ಮಕ್ಕಳ ಆಸಕ್ತಿಗೆ ತಕ್ಕಂತೆ ಪಾಲಕರ ಪ್ರೋತ್ಸಾಹ ಅಗತ್ಯ

8KMD-1
Published on

ಕೆ.ಎಂ.ದೊಡ್ಡಿ: ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಆ ಕ್ಷೇತ್ರದಲ್ಲೇ ಮುಂದುವರಿಯಲು ಪಾಲಕರು ಪೋತ್ಸಾಹಿಸಬೇಕು ಎಂದು ರಾಷ್ಟ್ರಮಟ್ಟದ ಈಜುಪಟು ಡಾ.ಉತ್ತರೆ ಕಿವಿಮಾತು ಹೇಳಿದರು.

ಮೆಣಸಗೆರೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜ್ಞಾನ ಮುದ್ರಾ ವಿದ್ಯಾಮಂದಿರದ ಆವರಣದಲ್ಲಿ ಆಯೋಜಿಸಿದ್ದ ಚಿಕ್ಕರಸಿನಕೆರೆ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಹಳ್ಳಿಯೊಂದರಲ್ಲಿ ಹುಟ್ಟಿದ ನಾನು 3 ವರ್ಷದವಳಾಗಿದ್ದಾಗಲೇ ಈಜಿನಲ್ಲಿ ಆಶಕ್ತಿ ಇತ್ತು. ನನ್ನ ಪಾಲಕರ ಪ್ರೋತ್ಸಾಹದಿಂದ ರಾಷ್ಟ್ರ ಮಟ್ಟದ ಈಜುಪಟು ಆಗಿ ಹೊರ ಹೊಮ್ಮಲು ಸಾಧ್ಯವಾಯಿತು. ಪಾಲಕರು ಪ್ರೋತ್ಸಾಹ ನೀಡಿದರೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಶಾಲಾ ಅಡಳಿತ ಮಂಡಳಿ ಸಹ ಮಕ್ಕಳಿಗೆ ಯಾವ ಕ್ರೀಡೆಯಲ್ಲಿ ಆಸಕ್ತಿ ಇರುತ್ತದೋ ಆ ಕ್ರೀಡೆಯಲ್ಲಿ ಪ್ರೇರಣೆ ನೀಡಬೇಕು. ಇತ್ತೀಚೆಗಷ್ಟೇ ಐಪಿಎಲ್ ಕ್ರಿಕೆಟ್‌ನಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ ಪ್ರಪಂಚವೇ ತನ್ನತ್ತ ತಿರುಗುವಂತೆ ಮಾಡಿದ್ದು ತಮಗೆ ಗೊತ್ತಿದೆ ಎಂದು ಮಕ್ಕಳಲ್ಲಿ ಹುರಿದುಂಬಿಸಿದರು.

ನಂತರ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಧನಂಜಯ್ ಮಾತನಾಡಿ, ಪ್ರತಿಭೆ ಎಲ್ಲ ಮಕ್ಕಳಲ್ಲೂ ಇರುತ್ತದೆ. ಅದನ್ನು ಗುರುತಿಸಿ ಹೊರತರುವುದು ಪಾಲಕರು ಹಾಗೂ ಶಿಕ್ಷಕರ ಕರ್ತವ್ಯ ಎಂದರು.

ವಿದ್ಯಾರ್ಥಿಗಳು ಚಿಕ್ಕಂದಿನಿಂದ ಶಾಲೆಗಳಲ್ಲಿ ಆಯೋಜಿಸುವ ಕ್ರೀಡೆಯಲ್ಲಿ ಭಾಗವಹಿಸಿ ಹಂತ-ಹಂತವಾಗಿ ಯಶ್ವಸಿಗೊಳ್ಳಬೇಕೆಂಬ ದೃಷ್ಟಿಯಿಂದ ಶಿಕ್ಷಣ ಇಲಾಖೆ ಇಂತಹ ಕಾರ್ಯಕ್ರಮ ಅಯೋಜನೆ ಮಾಡುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಕ್ರೀಡೆಯಲ್ಲಿನ ಸೋಲು, ಗೆಲುವನ್ನು ಗಂಭೀರವಾಗಿ ಪರಿಗಣಿಸದೆ ಸ್ಪರ್ಧಾತ್ಮಕವಾಗಿ ಪಾಲ್ಗೊಳ್ಳಬೇಕು ಎಂದರು.

ಮಕ್ಕಳು ಕ್ರೀಡೆಯಲ್ಲಿ ಹಂತ, ಹಂತವಾಗಿ ಸಾಧನೆ ಮಾಡಬೇಕು. ಇದಕ್ಕೆ ಕಠಿಣ ಅಭ್ಯಾಸ, ನಿಯಮಿತ ವ್ಯಾಯಾಮ ಮುಖ್ಯ. ಸೋತವರು ಕುಗ್ಗದೆ ಗೆದ್ದವರು ಹಿಗ್ಗದೆ ಸೋಲೇ ಗೆಲುವಿನ ಮೆಟ್ಟಿಲು ಎಂದು ಮುನ್ನುಗಬೇಕು ಎಂದು ಸಲಹೆ ನೀಡಿದರು.

ಸಂಸ್ಥೆಯ ಕಾರ್ಯದರ್ಶಿ ಶಿವಮ್ಮ ಶಿವಕುಮಾರ್, ಟ್ರಸ್ಟಿ ತೇಜಸ್ವಿನಿ ತಿಪ್ಪೂರೇಗೌಡ, ಆಡಳಿತಾಧಿಕಾರಿ ಪ್ರಭಾ ಸುರೇಶ್, ಮುಖ್ಯ ಶಿಕ್ಷಕಿ ಕೆ.ಎಸ್.ಶ್ರುತಿ, ದೈಹಿಕ ಶಿಕ್ಷಣ ಶಿಕ್ಷಕ ಮನು, ವಿಶ್ರಾಂತ ಪ್ರಾಧ್ಯಾಪಕ ಬಿ.ಎಸ್ ಬೋರೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಮ್ಮ, ಶಿಕ್ಷಣ ಸಂಯೋಜಕ ರಮೇಶ್, ಸಮೂಹ ಸಂಪನ್ಮೂಲ ವ್ಯಕ್ತಿ ನಂದೀಶ್, ಬೋರಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net