

ಕೋಲಾರ: ನವ ಕರ್ನಾಟಕ ನಿರ್ಮಾಣಕ್ಕಾಗಿ ಜೆಡಿಎಸ್ ಆಯೋಜಿಸಿರುವ 'ಪಂಚರತ್ನ ರಥಯಾತ್ರೆ'ಗೆ ಇಂದು(ಮಂಗಳವಾರ) ಮುಳಬಾಗಿಲಿನಲ್ಲಿ ಚಾಲನೆ ಸಿಕ್ಕಿದೆ. ಮಂಗಳವಾರ ಬೆಳಗ್ಗೆ ಕುರುಡುಮಲೆ ಮಹಾಗಣಪತಿ ದೇವಸ್ಥಾನದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರೂ ಆದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಯಾತ್ರೆಗೆ ಚಾಲನೆ ನೀಡಿದರು. ಆ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದರು.
ಪಂಚರತ್ನ ರಥಯಾತ್ರೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಎಚ್ಡಿಕೆ, ಯಾತ್ರೆ ವೇಳೆ ಬೇರೆ ಪಕ್ಷ ಬಗ್ಗೆ ಮಾತನಾಡಲು ಹೋಗುವುದಿಲ್ಲ, ಜನರ ಸಮೀಪಕ್ಕೆ ಹೋಗಿ ಜನರ ಸಮಸ್ಯೆ ಆಲಿಸುತ್ತೇವೆ. ಜನರ ನಿರೀಕ್ಷೆಗಳು ಏನಿವೆ? ಎಂಬುದನ್ನ ಅರಿತು ಕನ್ನಡಿಗರ ಸರ್ಕಾರ ಸ್ಥಾಪಿಸಬೇಕಾಗಿದೆ. ಉತ್ತರ ಕರ್ನಾಟಕದಲ್ಲಿ ಜನರಿಗೆ ಕಲುಷಿತ ನೀರು ಸರಬರಾಜು ಮಾಡುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ನಮ್ಮ ನಾಡಿನ ನದಿಗಳ ನೀರನ್ನ ಶೋಧಿಸಿ ಪ್ರತಿ ಕುಟುಂಬಕ್ಕೆ ಶುದ್ಧ ನೀರು ಕೊಡಲಾಗುವುದು ಎಂದು ದಳಪತಿಗಳು ವಾಗ್ದಾನ ಮಾಡಿದರು. ಇನ್ನು ರೈತರಿಗೆ ಕೃಷಿಗೆ ನೀರು ಕೊಡಲು ಯೋಜನೆ ರೂಪಿಸಿದ್ದೇವೆ, ಸ್ವತಂತ್ರ ಸರ್ಕಾರ ಕೊಟ್ಟಾಗ ನಾವು ಈ ಯೋಜನೆಯನ್ನು ರೂಪಿಸುತ್ತೇವೆ ಎಂದರು.
ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಲು ಸಮರ್ಥ ಅಭ್ಯರ್ಥಿಗಳು ಜೆಡಿಎಸ್ನಲ್ಲಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಕುಮಾರಣ್ಣ ನಿಲ್ಲಬೇಕು ಎಂಬ ಮನವಿ ಮಾಡಿದ್ದಾರೆ. ಅಂತಹ ಸಮಯ ಸಂದರ್ಭ ಬಂದಾಗ ಅದಕ್ಕೆ ಉತ್ತರ ನೀಡುತ್ತೇನೆ ಎಂದರು.
ಕೋಲಾರ ಜಿಲ್ಲೆಯಲ್ಲಿ ಈಗಿನ ಪರಿಸ್ಥಿತಿಯಲ್ಲಿ 5 ಸ್ಥಾನ ಗೆಲ್ಲೋ ವಿಶ್ವಾಸ ಇದೆ. ಇನ್ನೊಂದು ಕ್ಷೇತ್ರದಲ್ಲಿ ಸಂಘಟನೆಗೆ ಒತ್ತು ನೀಡಲಾಗುತ್ತದೆ. ಕೋಲಾರದಲ್ಲಿ ಅಭ್ಯರ್ಥಿಗೆ ಅಭಾವ ಇಲ್ಲ. 123 ಕ್ಷೇತ್ರ ಗೆಲ್ಲುವ ಗುರಿ ನಮ್ಮದು. ಲಘುವಾಗಿ ಮಾತಾಡುವವರಿಗೆ ಜನರ ಬಳಿಯೇ ಉತ್ತರ ನೀಡ್ತೀವಿ ಎಂದರು.
ಅಭ್ಯರ್ಥಿಗಳ ಪಟ್ಟಿ ಸಿದ್ಧವಿದೆ. ಸೂಚನೆಯನ್ನೂ ಕೊಟ್ಟಿದ್ದೇನೆ. ಇವತ್ತು ಪಟ್ಟಿ ಬಿಡುಗಡೆ ಮಾಡಬೇಕಿತ್ತು. ಆದರೆ ಅವರವರ ಕ್ಷೇತ್ರದಲ್ಲಿ ರಾಜ್ಯೋತ್ಸವ ಮಾಡುತ್ತಿದ್ದಾರೆ. ಕಾರ್ಯಕ್ರಮ ಮುಖಾಂತರ ಅವರ ಬಳಿ ಪ್ರಮಾಣ ಮಾಡಿಸಬೇಕಿತ್ತು. ಶಾಸಕರ ಖರೀದಿ ಮಾಡಲು ಬಿಜೆಪಿ ಹೊರಟಿದೆ. ದೇವೇಗೌಡರ ಸಮ್ಮುಖದಲ್ಲಿ ಪ್ರಮಾಣ ಮಾಡಿಸಬೇಕು ಅಂತಲೂ ಇದೆ. ಹಾಗಾಗಿ ಜೆಪಿ ಭವನದಲ್ಲಿ ಕಾರ್ಯಕ್ರಮ ಮಾಡಬೇಕು ಅಂದು ಕೊಂಡಿದ್ದೇವೆ ಎಂದರು.