ಕ್ಯಾಂಪಸ್​ನಲ್ಲೇ ಸ್ಪೋಟಗೊಂಡ ಪ್ರೀತಿ: ಯುನಿವರ್ಸಿಟಿಯಿಂದ ಅಮಾನತ್ತಾದ ಲವ್​ ಬರ್ಡ್ಸ್​!

lahore issue
Published on

ಲಾಹೋರ್: ಪ್ರೀತಿ ಕುರುಡು ಅಂತಾರೆ. ಅದು ಯಾವಾಗ ಬೇಕಾದರೂ ಆಗಬಹುದು ಎನ್ನುವುದು ಸತ್ಯ. ಯುವಕ ಯುವತಿಯರು ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಲು ಇಂತಹದೇ ಸ್ಥಳ ಆಗಬೇಕಂತಿಲ್ಲ.

ಆದರೆ, ವಿಶ್ವವಿದ್ಯಾಲಯದ ಕ್ಯಾಂಪಸ್​​ನಲ್ಲಿ ಯುವ ಜೋಡಿಯೊಂದು ಪ್ರೇಮ ನಿವೇದನೆ ಮಾಡಿಕೊಂಡಿದ್ದಕ್ಕೆ ಇದೀಗ ಆ ವಿಶ್ವವಿದ್ಯಾಲಯದಿಂದನೇ ಪ್ರೇಮಿಗಳು ಅಮಾನತ್ತುಗೊಂಡ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನ ಮೊದಲೇ ಹೇಳಿ ಕೇಳಿ ಸಂಪ್ರದಾಯವಾದಿ ರಾಷ್ಟ್ರ. ಇಲ್ಲಿ ಯುವತಿಯರು ಪ್ರೀತಿ ಗೀತಿ ಅನ್ನುವುದಿರಲಿ, ಅದನ್ನೂ ಬಹಿರಂಗವಾಗಿಯೂ ಮಾತನಾಡುವಂತಿಲ್ಲ. ಆದರೆ ಲಾಹೋರ್ ವಿಶ್ವವಿದ್ಯಾಲಯದಲ್ಲಿ ನಡೆದ ಘಟನೆ ಪಾಕಿಸ್ತಾನದ ಸಂಪ್ರದಾಯವಾದಿಗಳ ಕಣ್ಣು ಕೆಂಪಾಗಿಸಿದೆ.

ಕಳೆದ ಗುರುವಾರ ನಡೆದಿದೆ ಎನ್ನಲಾದ ಘಟನೆ ಇದು. ಯುವ ಜೋಡಿಯೊಂದು ಲಾಹೋರ್ ವಿವಿಯ ಕ್ಯಾಂಪಸ್​ನಲ್ಲೇ ನೂರಾರು ಜನರ ಎದುರು ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಯುವತಿಯೇ ಸ್ವತಃ ಯುವಕನಿಗೆ ಗುಲಾಬಿ ನೀಡುವ ಮೂಲಕ ಪ್ರೇಮ ನಿವೇದನೆ ಮಾಡಿಕೊಂಡಿದ್ದಾಳೆ. ಇದಕ್ಕೆ ಅಷ್ಟೇ ಖುಷಿಯಾಗಿ ಸ್ಪಂದಿಸಿರುವ ಯುವಕ ಯುವತಿಗೆ ಮುತ್ತಿಕ್ಕಿ, ಅವಳನ್ನು ತಬ್ಬಿಕೊಂಡು ಅವಳ ಪ್ರೀತಿಯನ್ನು ಒಪ್ಪಿಕೊಂಡಿದ್ದಾನೆ.

ಈ ಘಟನೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಲಾಹೋರ್ ವಿವಿ, ಕ್ಯಾಂಪಸ್​ನಲ್ಲಿ ವಿವಿಯ ನಿಯಮಾವಳಿಗಳನ್ನು ಮುರಿಯಲಾಗಿದೆ ಎಂದು ಆರೋಪಿಸಿ ಆ ಯುವ ಜೋಡಿಗೆ ನೋಟಿಸ್ ನೀಡಿದೆ. ಆದರೆ, ಆ ಯುವ ಜೋಡಿ ನೋಟಿಸ್​ಗೆ ಕ್ಯಾರೆ ಅಂದಿಲ್ಲ. ಕೊನೆಗೆ ಈ ಯುವ ಜೋಡಿಯನ್ನು ಕ್ಯಾಂಪಸ್​ನಿಂದಲೇ ಹೊರ ಹಾಕುವ ತೀರ್ಮಾನ ತೆಗೆದುಕೊಂಡಿದೆ ವಿವಿ.

ಪಾಕಿಸ್ತಾನ್​​ ವಿವಿಯ ಈ ತೀರ್ಮಾನಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಪಾಕಿಸ್ತಾನದ ಮೂಲಭೂತವಾದಿ ಗುಣಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಯುವ ಪ್ರೇಮಿಗಳಿಗೆ ಪಾಕಿಸ್ತಾನದಲ್ಲಿ ಜಾಗ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. (ಏಜೇನ್ಸಿಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net