ಮನತಣಿಸಿದ ಪಂ. ಪ್ರಸನ್ನ ಮಾಧವಗುಡಿ ಅವರ ಹಿಂದುಸ್ತಾನಿ ಗಾಯನ

Hindustani music
ಕುವೆಂಪು ರಂಗಮಂದಿರದಲ್ಲಿ ಹಿಂದುಸ್ತಾನಿ ಗಾಯನ ಕಾರ್ಯಕ್ರಮವನ್ನು ಖ್ಯಾತ ಹಿಂದೂಸ್ತಾನಿ ಗಾಯಕ ಪಂ. ಪ್ರಸನ್ನ ಮಾಧವ ಗುಡಿ ಉದ್ಘಾಟಿಸಿದರು. ಭಾಸ್ಕರ್ ಜಿ ಕಾಮತ್, ದೇವಕುಮಾರ್, ಅಚ್ಯುತ್‌ರಾವ್, ರಂಗಧೋಳ್, ರೇಖಾ ಹಂಪಿಹೊಳಿ ಇದ್ದರು.
Published on

ಶಿವಮೊಗ್ಗ: ಕುವೆಂಪು ರಂಗಮಂದಿರದಲ್ಲಿ ಭಾನುವಾರ ಸಂಜೆ ಸಪ್ತಸ್ವರ ಸಂಗೀತ ಸಭಾ ಆಶ್ರಯದಲ್ಲಿ ಆಯೋಜಿಸಿದ್ದ ಖ್ಯಾತ ಹಿಂದುಸ್ತಾನಿ ಗಾಯಕ ಪಂ. ಪ್ರಸನ್ನ ಮಾಧವಗುಡಿ ಅವರ ಹಿಂದುಸ್ತಾನಿ ಗಾಯನ ಶ್ರೋತೃಗಳ ಮನತಣಿಸಿತು. ಹಿಂದುಸ್ತಾನಿ ಸಂಗೀತವು ಹೆಚ್ಚು ಪ್ರಚಲಿತವಿರದ ಶಿವಮೊಗ್ಗದಂತಹ ನಗರದಲ್ಲಿ ರಾಗಗಳ ಪ್ರಸ್ತುತಿಗೆ ಅವಕಾಶವೂ ಕಡಿಮೆ. ಹೀಗಾಗಿ ಇಲ್ಲಿನ ಸಂಗೀತದ ಶೈಲಿ ಒಂದು-ಎರಡು ರಾಗಗಳ ನಂತರ ದಾಸವಾಣಿಗೆ ಸೀಮಿತವಾಗಿರುವುದು ಅನಿವಾರ್ಯ. ಇಂತಹ ಸಂದರ್ಭವನ್ನು ನಿರ್ವಹಿಸುವಲ್ಲಿ ಪಂ. ಪ್ರಸನ್ನ ಮಾಧವಗುಡಿ ಅವರು ತೋರಿದ ಜಾಣ್ಮೆ ಮೆಚ್ಚುವಂತಿತ್ತು.

ಯಮನ್ ರಾಗದ ವಿಸ್ತಾರ ಆಲಾಪನೆ, ಬಡಾ ಖ್ಯಾಲ್ ಮತ್ತು ಬೋಲ್ ತಾನಗಳೊಂದಿಗೆ ನೀಡಿದ ಪ್ರಸ್ತುತಿ ಕರ್ನಾಟಕ ಸಂಗೀತ ಬಲ್ಲವರಿಗೆ ಹತ್ತಿರವಾಗಿತ್ತು. ನಂತರದ ದಾಸವಾಣಿಯ ಕೃತಿಗಳನ್ನು ಕನ್ನಡದಲ್ಲೇ ಪ್ರಸ್ತುತಿಗೊಳಿಸಿದ್ದು ಕೂಡ ಜನರಿಗೆ ಆಪ್ತವಾಯಿತು. ಅದರಲ್ಲೂ ಗಣಪತಿ ಎನ್ನ ಪಾಲಿಸೋ, ಒಲ್ಲನೋ ಹರಿ ಕೊಳ್ಳನೋ ಮುಂತಾದ ಪರಿಚಿತ ಕೃತಿಗಳ ಜತೆಗೆ ಹೆಚ್ಚು ಕೇಳಿರದ ರಚನೆಗಳಾದ ಬಾರೆ ಸಖಿ ಮಧುರೆಗೆ, ಕುದುರೆ ಬಂದಿದೆ, ಯಾವ ಸಿರಿಯಲ್ಲಿ ನೀನು- ಇವು ಉತ್ತಮ ಪರಿಣಾಮ ಬೀರಿದವು. ಶಿವಮೊಗ್ಗದ ಖ್ಯಾತ ಕಲಾವಿದ ರಂಗಧೋಳ್ ಅವರ ತಬಲಾ ಸಾಥಿ ಮತ್ತು ರೇಖಾ ಹಂಪಿಹೊಳಿ ಅವರ ಹಾರ್ಮೋನಿಯಂ ವಾದನ ಸಂಗೀತ ಕಚೇರಿ ಕಳೆಗಟ್ಟಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net