

ನವದೆಹಲಿ: ಪಾನಿಪುರಿ(Panipuri) ತಯಾರಿಕೆಯ ಬಗ್ಗೆ ಎಷ್ಟೇ ಟೀಕೆಗಳು ಬಂದರೂ, ಅನೈರ್ಮಲ್ಯವಿದ್ದರೂ ಅದನ್ನು ತಿನ್ನದೇ ಇರಲಾರರು. ಪಾನಿಪುರಿ ಮೇಕಿಂಗ್ ಬಗ್ಗೆ ಶಾಕಿಂಗ್ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಆದರೆ ಇವೆಲ್ಲಕ್ಕಿಂತ ಹೊಸದಾಗಿ ಬಿಡುಗಡೆಯಾಗಿರುವ ವಿಡಿಯೋ ಆಘಾತಕಾರಿಯಾಗಿದೆ. ವೀಡಿಯೋ ನೋಡಿದ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ಆ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.
ಜಾರ್ಖಂಡ್‌ನ ಗರ್ವಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಇಬ್ಬರು ಪಾನಿಪುರಿಗಳನ್ನು ಮಾಡುವ ಮೊದಲು ಹಿಟ್ಟನ್ನು ಕಾಲಿನಿಂದ ತುಳಿಯುತ್ತಿದ್ದಾರೆ. ಅದೇ ಕುಟುಂಬದ ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.
ಪಾನಿಪುರಿ ಮಾರುವ ಅರವಿಂದ್ ಯಾದವ್ ತನ್ನ ಸೋದರಳಿಯ ಯಾದವ್ ಜೊತೆ ಜಗಳ ಮಾಡಿಕೊಂಡಿದ್ದ. ಹೊಡೆದಾಟದ ನಂತರ ಯಾದವ್ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳೀಯ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಅರವಿಂದ್ ಯಾದವ್ ಮತ್ತು ಅವರ ಸಹಾಯಕ ಸತೀಶ್ ಅವರನ್ನು ಬಂಧಿಸಿದ್ದಾರೆ.
ಪೊಲೀಸರ ತನಿಖೆಯಲ್ಲಿ ಇನ್ನಷ್ಟು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಪಾನಿಪುರಿ ರುಚಿ ಹೆಚ್ಚಿಸಲು ಹಿಟ್ಟಿನಲ್ಲಿ ಯೂರಿಯಾ ಮತ್ತು ಹಾರ್ಪಿಕ್ ಬೆರೆಸಿದ್ದಾಗಿ ಅರವಿಂದ್ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಇವರಿಂದ ಹರಳೆಣ್ಣೆಯನ್ನು ಹೋಲುವ ಬಿಳಿ ದ್ರವದ ಬಾಟಲ್ವವೊಂದನ್ನೂ ಪೊಲೀಸರು ಪತ್ತೆ ಮಾಡಿದ್ದಾರೆ. ಅದನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಇವರ ಪಾನಿಪುರಿ ತಯಾರಿಕಾ ಕೇಂದ್ರವನ್ನು ಸೀಲ್ ಮಾಡಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸ್ಥಳೀಯರು ಅಲ್ಲಿಗೆ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ.
ಎಲ್ಲೆಡೆ ಪಾನಿಪುರಿಗೆ ಹೀಗೆಯೇ ಮಾಡುತ್ತಾರೆಂದು ಹೇಳಲಿಕ್ಕಾಗದು. ಆದರೆ ಹುಣಸೆ ಹಣ್ಣಿಗೆ ಬದಲಾಗಿ ಆಸಿಡ್, ಟೇಸ್ಟೀ ಪೌಡರ್ಗಳಲ್ಲಿ ಕೆಮಿಕಲ್ಸ್ ಬಳಕೆ ಕರ್ನಾಟಕದಲ್ಲಿಯೂ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಬಾಯಿ ಚಪಲಕ್ಕಾಗಿ ಪಾನಿಪುರಿ ಸೇರಿದಂತೆ ಬೀದಿಬದಿ ಆಹಾರ ಸೇವಿಸುವುದಕ್ಕಿಂತ ಮುನ್ನ ಜಾಗೃತರಾಗಿರುವುದು ಒಳಿತು.