ಕೆನಡಾದ ಭಾರತೀಯ ಹೈಕಮಿಷನರ್ ಬಂಧಿಸಿದ್ರೆ 1 ಲಕ್ಷ ಡಾಲರ್: ಖಲಿಸ್ತಾನ್ ಉಗ್ರ ಪನ್ನು ಉದ್ಧಟತನ

pannu
Published on

ನವದೆಹಲಿ: ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕರ ವಿರುದ್ಧ ‘ಸಿಖ್ ಫಾರ್ ಜಸ್ಟಿಸ್’ ಖಲಿಸ್ತಾನ್ ಸಂಘಟನೆಯ ಗುರುಪತ್ವಂತ್ ಸಿಂಗ್ ಪನ್ನು ಪ್ರಚೋದನಕಾರಿ ಹೇಳಿಕೆ ನೀಡಿದ್ದಾನೆ. ಭಾರತೀಯ ಹೈಕಮಿಷನರ್ ಸಂಜಯ್ ವರ್ಮಾ ಅವರನ್ನು ಯಾವುದೇ ನಾಗರಿಕ ಬಂಧಿಸಿದರೆ 1 ಲಕ್ಷ ಡಾಲರ್ ನೀಡುವುದಾಗಿ ಘೋಷಿಸಿದ್ದಾನೆ.

ಈ ಸಂಬಂಧ ವೀಡಿಯೋ ಮಾಡಿ, ಕೆನಡಾದ ಭಾರತೀಯ ರಾಜತಾಂತ್ರಿಕ ಮುಖ್ಯಸ್ಥರನ್ನು ಬಂಧಿಸಿದ ನಾಗರಿಕನಿಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಖಲಿಸ್ತಾನ್ ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ನ.19 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ ಫೈನಲ್‌ನಲ್ಲಿ ಭಾಗವಹಿಸುವುದಕ್ಕೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬಾರದು, ಒಂದು ವೇಳೆ ಪ್ರಯಾಣಿಸಿದರೆ ಆಗುವ ಅನಾಹುತಕ್ಕೆ ನೀವೇ ಹೊಣೆ ಎಂದು ಪನ್ನು ಬೆದರಿಕೆ ಒಡ್ಡಿದ್ದನು.

ಈ ವೀಡಿಯೊ ಕಾಣಿಸಿಕೊಂಡ ನಂತರ ಕೆನಡಾ ಸರ್ಕಾರವು ಇದರ ತನಿಖೆ ಮಾಡಲು ಪೊಲೀಸರಿಗೆ ಆದೇಶಿಸಿದ್ದರು. ಆದರೆ ಈಗ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ತನಿಖೆಯಿಂದ ಗಮನವನ್ನು ಬೇರೆಡೆ ಸೆಳೆಯಲು ಭಾರತ ನಾಟಕವಾಡುತ್ತಿದೆ ಎಂದು ಪನ್ನು ಹೇಳಿದ್ದಾನೆ,

ಭಾರತೀಯ ಹೈಕಮಿಷನರ್ ಸಂಜಯ್ ವರ್ಮಾ ಅವರು ಐಸಿಸಿ ವಿಶ್ವಕಪ್ ಫೈನಲ್‌ನ ಪಂದ್ಯ ನಡೆಯಲಿರುವ ನವೆಂಬರ್ 19 ರಂದು ಏರ್ ಇಂಡಿಯಾ ವಿಮಾನಗಳಿಗೆ ಭಯೋತ್ಪಾದಕರ ಬೆದರಿಕೆ ಇದೆ ಎಂದು ಸುಳ್ಳು ವದಂತಿಗಳನ್ನು ಹರಡಿದ್ದರು. ಏಕೆಂದರೆ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಹೈಕಮಿಷನ್ ಪ್ರಮುಖ ಪಾತ್ರ ವಹಿಸಿದೆ. ಕೆನಡಾದ ಸಿಖ್ಖರ ವಿರುದ್ಧ ವಿಶ್ವದೆಲ್ಲೆಡೆ ದ್ವೇಷ ಹರಡುವುದಾಗಿದೆ ಎಂದು ಪನ್ನು ಹೇಳಿಕೊಂಡಿದ್ದಾನೆ.

ಭಾರತೀಯ ಹೈಕಮಿಷನರ್ ವರ್ಮಾ ಅವರನ್ನು ಬಂಧಿಸುವಂತೆ ಒತ್ತಾಯಿಸಿರುವ ಪನ್ನು, ಕೆಲವು ದೇಶಗಳಲ್ಲಿ, ಪ್ರಾಚೀನ ಕಾಲದಿಂದಲೂ ಯಾವುದೇ ನಾಗರಿಕನು ಇನ್ನೊಬ್ಬ ನಾಗರಿಕ ಬಂಧಿಸಬಹುದಾದ ಕಾನೂನಿದೆ. ಬಂಧನವನ್ನು ಮಾಡುವ ನಾಗರಿಕ ಯಾವುದೇ ಪೊಲೀಸ್ ಅಥವಾ ಕಾನೂನು ಏಜೆನ್ಸಿಯಿಂದ ಬಂದವನಾಗಿರುವುದಿಲ್ಲ, ಯಾರಾದರೂ ಕಾನೂನು ಉಲ್ಲಂಘಿಸುವುದು ಅಥವಾ ಅಪರಾಧ ಮಾಡುವುದನ್ನು ಆತ ನೋಡಿದರೆ, ಅಂತಹವನನ್ನು ಬಂಧಿಸಬಹುದು. ಯಾರಾದರೂ ಅನಗತ್ಯವಾಗಿಕಾನೂನುಗಳ ಲಾಭವನ್ನು ಪಡೆದರೆ, ಅವರು ಹೆಚ್ಚಿನ ಮೊಕದ್ದಮೆಗಳು ಅಥವಾ ಕ್ರಿಮಿನಲ್ ಆರೋಪಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಸಂಜಯ್ ವರ್ಮಾ ರನ್ನು ಬಂಧಿಸಿದರೆ ತಾನು ನಗದು ನೀಡುವುದಾಗಿ ಘೋಷಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net