ಗೋರಿಯೋ? ದೇವಾಲಯವೋ?; ಇದೇ 31ರಂದು ತೆರೆಗೆ ಬರಲಿದೆ "ದ ತಾಜ್​ ಸ್ಟೋರಿ'

asascsac
Published on

ತಾಜ್​ ಮಹಲ್​. ವಿಶ್ವದ ಏಳು ಅದ್ಭುತಗಳಲ್ಲೊಂದು. ಮೊಘಲ್​ ದೊರೆ ಶಹ್​ ಜಹಾನ್​, ತನ್ನ ಪತ್ನಿ ಮುಮ್ತಾಜ್​ಗಾಗಿ ಕಟ್ಟಿಸಿದ ಪ್ರೀತಿಯ ಪ್ರತೀಕ. ಆದರೆ, ಅದು ತೇಜೋ ಮಹಾಲಯ ಎಂಬ ಶಿವನ ದೇವಾಲಯ ಎಂಬ ಮಾತುಗಳೂ ಇತ್ತೀಚಿನ ವರ್ಷಗಳಲ್ಲಿ ಕೇಳಿಬಂದಿದೆ. ಐತಿಹಾಸಿಕವಾಗಿ ಯಾವುದೇ ಪುರಾವೆ ಸಿಕ್ಕಿಲ್ಲವಾದರೂ, ಅದರ ಬಗ್ಗೆ ತನಿಖೆ ಆಗಬೇಕು ಎಂಬ ಕೂಗು ಕೂಡ ಇದೆ. ಈ ಹಗ್ಗಜಗ್ಗಾಟದ ನಡುವೆಯೇ "ದ ತಾಜ್​ ಸ್ಟೋರಿ' ಎಂಬ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ.

ತುಷಾರ್​ ಅಮರೀಷ್​ ಗೋಯಲ್​ ನಿರ್ದೇಶನದ ಈ ಚಿತ್ರದಲ್ಲಿ ಪರೇಶ್​ ರಾವಲ್​, ಅಮೃತಾ ಖನ್ವಿಲ್ಕರ್​, ನಮಿತ್​ ದಾಸ್​, ಸ್ನೇಹಾ ವಾಘ್​ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಚಿತ್ರತಂಡ ಬಿಡುಗಡೆ ಮಾಡಿದ್ದ ಪೋಸ್ಟರ್​ನಲ್ಲಿ, ಪರೇಶ್​ ರಾವಲ್​ ತಾಜ್​ ಗುಮ್ಮಟವನ್ನು ತೆಗೆದಿರುವಂತೆ, ಅದರೊಳಗೆ ಶಿವನ ಮೂರ್ತಿ ಬಂದಂತೆ ಚಿತ್ರಿಸಲಾಗಿತ್ತು. ಅದರ ಬಗ್ಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಚಿತ್ರತಂಡ ಆ ಪೋಸ್ಟರ್​ಅನ್ನು ಡಿಲೀಟ್​ ಮಾಡಿ, ಐತಿಹಾಸಿಕ ಸತ್ಯಗಳ ಸುತ್ತ ಚಿತ್ರದ ಕಥೆ ಮಾಡಲಾಗಿದ್ದು, ಸಿನಿಮಾ ನೋಡಿ ಬಳಿಕ ಅಭಿಪ್ರಾಯ ತಿಳಿಸಿ ಎಂದು ಮನವಿ ಮಾಡಿಕೊಂಡಿತ್ತು. ಅದರ ಬೆನ್ನಲ್ಲೇ ಇತ್ತೀಚೆಗಷ್ಟೆ "ದ ತಾಜ್​ ಸ್ಟೋರಿ' ಟೀಮ್​ ಟೀಸರ್​ ರಿಲೀಸ್​ ಮಾಡಿದೆ.

ಇದರಲ್ಲಿ "ತಾಜ್​ ಮಹಲ್​ ಏಳು ಅದ್ಭುತಗಳಲ್ಲೊಂದು. ಕೆಲವರಿಗೆ ಇದು ಗೋರಿ, ಇನ್ನು ಕೆಲವರಿಗೆ ದೇವಸ್ಥಾನ. ಹಾಗಾದರೆ ಇದರ ಕಥೆ ಏನಿರಬಹುದು?' ಎಂದು ಸಂಭಾಷಣೆ ಇದ್ದು ಸದ್ಯ ಮತ್ತೆ ವಿವಾದಕ್ಕೀಡಾಗಿದೆ. ಅಂದಹಾಗೆ, ಸಿನಿಮಾ ಇದೇ ಅ.31ರಂದು ರಿಲೀಸ್​ ಆಗಲಿದೆ. -ಏಜೆನ್ಸೀಸ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net