

ಅರಸೀಕೆರೆ ಗ್ರಾಮಾಂತರ : ಮಹಿಳೆಯರು ಧರ್ಮ ಹಾಗೂ ಸಂಸ್ಕೃತಿಯನ್ನು ಸಂರಕ್ಷಿಸಿ ಬೆಳೆಸುವ ನಿಟ್ಟಿನಲ್ಲಿ ಮಕ್ಕಳಿಗೆ ಮಾನವೀಯ ಮೌಲ್ಯ, ಉತ್ತಮ ಸಂಸ್ಕಾರವನ್ನು ನೀಡುವ ಮೂಲಕ ಸುಸಂಸ್ಕೃತ ಪ್ರಜೆಯನ್ನಾಗಿ ರೂಪಿಸಬೇಕು ಎಂದು ತಾಲೂಕಿನ ಮಾಡಾಳು ಗ್ರಾಮದ ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿ ಸಲಹೆ ನೀಡಿದರು.
ತಾಲೂಕಿನ ಮಾಲೇಕಲ್ಲು ತಿರುಪತಿ ಸನ್ನಿಧಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಶ್ರೀ ಶ್ರೀನಿವಾಸ ಕಲ್ಯಾಣ ಪೂಜಾ ಸಮಿತಿ, ಪ್ರಗತಿ ಬಂಧು ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಅಭಿವೃದ್ಧಿ ಜತೆಗೆ ಮಹಿಳೆಯರೇ ಆರ್ಥಿಕ ಸಬಲೀಕರಣಕ್ಕೆ ಪ್ರಾಮುಖ್ಯತೆಯನ್ನು ನೀಡಿ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಸಮಾಜಮುಖಿ, ಸೇವಾ ಸತ್ಕಾರ್ಯಗಳನ್ನು ಮಾಡುವ ಮೂಲಕ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಧಾರ್ಮಿಕವಾಗಿ ಜಾಗೃತಿ ಮೂಡಿಸುವ ಕಾರ್ಯವನ್ನು ಯಶಸ್ವಿಯಾಗಿ ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆ ಜಿಲ್ಲಾ ನಿರ್ದೇಶಕ ಸುರೇಶ್‌ಮೊಯ್ಲಿ ಮಾತನಾಡಿ, ಡಾ. ವೀರೇಂದ್ರ ಹೆಗ್ಗಡೆಯವರು ಅನೇಕ ವಿಶಿಷ್ಟ ಯೋಜನೆಗಳನ್ನು ರೂಪಿಸಿದ್ದಾರೆ. ದೇಗುಲ ಆವರಣ ಸ್ವಚ್ಛತೆ, ಕೆರೆ ಕಟ್ಟೆಗಳ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ಸೌಲಭ್ಯ, ಶೈಕ್ಷಣಿಕ ಕ್ಷೇತ್ರಕ್ಕೆ ಆರ್ಥಿಕ ನೆರವು, ಆರ್ಥಿಕ ದುರ್ಬಲರಿಗೆ, ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೇರವು ನೀಡುವುದು ಸೇರಿದಂತೆ ಅನೇಕ ಸೇವಾ ಯೋಜನೆಗಳನ್ನು ಕೈಗೊಂಡಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಂಡು ತಾವು ತಮ್ಮ ಕುಟುಂಬದ ಆರ್ಥಿಕ ಅಭಿವೃದ್ಧಿ ಜತೆಗೆ ಗ್ರಾಮದ ಸಮಗ್ರ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಾಲೇಕಲ್ಲು ಅಭಿವೃದ್ಧಿ ಸಮಿತಿಯ ಸಂಚಾಲಕ ಟಿ.ಆರ್.ನಾಗರಾಜ್, ತಾಲೂಕು ಯೋಜನಾಧಿಕಾರಿ ಅಕ್ಷತಾ ರೈ, ಶ್ರೀನಿವಾಸ ಕಲ್ಯಾಣ ಪೂಜಾ ಸಮಿತಿ ಅಧ್ಯಕ್ಷ ಕಲ್ಲೇಶ್, ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಮುರುಂಡಿ ಕೇಶವ ಪ್ರಸಾದ್, ಸೀತಾರಾಮ್, ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಸದಸ್ಯರು ಇದ್ದರು.