ಕ್ಷೇತ್ರ ವಿಂಗಡಣೆಯಲ್ಲಿ ಏಕಪಕ್ಷೀಯ ನಿರ್ಧಾರ

komul
ಎಂಡಿ ಮತ್ತು ಆಡ್ಮಿನ್​ ವ್ಯವಸ್ಥಾಪಕರನ್ನ ತರಾಟೆಗೆ ತೆಗೆದುಕೊಂಡು ಮಾಜಿ ನಿರ್ದೇಶಕರು.
Published on

ಕೋಲಾರ: ಕೋಲಾರ ಹಾಲು ಒಕ್ಕೂಟದ (ಕೋಮುಲ್​) ನಿರ್ದೇಶಕರ ಕ್ಷೇತ್ರಗಳ ವಿಂಗಡಣೆ ಸಂಬಂಧ ಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಆರೋಪಿಸಿದ ಮಾಜಿ ನಿರ್ದೇಶಕರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ತಾಲೂಕಿನ ಬೆಳಗಾನಹಳ್ಳಿಯ ಕೋಮುಲ್​ ಕಚೇರಿಗೆ ಸೋಮವಾರ ಭೇಟಿ ನೀಡಿದ ಮಾಜಿ ನಿರ್ದೇಶಕರಾದ ಕಾಡೇನಹಳ್ಳಿ ನಾಗರಾಜ್​, ಡಿ.ವಿ.ಹರೀಶ್​ ಹಾಗೂ ಕೆಲ ಹಾಲು ಸಹಕಾರ ಸಂಘಗಳ ಅಧ್ಯಕ್ಷರು ಕ್ಷೇತ್ರ ವಿಂಡಗಣೆ ಕುರಿತು ಮಾಹಿತಿ ಕೇಳಿದರು. ಇದಕ್ಕೆ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ ಮತ್ತು ವ್ಯವಸ್ಥಾಪಕ (ಅಡ್ಮಿನ್​) ನಾಗೇಶ್​ ಮಾಹಿತಿ ಒದಗಿಸುವಲ್ಲಿ ವಿಲರಾದರು.

ಯಾವ ಮಾನದಂಡಗಳ ಆಧಾರದ ಮೇರೆಗೆ ಕ್ಷೇತ್ರಗಳನ್ನು ವಿಂಡಗಣೆ ಮಾಡಿದ್ದೀರಾ?, ಇದಕ್ಕೂ ಮೊದಲು ಆಕ್ಷೇಪಣೆ ಕರೆದಿದ್ದೀರಾ?, ಸಂಗಳ ಅಧ್ಯಕ್ಷರಿಗೆ ನೋಟಿಸ್​ ಕಳುಹಿಸಿದ್ದೀರಾ ಎಂದು ಪ್ರಶ್ನಿಸಿ, ಹಿಂಬರಹ ನೀಡುವಂತೆ ಪಟ್ಟು ನೀಡಿದರು. ಇದಕ್ಕೆ ಉತ್ತರ ನೀಡಲು ಅಧಿಕಾರಿಗಳು ತಡಬಡಿಸಿದರು.

ಈ ಮಧ್ಯೆ ಒಕ್ಕೂಟಕ್ಕೆ ಆಡಳಿತಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಆಗಮಿಸಿದರು. ಈ ವೇಳೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಮೈತ್ರಿ, ಮುಂದಿನ ದಿನಗಳಲ್ಲಿ ಆಡಳಿತದಲ್ಲಿ ವ್ಯತ್ಯಾಸ ಆಗದಂತೆ ಎಚ್ಚವಹಿಸಲಾಗುವುದು ಎಂದು ತಿಳಿಸಿದರು.

