

ಚಿಕ್ಕಮಗಳೂರು: ಮಲ್ಲೇನಹಳ್ಳಿ ಕುಮಾರಗಿರಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಮಾ.23ರಿಂದ 25ರವರೆಗೆ ಪಂಗುನಿ ಉತ್ತಿರ ಜಾತ್ರೆ ಹಾಗೂ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ದೇವಸ್ಥಾನದ ಧರ್ಮದರ್ಶಿ ಮಂಡಳಿ ಪ್ರಧಾನ ಕಾರ್ಯದರ್ಶಿ ಎಸ್.ವಿಜಯಕುಮಾರ್ ತಿಳಿಸಿದರು.
ಮಾ.23ರಂದು ಬೆಳಗ್ಗೆ ಅಭಿಷೇಕ, ಅಲಂಕಾರ, ಧ್ವಜಾರೋಹಣ ಹಾಗೂ ಕಂಕಣಧಾರಣೆ ನಡೆಯಲಿದೆ. 24ರಂದು ಬೆಳಗ್ಗೆ 9ರಿಂದ ದೇವರಿಗೆ ಅಭಿಷೇಕ, ಅಲಂಕಾರ, ಉತ್ಸವ ಮೂರ್ತಿ ಮೆರವಣಿಗೆ ದೇವಾಲಯದಿಂದ ಹೊರಟು ಮಲ್ಲೇನಹಳ್ಳಿ, ಬಾವಿಕಟ್ಟೆ, ಹೆಬ್ಬಳ್ಳಿ, ಮಾವಿನಹಳ್ಳ, ಅರಿಶಿಣಗುಪ್ಪೆ, ದಾಸರಹಳ್ಳಿ, ಕೈಮರದಿಂದ ಅತ್ತಿಗಿರಿ ತಲುಪಿ ಪುನಃ ಕಂಬಿಹಳ್ಳಿ ಶಾಂತಿಪುರ, ಕಬ್ಬಿಣಸೇತುವೆ, ಹೊಸಪೇಟೆ, ಗುಡ್ಡೇನಹಳ್ಳಿ, ಅರವಿಂದನಗರ, ನೀರುಗಂಡಿ, ಎಮ್ಮೆಖಾನೆ, ಭಕ್ತರಹಳ್ಳಿ ಮೂಲಕ ಸ್ವಾಮಿಯ ಸನ್ನಿಧಿ ತಲುಪಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
25ರಂದು ಪಂಗುನಿ ಉತ್ತಿರ ಜಾತ್ರೆ ಕಾವಡಿ ಸಮರ್ಪಣೆ. ಶ್ರೀ ಸುಬ್ರಹ್ಮಣ್ಯ ಸ್ವಾಮಿ ಹಾಗೂ ವಳ್ಳಿ ದೇವಾನೆರವರ ಕಲ್ಯಾಣೋತ್ಸವ ಮತ್ತು ಸರಳ ಸಾಮೂಹಿಕ ವಿವಾಹವನ್ನು ಹಿರೇಮಗಳೂರು ಕಣ್ಣನ್ ಮತ್ತು ತಂಡ ನಡೆಸಿಕೊಡಲಿದೆ. ಈಗಾಗಲೇ 6 ಜೋಡಿಗಳ ಹೆಸರು ನೋಂದಾಯಿಸಿದ್ದು, ಇನ್ನು ಆರು ಜೋಡಿಗಳು ನೋಂದಣಿ ಮಾಡಿಕೊಳ್ಳುವ ನಿರೀಕ್ಷೆಯಿದೆ. ಮಧ್ಯಾಹ್ನ 12ರಿಂದ ಸಾರ್ವಜನಿಕ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಅನ್ನದಾನಕ್ಕಾಗಿ ಭಕ್ತರು ಅಕ್ಕಿ, ಬಿಳಿ ಬೆಲ್ಲ, ಬೇಳೆ, ಎಣ್ಣೆ, ತರಕಾರಿ ಹಾಗೂ ಧನ-ಧಾನ್ಯಗಳನ್ನು ನೀಡಬಹುದು ಎಂದು ಮನವಿ ಮಾಡಿದರು.
ಸರಳ ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ ವರನಿಗೆ 21, ವಧುವಿಗೆ 18 ವರ್ಷ ಆಗಿರಬೇಕು. ನಾಲ್ಕು ಭಾವಚಿತ್ರ, ವಿಳಾಸ ದೃಢೀಕರಣ ಪತ್ರದ ದಾಖಲಾತಿಗಳೊಂದಿಗೆ 15 ದಿನಗಳ ಮುಂಚೆ ಹೆಸರು ದಾಖಲಿಸಬೇಕು. ವಧು-ವರರ ಸಂಪ್ರದಾಯಕ್ಕೆ ತಕ್ಕಂತೆ ತಾಳಿ ಮಾಡಿಸಿಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ದೂ: 9448133838, 7892230226 ಸಂಪರ್ಕಿಸುವಂತೆ ತಿಳಿಸಿದರು.
ದೇವಸ್ಥಾನದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಗುಣಶೇಖರ್, ಉಪಾಧ್ಯಕ್ಷ ಎ.ಮಹಾಲಿಂಗಂ, ಖಜಾಚಿ ಕೆ.ಕೃಷ್ಣರಾಜ್, ನಿರ್ದೇಶಕರಾದ ಗೋಪಾಲ್, ವೆಂಕಟೇಶ್, ಪುವೆಂದಿರನ್, ಅಣ್ಣಾವೇಲು ಇತರರಿದ್ದರು.