಸಂಪಾದನೆ ಮಾಡುವುದಂತೂ ದಿಟ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net