ಭಾರತೀಯ ಸಮುದಾಯಕ್ಕೆ "ಕತ್ತು ಕತ್ತರಿಸುವ" ಸನ್ನೆ ಮಾಡಿದ ಪಾಕ್​​ ಸೇನೆಯ ಅಧಿಕಾರಿ! Video viral

Video viral
Published on

Video viral: ಪಹಲ್ಗಾಮ್ ಭಯೋತ್ಪಾದಕರ ದಾಳಿಯಲ್ಲಿ 26 ಭಾರತೀಯ ಪ್ರವಾಸಿಗರನ್ನು ಬಲಿ ತೆಗೆದುಕೊಂಡ ನಂತರ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಉದ್ವಿಗ್ನತೆ ಹೆಚ್ಚುತ್ತಿದೆ. ಆದರೆ ಇದರ ನಡುವೆ ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿಯೊಬ್ಬರು ಲಂಡನ್‌ನಲ್ಲಿ ಪ್ರತಿಭಟನಾಕಾರರ ಕಡೆಗೆ ಬೆದರಿಕೆ ಸನ್ನೆ ಮಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.  ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಶುಕ್ರವಾರ (ಏ.25) ಲಂಡನ್‌ನಲ್ಲಿರುವ ಪಾಕಿಸ್ತಾನ ಹೈಕಮಿಷನ್ ಹೊರಗೆ ಭಾರತೀಯ ಸಮುದಾಯದ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾಗ ಈ ಸನ್ನೆ ಸೆರೆಯಾಗಿದೆ.

ವಿಚಾರಣೆಗೆ ಒಳಗಾದ ಪಾಕಿಸ್ತಾನಿ ಅಧಿಕಾರಿಯನ್ನು ಲಂಡನ್‌ನಲ್ಲಿರುವ ಪಾಕಿಸ್ತಾನಿ ಸೇನೆ ಮತ್ತು ವಾಯು ಸಲಹೆಗಾರ ಕರ್ನಲ್ ತೈಮೂರ್ ರಹತ್ ಎಂದು ಗುರುತಿಸಲಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಅವರು ಭಾರತೀಯ ಸಮುದಾಯದ ಪ್ರತಿಭಟನಾಕಾರರಿಗೆ "ಕತ್ತು ಕತ್ತರಿಸುವ" ರೀತಿಯಲ್ಲಿ ಸನ್ನೆಮಾಡಿ ಸಾರ್ವಜನಿಕವಾಗಿ ಬೆದರಿಕೆ ಹಾಕುತ್ತಿರುವುದನ್ನು ಕಾಣಬಹುದು.

ಘಟನೆ ಏನು?

ಶುಕ್ರವಾರ (ಏ.25) ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಪಾಕಿಸ್ತಾನ ರಾಯಭಾರ ಕಚೇರಿಯ ಹೊರಗೆ 500 ಕ್ಕೂ ಹೆಚ್ಚು ಬ್ರಿಟಿಷ್ ಹಿಂದೂಗಳು ಪ್ರತಿಭಟನೆ ನಡೆಸಿದರು. ಭಾರತೀಯ ಸಮುದಾಯದ ಸದಸ್ಯರು ಭಾರತೀಯ ಧ್ವಜಗಳು, ಬ್ಯಾನರ್‌ಗಳು ಮತ್ತು ಫಲಕಗಳನ್ನು ಹಿಡಿದುಕೊಂಡು ಅಮಾಯಕರ ಜೀವಹಾನಿಗೆ ತೀವ್ರ ದುಃಖ ವ್ಯಕ್ತಪಡಿಸಿ ಅವರಿಗೆ ಸರಿಯಾದ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು. ಭಯೋತ್ಪಾದಕ ಗುಂಪುಗಳಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನವನ್ನು ಖಂಡಿಸಿ ಅವರು ಘೋಷಣೆಗಳನ್ನು ಕೂಗಿದ್ದರು.

ಈ ಪ್ರತಿಭಟನೆಯ ಸಮಯದಲ್ಲಿ ಪಾಕಿಸ್ತಾನ ರಾಯಭಾರ ಕಚೇರಿಯೊಳಗಿನ ಅಧಿಕಾರಿಗಳು ಜೋರಾಗಿ ಸಂಭ್ರಮಾಚರಣೆಯ ಸಂಗೀತ ನುಡಿಸುತ್ತಿರುವುದು ಕಂಡುಬಂದಿದ್ದು, ಇದು ಗಾಯದ ಮೇಲೆ ಬರೆ ಎಳೆದಂತಿದೆ ಎಂದು ಎಂದು ಪ್ರತಿಭಟನೆಯ ಆಯೋಜಕರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ANI ತಿಳಿಸಿದ್ದಾರೆ. (ಏಜೆನ್ಸೀಸ್​) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net