

ನವದೆಹಲಿ: ಜಗತ್ತಿನ ಅತಿದೊಡ್ಡ ತಾಳೆ ಎಣ್ಣೆ ಉತ್ಪಾದಕ ರಾಷ್ಟ್ರ ಇಂಡೋನೇಷ್ಯಾ ‘ಲೋಕಲ್ ಫಸ್ಟ್’ ನೀತಿ ಘೋಷಿಸಿದೆ. ಇದರಂತೆ, ತಾಳೆ ಎಣ್ಣೆ ರಫ್ತು ನಿಷೇಧ ಜಾರಿಗೊಳಿಸಿದೆ. ಭಾರತ, ಚೀನಾ ಸೇರಿ ದೊಡ್ಡ ಆಮದು ರಾಷ್ಟ್ರಗಳ ಮೇಲೆ ಇದರ ನೇರ ಪರಿಣಾಮವಾಗಿದೆ.
ರಷ್ಯಾ ಚಾಲಿತ ಸಮರದ ಕಾರಣ ದೇಶೀಯವಾಗಿ ಖಾದ್ಯ ತೈಲದ ಬೆಲೆ ಏರಿಕೆ ಆಗತೊಡಗಿದೆ. ಇದನ್ನು ತಡೆಗಟ್ಟಲು ಎಲ್ಲ ರಾಷ್ಟ್ರಗಳು ಕೂಡ ತಮ್ಮದೇ ಆದ ಕ್ರಮಗಳನ್ನು ಅನುಸರಿಸತೊಡಗಿವೆ. ಇದರಂತೆ, ಇಂಡೋನೇಷ್ಯಾ ಹೊಸ ತಾಳೆ ಎಣ್ಣೆ ರಫ್ತು ನೀತಿಯನ್ನು ಪ್ರಕಟಿಸಿದೆ. ರಫ್ತು ನಿಷೇಧಿಸುವ ಇಂಡೋನೇಷ್ಯಾದ ಕ್ರಮ ಇಡೀ ಜಗತ್ತನ್ನು ತುಂಬಾ ಕೆಟ್ಟದಾಗಿ ಬಾಧಿಸಲಿದೆ. ಇಂಡೋನೇಷ್ಯಾದಿಂದ ಪೂರೈಸಲ್ಪಡುವ ತಾಳೆ ಎಣ್ಣೆಯ ಪ್ರಮಾಣವನ್ನು ಬೇರೆಲ್ಲಿಂದಲೂ ಸರಿದೂಗಿಸಲಾಗದು ಮಾಡಲಾಗದು ಎನ್ನುತ್ತಾರೆ ಪರಿಣತರು.
ವಿಶ್ವ ಬ್ಯಾಂಕ್ ಕಳಕಳಿ: ಜಗತ್ತಿಗೆ ಯೂಕ್ರೇನ್ ಕಡೆಯಿಂದ ಗೋಧಿ, ಜೋಳ ಮತ್ತು ಸೂರ್ಯಕಾಂತಿ ಎಣ್ಣೆ ಬಹುಪಾಲು ರಫ್ತು ಆಗುತ್ತಿತ್ತು. ಈಗ ಅದಕ್ಕೂ ಅಡ್ಡಿ ಉಂಟಾಗಿದೆ. ಜಗತ್ತು ಎದುರಿಸುತ್ತಿರುವ ಕಠಿಣ ಸನ್ನಿವೇಶದಲ್ಲಿ ಯಾವುದೇ ದೇಶ ಆಹಾರ ವಸ್ತುಗಳ ದಾಸ್ತಾನು ಹೆಚ್ಚಿಸುವುದು, ರಫ್ತು ನಿಷೇಧಿಸುವುದು ಮುಂತಾದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ವಿಶ್ವಬ್ಯಾಂಕ್ನ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಕಳಕಳಿ ವ್ಯಕ್ತಪಡಿಸಿದ್ದಾರೆ.
