ಕೃಷಿ ಚಟುವಟಿಕೆ ನೋಡಿಕೊಳ್ಳಲು ಕೈದಿಗೆ ಪೆರೋಲ್

highcourt
Published on

 ಬೆಂಗಳೂರು: ಗೃಹಿಣಿಯೊಂದಿಗಿನ ವಿವಾಹೇತರ ಸಂಬಂಧಕ್ಕೆ ಅಡ್ಡಿಯಾದ ಹಿನ್ನೆಲೆಯಲ್ಲಿ ಆಕೆಯ ಗಂಡನನ್ನು ಕೊಲೆ ಮಾಡಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಕಳೆದ 11 ವರ್ಷಗಳಿಂದ ಜೈಲಿನಲ್ಲಿರುವ ಕೈದಿಗೆ ಕೃಷಿ ಚಟುವಟಿಕೆ ನೋಡಿಕೊಳ್ಳಲು 90 ದಿನ ಪೆರೋಲ್ ಮಂಜೂರು ಮಾಡಿ ಹೈಕೋರ್ಟ್ ಆದೇಶಿಸಿದೆ.

ತನ್ನ ತಂದೆ ಹೆಸರಿನಲ್ಲಿರುವ ಜಮೀನಿನಲ್ಲಿ ಕೃಷಿ ಚಟುವಟಿಕೆ ನೋಡಿಕೊಳ್ಳಲು ಪೆರೋಲ್ ನೀಡುವಂತೆ ಕೋರಿ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಿದ್ದಿದೇವರಹಳ್ಳಿ ನಿವಾಸಿ ಚಂದ್ರ (36) ಎಂಬುವರು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಅರ್ಜಿದಾರರು ಕಳೆದ 11 ವರ್ಷಗಳಿಂದ ಜೈಲಿನಲ್ಲಿದ್ದಾರೆ. ಈ ಹಿಂದೆ ಆತ ಪೆರೋಲ್ ಮೇಲೆ ಯಾವತ್ತು ಹೊರಗಡೆ ಬಂದಿರಲಿಲ್ಲ. ಜತೆಗೆ ಪ್ರಕರಣವನ್ನು ಪರಿಶೀಲಿಸಿದರೆ ಅರ್ಜಿದಾರರು ಪೆರೋಲ್ ಮೇಲೆ ಬಿಡುಗಡೆಯಾಗುವ ಅಗತ್ಯವಿದೆ ಎಂಬುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ತಿಳಿದು ಬರುತ್ತದೆ. ಆದ್ದರಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು, ಆತನನ್ನು 90 ದಿನ ಷರತ್ತುಬದ್ಧ ಪೆರೋಲ್ ಮೇಲೆ ಬಿಡುಗಡೆ ಮಾಡಬೇಕು ಎಂದು ಪೀಠ ನಿರ್ದೇಶನ ನೀಡಿದೆ.

ಪೆರೋಲ್ ಅವಧಿಯಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಬಾರದು. ಆತ ಪೆರೋಲ್ ಮುಗಿಸಿ, ಕಾರಾಗೃಹಕ್ಕೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ಮುಖ್ಯ ಅಧೀಕ್ಷಕರು ಅಗತ್ಯ ಷರತ್ತು ವಿಧಿಸಬಹುದು. ಆ ಷರತ್ತು ಉಲ್ಲಂಘಿಸಿದರೆ, ಪೆರೋಲ್ ಮಂಜೂರಾತಿ ಆದೇಶ ತನ್ನಿಂದ ತಾನೇ ರದ್ದಾಗುತ್ತದೆ. ಚಂದ್ರ ಪ್ರತಿ ವಾರದ ಮೊದಲ ದಿನದಂದು ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗಬೇಕು ಎಂಬ ಷರತ್ತುಗಳನ್ನು ವಿಧಿಸಿದೆ. ಅರ್ಜಿದಾರರಿಗೆ 2014ರ ಡಿ.23ರಂದು ರಾಮನಗರ ಜಿಲ್ಲೆ ಕನಕಪುರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದರು.

ಅರ್ಜಿದಾರರ ವಾದವೇನಿತ್ತು ?

ಅರ್ಜಿದಾರರು ನನ್ನ ತಂದೆಗೆ 78 ರ ವಯಸ್ಸಾಗಿದೆ. ಈಗಾಗಲೇ ದೈಹಿಕ ದುರ್ಬಲತೆ ಎದುರಿಸುತ್ತೀರುವ ಅವರಿಗೆ ಜಮೀನಿನಲ್ಲಿ ಕೃಷಿ ಚಟುವಟಿಕೆ ನೋಡಿಕೊಳ್ಳಲು ಕಷ್ಟ ಸಾಧ್ಯ. ನಮ್ಮ ಕುಟುಂಬದಲ್ಲಿ ಬೇರಾವ ಸದಸ್ಯನೂ ಇಲ್ಲ. ಕೃಷಿ ಒಂದು ಪವಿತ್ರ ಕೆಲಸ. ಹೀಗಾಗಿ ತಂದೆ ಹೆಸರಿನಲ್ಲಿರುವ ಜಮೀನಿನಲ್ಲಿ ಕೃಷಿ ಚಟುವಟಿಕೆ ನೋಡಿಕೊಳ್ಳಲು 90 ದಿನ ಕಾಲ ಪೆರೋಲ್ ನೀಡಬೇಕು ಎಂದು ಕೋರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net