* ಕ್ಷೇತ್ರ ವಿಂಗಡಣೆಯಲ್ಲಿ ನ್ಯೂನತೆ

ಕ್ಷೇತ್ರದ ವಿಂಡಗಣೆ ಮಾಡುವಲ್ಲಿ ಅನೇಕ ನ್ಯೂನತೆಗಳಿವೆ, ಯಾರನ್ನು ಮೆಚ್ಚಿಸಲು ಈ ರೀತಿ ಮಾಡಲಾಗಿದೆ ಎಂದು ಮಾಜಿ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್​ ಕಿಡಿಕಾರಿದರು. ಮುಳಬಾಗಿಲು ವ್ಯಾಪ್ತಿಯಲ್ಲಿ ಉತ್ತರ, ದಕ್ಷಿಣ ಎಂದು ಕ್ಷೇತ್ರ ವಿಂಗಡಣೆ ಮಾಡಲಾಗಿದೆ. ಇದನ್ನು ಯಾರ ಮುಲಾಜಿಗೆ ಒಳಗಾಗಿ ಮಾಡಿದ್ದೀರಾ. ವೈಜ್ಞಾನಿಕವಾಗಿ ಹೇಗೆ ಮಾಡಬೇಕು ಎಂಬುದರ ಬಗ್ಗೆ ಮನವಿ ಸಲ್ಲಿಸಿಯೂ ವ್ಯರ್ಥವಾಯಿತಲ್ಲ. ಅಧಿಕಾರಿಗಳ ವಿರುದ್ಧ ಕೋರ್ಟ್​ ಮೋರೆ ಹೋಗುತ್ತೇವೆ. ನಮಗೂ ಕಾನೂನು ಗೊತ್ತಿದೆ ಎಂದು ಎಚ್ಚರಿಕೆ ನೀಡಿದರು.

* ಅನಕ್ಷರಸ್ಥರ ಮಾತಿನಂತೆ ಅಧಿಕಾರಿಗಳ ಕೆಲಸ

ನಮ್ಮ ಅಧಿಕಾರಾವಧಿ ಮುಗಿದ ನಂತರ ಇಲ್ಲಿನ ಅಧಿಕಾರಿಗಳು ಆಡಿದ್ದೇ ಆಟವಾಗಿದೆ. ಅಧಿಕಾರಿಗಳು ಮಾಡಿರುವ ತಪ್ಪಿನ ಹಿಂದೆ ಅನಕ್ಷರಸ್ಥರೂ ಇದ್ದಾರೆ. ಅವರು ಹೇಳುವ ರೀತಿ ಮಾಡುವ ಹಾಗಿದ್ದರೆ ವಿದ್ಯಾವಂತರು ನೀವು ಯಾಕೆ ಉನ್ನತ ಸ್ಥಾನದಲ್ಲಿ ಕುಳಿತುಕೊಳ್ಳಬೇಕು ಎಂದು ಡಿ.ವಿ.ಹರೀಶ್​ ಪ್ರಶ್ನಿಸಿದರು. ನಿರ್ದೇಶಕ ಸ್ಥಾನಗಳನ್ನು ನಿಗದಿ ಮಾಡುವ ವಿಚಾರವಾಗಿ ರಾಜ್ಯ ಸಹಕಾರ ಇಲಾಖೆಯಿಂದ ನ.29ರಂದು ಒಕ್ಕೂಟಕ್ಕೆ ಪತ್ರ ಬಂದಿದೆ. ಆದರೆ, ಕ್ಷೇತ್ರ ವಿಗಂಡಣೆ ಮಾಡುವಲ್ಲಿ ಅಧಿಕಾರಿಗಳು ಅನಕ್ಷರಸ್ಥರ ಮಾತು ಕೇಳಿದ್ದಾರೆ. ಈ ಸಂಬಂಧ ಆಡಳಿತ ಪಕ್ಷದ ಶಾಸಕರೇ ದಾಖಲೆ ಸಮೇತ ಸುದ್ದಿಗೋಷ್ಠಿ ಮಾಡುತ್ತಾರೆ. ಇದಕ್ಕೆ ಯಾರು ಹೊಣೆ ಎಂದು ತರಾಟೆಗೆ ತೆಗೆದುಕೊಂಡರು.

