

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಸಂಸತ್ ಅಧಿವೇಶನ ಅವಧಿಗೂ ಮುನ್ನವೇ ಮುಗಿಯಲಿದೆಯೇ?
- ಹೀಗೊಂದು ಚರ್ಚೆ ಈಗಾಗಲೇ ಶುರುವಾಗಿದ್ದು, ಸಂಸತ್ ಅಧಿವೇಶನವನ್ನು ಮೊಟಕುಗೊಳಿಸಲಿರುವ ಬಗ್ಗೆ ಮಾತುಗಳು ಕೇಳಿಬರಲಾರಂಭಿಸಿವೆ.
ಬಹಳಷ್ಟು ಸಚಿವರು, ಸಂಸದರು ಈಗಾಗಲೇ ಕರೊನಾ ಬಾಧಿತರಾಗಿದ್ದು, ಅಧಿವೇಶನವನ್ನು ಮೊಟಕುಗೊಳಿಸುವ ಬಗ್ಗೆ ರಾಜಕೀಯ ಪಕ್ಷಗಳ ನಡುವೆ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ.
ಸೆ. 14ರಂದು ಆರಂಭವಾಗಿರುವ ಅಧಿವೇಶನ ಸದ್ಯದ ವೇಳಾಪಟ್ಟಿ ಪ್ರಕಾರ ಅ. 1ರವರೆಗೂ ನಡೆಯಲಿದೆ. ಆದರೆ ಹಿರಿಯ ಮುಖಂಡರಾದ ಅಮಿತ್ ಷಾ, ನಿತಿನ್ ಗಡ್ಕರಿ ಅವರನ್ನೊಳಗೊಂಡಂತೆ ಸುಮಾರು 30 ಸಚಿವರು-ಸಂಸದರು ಸೋಂಕಿಗೆ ಒಳಗಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಹೀಗಾಗಿ ಅಂದುಕೊಂಡಿದ್ದ ಸಮಯಕ್ಕೂ ಮೊದಲೇ ಅಧಿವೇಶನ ಮುಗಿಸಲಿರುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂಬ ಮಾಹಿತಿ ಸಂಸತ್ ಅಂಗಳದಲ್ಲಿ ಹರಿದಾಡುತ್ತಿದೆ. (ಏಜೆನ್ಸೀಸ್)