ಯುವ ಕಾಂಗ್ರೆಸ್‌ನಿಂದ ಪಕೋಡಾ ಪ್ರತಿಭಟನೆ

KPCC (2)
Published on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದಂದು ಬಿಜೆಪಿ ಸೇವಾ ಪಾಕ್ಷಿಕ ಆಚರಿಸುತ್ತಿದ್ದರೆ, ಇತ್ತ ಯುವ ಕಾಂಗ್ರೆಸ್ ಕಾರ್ಯಕರ್ತರು ‘ರಾಷ್ಟ್ರೀಯ ನಿರುದ್ಯೋಗ ದಿನ’ ಆಚರಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಚೇರಿ ಮುಂದೆ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ ನೇತೃತ್ವದಲ್ಲಿ ಪಕೋಡಾ ತಯಾರಿಸಿ ಮಾರಾಟ ಮಾಡುವ ವಿನೂತನ ಪ್ರತಿಭಟನೆ ನಡೆಸಿತು. ಕೇಂದ್ರ ಸಚಿವೆ ಕಚೇರಿಗೆ ನುಗ್ಗಲು ಯತ್ನಿಸಿದಾಗ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಮಂಜುನಾಥ್ ಗೌಡ, ದೇಶಾದ್ಯಂತ ಯುವ ಕಾಂಗ್ರೆಸ್ ಘಟಕಗಳು ಕೇಂದ್ರ ಸರ್ಕಾರದ ವಿಲ ಉದ್ಯೋಗ ನೀತಿಗಳ ವಿರುದ್ಧ ಹೋರಾಟ ನಡೆಸುತ್ತಿವೆ. ಇದರ ಭಾಗವಾಗಿ ನಗರದ ವಿವಿಧೆಡೆ ಪ್ರತಿಭಟನೆ ನಡೆಸಲಾಯಿತು. ಬೆಂಗಳೂರು ಉತ್ತರ ಯುವ ಕಾಂಗ್ರೆಸ್ ಸಮಿತಿಯು ಮತಗಳ್ಳತನ ಮತ್ತು ಪ್ರಧಾನಿ ನೀಡಿದ ಸುಳ್ಳು ಭರವಸೆಗಳ ವಿರುದ್ಧ ಪ್ರತಿಭಟನೆ ನಡೆಸಿದೆ. ಕೇಂದ್ರ ಸರ್ಕಾರ ಉದ್ಯೋಗ ಭರವಸೆಗಳನ್ನು ಈಡೇರಿಸದೆ ಯುವಕರ ಭವಿಷ್ಯ ಹಾಳುಮಾಡಿದೆ. ಉದ್ಯೋಗ ಕೇಳಿದರೆ ‘ಪಕೋಡಾ ಮಾರಿ, ಅದು ಕೂಡ ಒಂದು ಕೆಲಸ’ ಎಂದು ಹೇಳುತ್ತಾರೆ. ಇಂದು ಅವರ ಮಾತೇ ನಿಜವಾಗಿದೆ. ಉದ್ಯೋಗ ಅವಕಾಶಗಳು ಇಲ್ಲದೆ ಯುವಜನತೆ ಪಕೋಡಾ ಮಾರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net