* ಸಂಸ್ಥೆಗೆ ಮಸಿ ಬಳೆಯುವ ಯತ್ನ

ಒಬ್ಬರ ಮುಲಾಜಿಗೆ ಒಳಗಾಗಿ ಸಹಕಾರಿ ಬ್ಯಾಂಕನ್ನು ಮುಳುಗಿಸಿದ್ದು ಆಯಿತು, ಈಗ ಒಕ್ಕೂಟ ಮುಳುಗಿಸಲು ಪ್ರಯತ್ನ ಮಾಡುತ್ತಿದ್ದೀರಾ. ಇವತ್ತು ಹತ್ತು ಮಂದಿಯೊಂದಿಗೆ ಬಂದಿದ್ದೇವೆ, ಮುಂದಿನ ದಿನಗಳಲ್ಲಿ ಸಾವಿರ ಮಂದಿ ಹಸುಗಳ ಸಮೇತ ಬಂದು ಒಕ್ಕೂಟದ ಮುಂದೆ ನಿಲ್ಲಬೇಕಾಗುತ್ತದೆ ಎಂದು ಡಿ.ವಿಹರೀಶ್​ ಎಚ್ಚರಿಸಿದರು. ಒಬ್ಬರ ತಾಳಕ್ಕೆ ತಕ್ಕಂತೆ ಕೆಲಸ ಮಾಡುವುದು ಬಿಟ್ಟು ರೈತರ ಸಬಲೀಕರಣಕ್ಕಾಗಿ ದುಡಿಯಿರಿ, ಪ್ರತಿ ತಿಂಗಳು ಬಟವಾಡೆ ನೀಡುವುದರಲ್ಲೂ ತಡವಾಗುತ್ತಿದೆ. ರೈತರಿಗೆ ಯಾವ ರೀತಿ ಉತ್ತರ ಹೇಳಬೇಕು, ರೈತರ ಸಂಸ್ಥೆಗೆ ಮಸಿ ಬಳಿಯು ಕೆಲಸ ಮಾಡಬೇಡಿ ಎಂದರು.

* ಅಧಿಕಾರಿಗಳ ವರ್ಗಾವಣೆಗೂ ಕಿಡಿ

ವಿಭಜನೆ ಹೆಸರು ಹೇಳಿಕೊಂಡು ಅವೈಜ್ಞಾನಿಕವಾಗಿ ಅಧಿಕಾರಿಗಳನ್ನು ಮನಸೋ ಇಚ್ಚೆ ವರ್ಗಾವಣೆ ಮಾಡಿದ್ದೀರಾ. ಅವರು ಈಗ ಕೋರ್ಟ್​ಗೆ ಹೋಗಿದ್ದಾರೆ. ಇಂತಹ ಪರಿಸ್ಥಿತಿ ಬೇಕಿತ್ತಾ. ವರ್ಗಾವಣೆಗೂ ಮುನ್ನ ಅಧಿಕಾರಿಗಳ ಅಭಿಪ್ರಾಯ ಕೇಳಿಲ್ಲ, ರೋಸ್ಟರ್​ ಪಾಲನೆ ಮಾಡಿಲ್ಲ ಎಂದು ಮಾಜಿ ನಿರ್ದೇಶಕರು ದೂರಿದರು.

* ಮಾಹಿತಿ ಮರೆಮಾಚಿದ ಆರೋಪ

ಜೆಆರ್​ಸಿಎಸ್​ನಿಂದ ಪತ್ರ ಬಂದಿರುವ ಬಗ್ಗೆ ಅಧಿಕಾರಿಗಳು ಗಮನಕ್ಕೂ ತಾರದೆ ಮರೆ ಮಾಚಿದ್ದಾರೆ. ಆಡಳಿತಾಧಿಕಾರಿಯಾಗಿ ಇರುವಷ್ಟು ದಿನ ರೈತರಿಗೆ ತೊಂದರೆಯಾಗಲು ಬಿಡುವುದಿಲ್ಲ. ಸಕಾಲಕ್ಕೆ ಬಟವಾಡೆ ಬಿಡುಗಡೆ ಮಾಡಿಸುತ್ತೇನೆ ಎಂದು ಆಡಳಿತಾಧಿಕಾರಿ ಡಾ.ಮೈತ್ರಿ ಹೇಳಿದರು. ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಸಲು ಪ್ರಕ್ರಿಯೆ ಶುರು ಮಾಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net