

ರಿಪ್ಪನ್‌ಪೇಟೆ: ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಸ್ಪರ್ಧಿಸುವುದು ಮುಖ್ಯ. ಸೋಲೇ ಗೆಲುವಿನ ಮೆಟ್ಟಿಲು ಎಂಬುದನ್ನು ಅರಿಯಬೇಕು ಎಂದು ರಿಪ್ಪನ್‌ಪೇಟೆ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ ಹೇಳಿದರು.
ಸರ್ಕಾರಿ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಿಪ್ಪನ್‌ಪೇಟೆ ಕ್ಲಸ್ಟರ್ ಮಟ್ಟದ 14 ವರ್ಷ ವಯೋಮಿತಿಯೊಳಗಿನ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಪಠ್ಯದ ಜತೆಯಲ್ಲಿ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು. ಆಸಕ್ತ ಕ್ರೀಡೆಯಲ್ಲಿ ತರಬೇತಿ ಪಡೆದು ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ತಿಳಿಸಿದರು.
ಮಳೆ ಬರುತ್ತಿದ್ದರಿಂದ ಕ್ರೀಡಾಂಗಣ ಪೂರ್ತಿ ಕೆಸರುಮಯವಾಗಿತ್ತು. ವಿದ್ಯಾರ್ಥಿಗಳು ಅನಿವಾರ್ಯವಾಗಿ ಕೆಸರು ತುಂಬಿದ ಅಂಕಣದಲ್ಲಿಯೇ ಕಬಡ್ಡಿ, ಖೋ-ಖೋ ಸೇರಿ ಇತರ ಕ್ರೀಡೆಗಳಲ್ಲಿ ಪಾಲ್ಗೊಂಡರು. ಬಿಇಒ ಕೃಷ್ಣಮೂರ್ತಿ, ಬಾಳೂರು ಗ್ರಾಪಂ ಅಧ್ಯಕ್ಷ ಶ್ರೀನಿವಾಸಾಚಾರ್ಯ, ಗ್ರಾಪಂ ಸದಸ್ಯರಾದ ಮಲ್ಲಿಕಾರ್ಜುನ, ಗಣಪತಿ, ಅಶ್ವಿನಿ, ಮಂಜಪ್ಪ, ರೇಣುಕಪ್ಪ ಇತರರಿದ್ದರು.