ಏ.28ರಿಂದ ಅನ್ವಯ: ಇಂಡೋನೇಷ್ಯಾದ ಹೊಸ ನೀತಿ ಏಪ್ರಿಲ್ 28ರಿಂದ ಚಾಲ್ತಿಗೆ ಬರಲಿದೆ. ಇಂಡೋನೇಷ್ಯಾ ಸರ್ಕಾರದ ಈ ಆದೇಶದ ಬೆನ್ನಿಗೆ ಸೋಯಾಬೀನ್ ಎಣ್ಣೆ ದರ ಶುಕ್ರವಾರ ದಾಖಲೆ ಎತ್ತರಕ್ಕೇರಿದೆ. ಈ ನಿಷೇಧವು ದುರದೃಷ್ಟಕರ ಮತ್ತು ಸಂಪೂರ್ಣವಾಗಿ ಅನಿರೀಕ್ಷಿತ ಎಂದು ಭಾರತದ ವ್ಯಾಪಾರಿಗಳ ಗುಂಪು ಕಳವಳ ವ್ಯಕ್ತಪಡಿಸಿದೆ.
ಯಾವ್ಯಾವ ದೇಶಗಳ ಮೇಲೆ ಪರಿಣಾಮ: ಪಾಕಿಸ್ತಾನ, ಬಾಂಗ್ಲಾದೇಶ ಸೇರಿ ಹಲವು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಮೇಲೆ ಇಂಡೋನೇಷ್ಯಾದ ತಾಳೆ ಎಣ್ಣೆ ರಫ್ತು ನಿಷೇಧ ಗಂಭೀರ ಪರಿಣಾಮ ಬೀರಲಿದೆ. ಸಂಸ್ಕರಿತ ಆಹಾರ, ಕಾಸ್ಮೆಟಿಕ್ಸ್ನಿಂದ ಹಿಡಿದು ಜೈವಿಕ ಇಂಧನದ ತನಕ ಜಗತ್ತಿನ ರಫ್ತಿನಲ್ಲಿ ಶೇಕಡ 50 ಪಾಲು ಇಂಡೋನೇಷ್ಯಾದ್ದು. ಇದೇ ರೀತಿ ವೆಜಿಟೇಬಲ್ ಆಯಿಲ್ ರಫ್ತಿನಲ್ಲಿ ಮೂರನೇ ಒಂದಂಶ ಇಂಡೋನೇಷ್ಯಾದ್ದೇ ಇದೆ.
ತಾಳೆ ಎಣ್ಣೆ ರಫ್ತು ನಿಷೇಧ ಕ್ರಮ ಅತ್ಯಂತ ಕಠಿಣವಾಗಿ ಜಾಗತಿಕ ಖಾದ್ಯ ತೈಲ ಪೂರೈಕೆಯನ್ನು ಬಾಧಿಸಲಿದೆ ಎಂಬ ಅರಿವು ನಮಗೆ ಇದೆ. ಆದರೆ, ದೇಶೀಯವಾಗಿ ಖಾದ್ಯ ತೈಲ ದರವನ್ನು ನಿಯಂತ್ರಿಸುವುದಕ್ಕೆ ಇದೊಂದೇ ದಾರಿ. ಉಳಿದ ಕ್ರಮಗಳನ್ನು ಈ ಮೊದಲೇ ತೆಗೆದುಕೊಳ್ಳಲಾಗಿದೆ. ಆದರೆ ಸರಿಯಾದ ಫಲ ಸಿಕ್ಕಿಲ್ಲ. | ಶ್ರೀ ಮುಲ್ಯಾನಿ ಇಂದ್ರವತಿ ಇಂಡೋನೇಷ್ಯಾದ ವಿತ್ತ ಸಚಿವೆ ಇದು ಅನಿರೀಕ್ಷಿತ ಹೊಡೆತ. ಇಂತಹ ನಿಷೇಧವನ್ನು ನಾವು ನಿರೀಕ್ಷಿಸಿಯೇ ಇರಲಿಲ್ಲ. ಇದರಿಂದ ಭಾರತದಲ್ಲಿ ಬಹಳ ತೊಂದರೆಗಳಾಗಲಿವೆ. | ಅತುಲ್ ಚತುರ್ವೇದಿ ಸಾಲ್ವೆಂಟ್ ಎಕ್ಸ್ಟ್ರಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷ
