

ನವದೆಹಲಿ: ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ವಲಯದಲ್ಲಿ ವ್ಯವಹಾರವನ್ನು ಸುಲಭಗೊಳಿಸುವ ಉದ್ದೇಶದಿಂದ ಸರ್ಕಾರ ಮಂಡಿಸಿರುವ ಹೊಸ ಮಸೂದೆಗೆ ಸಂಸತ್ತು ಗುರುವಾರ ಅಂಗೀಕಾರ ನೀಡಿದೆ. 90 ವರ್ಷಗಳಷ್ಟು ಹಳೆಯದಾದ ಏರ್ಕ್ರಾಫ್ಟ್ ಕಾಯ್ದೆ ಈ ಮೂಲಕ ಬದಲಾಗಲಿದೆ.
ಭಾರತೀಯ ವಾಯುಯಾನ ವಿಧೇಯಕ- 2024 ಅನ್ನು ರಾಜ್ಯಸಭೆಯಲ್ಲಿ ಧ್ವನಿ ಮತದಿಂದ ಅಂಗೀಕರಿಸಲಾಯಿತು. ಕಳೆದ ಆಗಸ್ಟ್ 9ರಂದು ಲೋಕಸಭೆಯಲ್ಲಿ ಈ ಮಸೂದೆಯನ್ನು ಅಂಗೀಕ ರಿಸಲಾಗಿತ್ತು. ವಿಮಾನಯಾನ ಸುರಕ್ಷತೆ, ನಿಯಂತ್ರಕ ಮೇಲ್ವಿಚಾರಣೆ ಮತ್ತು ಗ್ರಾಹಕರ ರಕ್ಷಣೆಯನ್ನು ಹೆಚ್ಚಿಸುವುದರ ಜತೆಗೆ ಅಂತಾರಾಷ್ಟ್ರೀಯ ಮಾನದಂಡಗಳನ್ನು ಜಾರಿಗೆ ತರುವುದು ಈ ಮಸೂದೆ ಉದ್ದೇಶವಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಹೇಳಿದ್ದಾರೆ. ವಿಮಾನ ಉತ್ಪಾದನೆಯಲ್ಲಿ ಸ್ವಾವಲಂಬನೆ, ಈ ಕ್ಷೇತ್ರದಲ್ಲಿ ಹೂಡಿಕೆಗೆ ಉತ್ತೇಜನ ನೀಡುವುದು ಈಗಿನ ಅಗತ್ಯವಾಗಿದೆ. ಉಡಾನ್ ಯೋಜನೆಯಡಿ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ವಿಮಾನ ಪ್ರಯಾಣ ಮಾಡಲು ಸರ್ಕಾರ ಅನುಕೂಲ ಕಲ್ಪಿಸಿದೆ. ಹೆಚ್ಚಿನ ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸಲು ಸ್ಥಳೀಯ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಹಿಂದಿ ಪ್ರತಿಗೆ ವಿರೋಧ: ಮಸೂದೆಯ ಶೀರ್ಷಿಕೆಯನ್ನು ಇಂಗ್ಲಿಷ್ನಿಂದ ಹಿಂದಿಗೆ ಬದಲಾಯಿಸಲಾಗಿದೆ. ಮಸೂದೆ ಹೆಸರನ್ನು ಹಿಂದಿಯಲ್ಲಿ ಉಚ್ಚರಿಸಲು ಕಷ್ಟವಾಗುತ್ತದೆ. ಇದು ಹಿಂದಿ ಹೇರಿಕೆ ಎಂದು ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಭಾರತದ ಪರಂಪರೆ ಮತ್ತು ಸಂಸ್ಕೃತಿ ಗಮನದಲ್ಲಿ ಇಟ್ಟುಕೊಂಡು ಹೀಗೆ ಮಾಡಲಾಗಿದೆ. ಇದರಲ್ಲಿ ಸಾಂವಿಧಾನಿಕ ನಿಯಮದ ಉಲ್ಲಂಘನೆ ಆಗಿಲ್ಲ ಎಂದು ಸಚಿವ ಕೆ. ರಾಮಮೋಹನ್ ನಾಯ್ಡು ಪ್ರತಿಕ್ರಿಯೆ ನೀಡಿದರು.
ಮೋದಿ-ಅದಾನಿ ಏಕ್ ಹೈ!: ಇಂಡಿಯಾ ಒಕ್ಕೂಟ ಪಕ್ಷಗಳ ನಾಯಕರು ಸಂಸತ್ ಆವರಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಕಪ್ಪು ಜಾಕೆಟ್ಗಳನ್ನು ಧರಿಸಿ, ಅವುಗಳ ಮೇಲೆ ‘ಮೋದಿ ಅದಾನಿ ಏಕ್ ಹೈ’ ಮತ್ತು ‘ಅದಾನಿ ಸೇಫ್ ಹೈ’ ಎಂಬ ಸ್ಟಿಕರ್ಗಳನ್ನು ಅಂಟಿಸಿ, ಘೊಷಣೆಗಳನ್ನು ಕೂಗಿದರು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ನ ಅನೇಕ ಸಂಸದರು, ಆರ್ಜೆಡಿ ಮತ್ತು ಎಡಪಕ್ಷಗಳ ಸಂಸದರು ಪ್ರತಿಭಟನೆಯಲ್ಲಿದ್ದರು. ಅದಾನಿ ಸಮೂಹದ ವಿರುದ್ಧ ಅಮೆರಿಕ ನ್ಯಾಯಾಲಯದಲ್ಲಿ ಕೇಳಿ ಬಂದಿರುವ ಲಂಚ ಮತ್ತು ವಂಚನೆ ಆರೋಪದ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯಬೇಕು. ಪ್ರಧಾನಿ ನರೇಂದ್ರ ಮೋದಿ ಈ ವಿಷಯದ ಬಗ್ಗೆ ಸದನದಲ್ಲಿ ಹೇಳಿಕೆ ನೀಡಬೇಕು ಎಂದು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಒತ್ತಾಯಿಸಿದರು.
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಸರ್ಕಾರ ಸ್ಪಷ್ಟನೆ ಸಂಪೂರ್ಣ, ಸ್ಪರ್ಧಾತ್ಮಕ ಮತ್ತು ಪಾರದರ್ಶಕ ಪ್ರಕ್ರಿಯೆಯ ಮೂಲಕ ಆರು ವಿಮಾನ ನಿಲ್ದಾಣಗಳನ್ನು ಅದಾನಿ ಸಮೂಹಕ್ಕೆ ಗುತ್ತಿಗೆ ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿಕೆ. ಲಖನೌ, ಅಹಮದಾಬಾದ್, ಮಂಗಳೂರು, ಜೈಪುರ, ಗುವಾಹಟಿ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳನ್ನು ಅದಾನಿ ಸಮೂಹ ಗುತ್ತಿಗೆ ಪಡೆದುಕೊಂಡಿದೆ.