

ವುಹಾನ್: ಚೀನಾ ಸೇರಿದಂತೆ ವಿಶ್ವದೆಲ್ಲೆಡೆ ಸಾವಿನ ಭೀತಿ ಸೃಷ್ಟಿಸಿರುವ ಕೊರೊನಾ ವೈರಸ್ ಹರಡಿದ್ದರ ಬಗ್ಗೆ ಪ್ರತಿದಿನ ಒಂದಲ್ಲ ಒಂದು ವಿಚಾರಗಳು ಹೊರಬರುತ್ತಿದೆ. ಪ್ರಾಣಿಗಳಿಂದ ಮಾನವನಿಗೆ ವೈರಸ್ ತಗುಲಿದೆ ಎಂದು ಹೇಳಲಾಗುತ್ತಿದ್ದರೂ ಇನ್ನು ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಇದೀಗ ಈ ಕುರಿತು ಅಧ್ಯಯನದ ಫಲಿತಾಂಶವೊಂದು ಹೊರಬಿದ್ದಿದೆ.
ಬಾವಲಿಗಳಿಂದ ಮನುಷ್ಯರಿಗೆ ಕೊರೊನಾ ವೈರಸ್ ಹರಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದರ ಮಧ್ಯವರ್ತಿಯಾಗಿ ಪ್ಯಾಂಗೊಲಿನ್(ಚಿಪ್ಪು ಹಂದಿ) ಪಾತ್ರವಿದೆ ಎಂದು ಚೀನಾ ವಿಜ್ಞಾನಿಗಳು ವಾದಿಸಿದ್ದಾರೆ.
ದಕ್ಷಿಣಾ ಚೀನಾದ ಕೃಷಿ ವಿಶ್ವವಿದ್ಯಾಲಯದಲ್ಲಿರುವ ಸಂಶೋಧಕರು ಪ್ಯಾಂಗೊಲಿನ್ ಮಧ್ಯವರ್ತಿ ಪಾತ್ರದ ಸಂಭವನೀಯತೆ ಬಗ್ಗೆ ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಆದರೆ, ಇದು ಪ್ರಾಥಮಿಕ ತನಿಖೆ ಮಾತ್ರ, ಅಂತಿಮ ನಿರ್ಣಯಕ್ಕೆ ಬರಲು ಮತ್ತಷ್ಟು ಸಂಶೋಧನೆ ನಡೆಯುತ್ತಿದೆ ಎಂದು ಬ್ರಿಟಿಷ್ ಅಕಾಡೆಮಿಕ್ಸ್ ಎಚ್ಚರಿಕೆ ನೀಡಿದ್ದಾರೆ.
ಚೀನಾದ ವುಹಾನ್ ನಗರದಲ್ಲಿರುವ ಜೀವಂತ ಪ್ರಾಣಿ ಮಾರುಕಟ್ಟೆಯಲ್ಲಿ ಕೊರೊನಾ ವೈರಸ್ ಕಳೆದ ವರ್ಷ ಹೊರಹೊಮ್ಮಿತ್ತು ಎನ್ನಲಾಗಿದೆ. ಬಾವಲಿಗಳಿಂದಲೇ ಇದು ಉತ್ಪತಿಯಾಗಿದೆ ಎಂದು ನಂಬಲಾಗಿದೆ. ಆದರೆ, ಕೊರೊನಾ ವೈರಸ್ ಮಾನವರಿಗೆ ರವಾನೆಯಾಗಲು ಮಧ್ಯವರ್ತಿಯಾಗಿ ಪ್ಯಾಂಗೊಲಿನ್ ಪಾತ್ರದ ಸಂಭವನಿಯತೆಯನ್ನು ಸಂಶೋಧಕರು ಸೂಚಿಸಿದ್ದಾರೆ.
ಕೃಷಿ ವಿಶ್ವವಿದ್ಯಾಲಯದಲ್ಲಿರುವ ಸಂಶೋಧಕರು ಸುಮಾರು 1000 ಪ್ರಾಣಿಗಳ ರಕ್ತದ ಮಾದರಿಯನ್ನು ತೆಗೆದುಕೊಂಡು ಪರೀಕ್ಷೆ ನಡೆಸಿದ್ದಾರೆ. ಅದರಲ್ಲಿ ಪ್ಯಾಂಗೊಲಿನ್ನಲ್ಲಿರುವ ವೈರಸ್ಗೂ ಕೊರೊನಾ ವೈರಸ್ ತಗಲಿರುವ ರೋಗಿಗಳಿಗೂ ಶೇ 99 ರಷ್ಟು ಸಾಮ್ಯತೆ ಇರುವುದಾಗಿ ಪತ್ತೆಯಾಗಿದೆ. ಸದ್ಯ ಸಂಶೋಧನೆಯ ಪೂರ್ಣ ವರದಿಯು ಬಹಿರಂಗವಾಗಿಲ್ಲ. ಪ್ರಯೋಗದ ಒಂದು ಭಾಗವನ್ನು ಮಾತ್ರ ಕೃಷಿ ವಿಶ್ವವಿದ್ಯಾಲಯವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನು ಖಚಿತಪಡಿಸಿಕೊಳ್ಳಲು ಮತ್ತಷ್ಟು ಅಧ್ಯಯನ ನಡೆಯುತ್ತಿದೆ. (ಏಜೆನ್ಸೀಸ್)