

Greek Tourist: ಗ್ರೀಕ್ ಪ್ರಜೆಯೊಬ್ಬ ವ್ಯಾಪಾರ ಉದ್ದೇಶದಿಂದ ಮುಂಬೈಗೆ ಆಗಮಿಸಿದ್ದು, ಈ ವೇಳೆ ತನ್ನ ದುಬಾರಿ ಐಪೋನ್ನನ್ನು ಕಳೆದುಕೊಂಡಿದ್ದಾನೆ. ಈ ಬಗ್ಗೆ ಮುಂಬೈನ ಅಜಾದ್ ಪೊಲೀಸರಲ್ಲಿ ಸಹಾಯ ಕೇಳಿದ್ದು, ಘಟನೆ ನಡೆದ ಕೇವಲ 30 ನಿಮಿಷಗಳಲ್ಲಿ ಪೊಲೀಸರು ಮೊಬೈಲ್ನ್ನು ಹುಡುಕಿಕೊಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ನಿನ್ನೆ (ಸೆಪ್ಟೆಂಬರ್ 9, 2025) ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಗ್ರೀಕ್ ಪ್ರಜೆಯೊಬ್ಬ ಮೊದಲ ಬಾರಿಗೆ ವ್ಯಾಪಾರಕ್ಕೆಂದು ಮುಂಬೈಗೆ ಆಗಮಿಸಿದ್ದು, ಈ ವೇಳೆ ತಾವು ಉಳಿದುಕೊಂಡಿದ್ದ ಕೊಲಾಬಾದಲ್ಲಿರುವ ಹೊಟೇಲ್ನಿಂದ ಊಬರ್ ಬುಕ್ ಮಾಡಿಕೊಂಡು ಕೆಲವೆಡೆ ಓಡಾಟ ನಡೆಸಿದ್ದರು. ಇನ್ನು ಟ್ಯಾಕ್ಸಿಯಿಂದ ಇಳಿದ ನಂತರ ಅವರ ಮೊಬೈಲ್ಫೋನನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ.
ಪ್ರವಾಸಿಗ ಐಫೋನ್ ಕಳೆದುಕೊಂಡಿದ್ದು, ಈ ಬಗ್ಗೆ ಮುಂಬೈನ ಅಜಾದ್ ಮೈದಾನದಲ್ಲಿರುವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ತಕ್ಷಣವೇ ಊಬರ್ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಕ್ಯಾಬ್ ಚಾಲಕನನ್ನು ಪತ್ತೆ ಹಚ್ಚಿದ್ದಾರೆ. ನಂತರ ಆತನನ್ನು ವಿಚಾರಿಸಿದಾಗ ಐಫೋನ್ ಅವನ ಬಳಿ ಇರುವುದನ್ನು ದೃಢೀಕರಿಸಿದ್ದು, ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀಕಾಂತ್ ಅಡಾಟೆ ಅವರ ಸಮ್ಮುಖದಲ್ಲಿ ಪ್ರವಾಸಿಗನಿಗೆ ಐಫೋನ್ ಹಸ್ತಾಂತರಿಸಲಾಯಿತು.
ಈ ವಿಚಾರವಾಗಿ ಸೈಬರ್ ತಂಡವು ತ್ವರಿತ ಕ್ರಮವನ್ನು ತೆಗೆದುಕೊಂಡಿದ್ದು, 30 ನಿಮಿಷಗಳೊಳಗಾಗಿ ಕಳೆದು ಹೋಗಿರುವ ಮೊಬೈಲ್ನ್ನು ಪತ್ತೆ ಹಚ್ಚಿ ಗ್ರೀಕ್ ಪ್ರವಾಸಿಗನಿಗೆ ಹಿಂತಿರುಗಿಸುವಂತಹ ಕಾರ್ಯವನ್ನು ಮಾಡಿದ್ದಾರೆ. ಇದು ಪೊಲೀಸರ ನಿಷ್ಠೆ ಹಾಗೂ ಅವರ ಕಾರ್ಯದ ಬಗ್ಗೆ ಮಾಹಿತಿ ನೀಡುತ್ತದೆ. (ಏಜೆನ್ಸೀಸ್)