ಬೆಂಗಳೂರು:
ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಬಲವಿರುವ ವೀರಶೈವ ಪಂಚಮಸಾಲಿ ಸಮುದಾಯಗಳನ್ನು ಯಾವುದೇ ಕಾರಣಕ್ಕೂ 2ಎ ಗೆ ಸೇರಿಸಬಾರದು ಎಂದು ಆಗ್ರಹಿಸಿರುವ ಅಹಿಂದ ಚಳವಳಿ ಸಂಘಟನೆ, ಒಂದು ವೇಳೆ ಸೇರ್ಪಡೆ ಮಾಡಿದರೆ ರಾಜ್ಯದಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದೆ.
ಅತೀ ಹಿಂದುಳಿದ ವರ್ಗಗಳು 2ಎ ಪ್ರವರ್ಗದಲ್ಲಿವೆ. ಮುಂದುವರಿದ ಲಿಂಗಾಯಿತ ಸಮಾಜ ಇದಕ್ಕೆ ಸೇರಿಕೊಂಡರೆ ಹಿಂದುಳಿದ ಜಾತಿಗಳಿಗೆ ಅನ್ಯಾಯವಾಗಲಿದೆ ಎಂದು ಅಹಿಂದ ಸಂಘಟನೆಯ ಕಾರ್ಯದರ್ಶಿ ಗೋವಿಂದರಾಜು ಎಂ.ಸಾರಕ್ಕಿ ತಿಳಿಸಿದ್ದಾರೆ.
1980ರ ದಶಕಗಳಲ್ಲಿ ಡಾ.ನಾಗನಗೌಡ, ಎಲ್.ಜಿ. ಹಾವನೂರು, ವೆಂಕಟಸ್ವಾಮಿ ಮತ್ತು ಓ.ಚಿನ್ನಪ್ಪರೆಡ್ಡಿ ಅಧ್ಯಕ್ಷತೆಯ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಗಳು ತಮ್ಮ ವರದಿಗಳಲ್ಲಿ ವೀರಶೈವ ಲಿಂಗಾಯತ ಮತ್ತು ಉಪಜಾತಿಗಳಾದ ಪಂಚಮಸಾಲಿ ಇತ್ಯಾದಿ ಸಮುದಾಯಗಳು ಮುಂದುವರಿದ ಸಮುದಾಯಗಳೆಂದು ಉಲ್ಲೇಖಿಸಿವೆ ಎಂದು ಹೇಳಿದ್ದಾರೆ.
ವೀರಶೈವ ಲಿಂಗಾಯತ ಮತ್ತು ಉಪಜಾತಿಗಳಾದ ಪಂಚಮಸಾಲಿ ಸಮುದಾಯಗಳ ಪ್ರಾತಿನಿಧ್ಯ ಇತರೆ ಜನಸಂಖ್ಯೆಯ ಪ್ರಮಾಣಕ್ಕಿಂತ ನಿರಂತರವಾಗಿ ಹೆಚ್ಚು ಇದೆ. ಈ ಸಮುದಾಯಗಳ ಸ್ಥಿರಾಸ್ತಿಗಳು ಮತ್ತು ಚರಾಸ್ತಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯೋಗಿಗಳ ಪ್ರಾತಿನಿಧ್ಯ ಇತರೆ ಜನಸಂಖ್ಯೆಯ ಪ್ರಮಾಣಕ್ಕಿಂತ ನಿರಂತರವಾಗಿ ಹೆಚ್ಚು ಇದೆ ಎಂದಿದ್ದಾರೆ.
ಈ ಸಮುದಾಯಗಳ ಮಠಗಳು,ಪೀಠ ಇತ್ಯಾದಿಗಳು ಕೂಡ ಇತರೆ ಜನಸಂಖ್ಯೆಯ ಪ್ರಮಾಣಕ್ಕಿಂತ ಹೆಚ್ಚು ಇದೆ. ಕಳೆದ ಬಿಜೆಪಿ ಸರ್ಕಾರ ರಾಜ್ಯ ಹೈಕೋರ್ಟಿನಲ್ಲಿ ಈ ಪಂಚಮಸಾಲಿಯನ್ನು ಪ್ರವರ್ಗ 2ಅಗೆ ಸೇರಿಸುವ ಅಗತ್ಯವಿಲ್ಲವೆಂದು ತನ್ನ ನಿಲುವನ್ನು ತಿಳಿಸಿದೆ ಎಂದು ಹೇಳಿದ್ದಾರೆ.
ರಾಜ್ಯದ ಒಟ್ಟು ಹಿಂದುಳಿದ ಜಾತಿಗಳನ್ನು ಅತೀ ಹಿಂದುಳಿದ ವರ್ಗಗಳು; ಹಿಂದುಳಿದ ವರ್ಗಗಳೆಂದು ವರ್ಗಿಕರಿಸಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸ್ಸುಗಳ ಮಾನದಂಡಗಳ ಆಧಾರದ ಮೇಲೆ ಪ್ರವರ್ಗ-1, ಪ್ರವರ್ಗ-ಐಐ(ಅ), ಪ್ರವರ್ಗ-ಐಐ(ಆ), ಪ್ರವರ್ಗ-ಐಐಐ(ಅ), ಪ್ರವರ್ಗ- ಐಐಐ(ಆ) ಎಂದು ವರ್ಗೀಕರಿಸಿ, ವೀರಶೈವ ಪಂಚಮಸಾಲಿಗಳನ್ನು ಪ್ರವರ್ಗ-ಐಐಐ(ಅ)ರಲ್ಲಿ ನಮೂದಿಸಲಾಗಿದೆ. ವೀರಶೈವ ಪಂಚಮಸಾಲಿ ಸಮುದಾಯಗಳನ್ನು ಪ್ರವರ್ಗ-ಐಐ(ಅ)ಗೆ ಸೇರ್ಪಡೆ ಮಾಡಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಶಿಫಾರಸ್ಸು ಮಾಡಿಲ್ಲ. ಮತ್ಯಾವುದೇ ಸಂಸ್ಥೆ ಅಧ್ಯಯನ ಮಾಡಿ ವರದಿ ನೀಡಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.