ಭಾರತದ ಮೇಲಿನ ಪರಿಣಾಮ: ಇಂಡೋನೇಷ್ಯಾದಿಂದ ಭಾರತವು ಪ್ರತಿ ತಿಂಗಳು 4 ದಶಲಕ್ಷ ಟನ್ ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳು ತ್ತದೆ. ಭಾರತಕ್ಕೆ ತಾಳೆ ಎಣ್ಣೆ ಆಮದು ಪ್ರಮಾಣ ಏಪ್ರಿಲ್ನಲ್ಲಿ 6 ಲಕ್ಷ ಟನ್ಗೆ ಏರಲಿದೆ. ಮಾರ್ಚ್ನಲ್ಲಿ ಇದು 5,39,793 ಟನ್ ಆಗಿತ್ತು. ಮೇ ತಿಂಗಳ ಬೇಡಿಕೆ 6.5 ಲಕ್ಷ ಟನ್ ಆಗಬಹುದು ಎಂದು ಮುಂಬೈನ ವ್ಯಾಪಾರೋದ್ಯಮ ಒಂದು ತಿಳಿಸಿದೆ. ಇಂಡೋನೇಷ್ಯಾದಿಂದಲೇ ಬಹುಪಾಲು ಆಮದು ಆಗುತ್ತಿತ್ತು. ಈಗ ಅಲ್ಲಿ ರಫ್ತು ನಿಷೇಧ ಜಾರಿಗೆ ಬರುವ ಕಾರಣ ದೊಡ್ಡ ಹೊಡೆತವನ್ನು ಭಾರತವೂ ಎದುರಿಸಬೇಕಾಗಿದೆ.
ಪಾಮ್ ಆಯಿಲ್ ಪೂರೈಕೆ ಡೇಟಾ: ಅಮೆರಿಕದ ಕೃಷಿ ಇಲಾಖೆಯ ದತ್ತಾಂಶ ಪ್ರಕಾರ, 2021ರಲ್ಲಿ ತಾಳೆಎಣ್ಣೆ ಉತ್ಪಾದನೆ 76.5 ದಶಲಕ್ಷ ಟನ್ ಇದ್ದು, ಇದರಲ್ಲಿ 58% ಇಂಡೋನೇಷ್ಯಾದ್ದು. ಮಲೇಷ್ಯಾದಲ್ಲಿ ಶೇಕಡ 26 ಮತ್ತು ಇತರೆ ರಾಷ್ಟ್ರಗಳ ಪಾಲು ಶೇಕಡ 5 ಮತ್ತು ಇನ್ನೂ ಕಡಿಮೆ.
ಯಾಕಿಷ್ಟು ಬೇಡಿಕೆ?: ಭಾರತದಲ್ಲಿ ತಾಳೆ ಎಣ್ಣೆ ಪ್ರಾಥಮಿಕವಾಗಿ ಅಡುಗೆಗೆ ಬಳಕೆ ಯಾಗುತ್ತದೆ. ಉಳಿದಂತೆ ಲಿಪ್ಸ್ಟಿಕ್ನಿಂದ ಹಿಡಿದು ಐಸ್ಕ್ರೀಮ್ ತನಕ ಬಳಕೆಯಾಗುತ್ತದೆ. ತಾಳೆ ಎಣ್ಣೆ ಅಗ್ಗ, ಬಹೂಪಯೋಗಿ ಎಂಬ ಕಾರಣಕ್ಕೆ ಬಹಳ ಬೇಡಿಕೆಯನ್ನು ಹೊಂದಿದೆ.