ಪಾಕ್ ಉಗ್ರನೆಲೆ ಪುನರ್​ನಿರ್ಮಾಣ; ಪಾಕ್ ಗಡಿಯಲ್ಲಿ ಮತ್ತೆ ಉಗ್ರ ಚಟುವಟಿಕೆ; ಕಣ್ಗಾವಲು ತಪ್ಪಿಸಲು ಹೈಟೆಕ್ ತಂತ್ರಜ್ಞಾನ ಬಳಕೆ

Untitled design (1)
Published on

ಇಸ್ಲಾಮಾಬಾದ್: ಆಪರೇಷನ್ ಸಿಂಧೂರ ವೇಳೆ ಭಾರತೀಯ ಸೇನೆ ನಾಶಪಡಿಸಿದ್ದ ಉಗ್ರರ ತರಬೇತಿ ಕೇಂದ್ರಗಳು ಮತ್ತು ಲಾಂಚ್ ಪ್ಯಾಡ್​ಗಳನ್ನು ಪಾಕಿಸ್ತಾನ ಪುನರ್​ನಿರ್ವಿುಸುತ್ತಿದೆ ಎಂದು ತಿಳಿದು ಬಂದಿದೆ.

ಭಾರತೀಯ ಸೇನೆ ನಡೆಸಿದ ದಾಳಿಯಲ್ಲಿ ನಾಶವಾಗಿದ್ದ ಮೂಲಸೌಕರ್ಯಗಳು, ಕಟ್ಟಡಗಳನ್ನು ಮರು ನಿರ್ವಿುಸಲು ಪಾಕಿಸ್ತಾನ ಸರ್ಕಾರ, ಸೇನೆ ಮತ್ತು ಗುಪ್ತಚರ ಸಂಸ್ಥೆ ಐಎಸ್​ಐ ಹಣಕಾಸಿನ ನೆರವು ಮತ್ತು ಇತರೆ ಸೌಲಭ್ಯಗಳನ್ನು ಒದಗಿಸುತ್ತಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಸುತ್ತಮುತ್ತ ಪ್ರದೇಶದಲ್ಲಿ ಮರುನಿರ್ವಣ ಕಾರ್ಯ ತ್ವರಿತವಾಗಿ ನಡೆಯುತ್ತಿದೆ. ಈ ಬಾರಿ ಗಡಿ ನಿಯಂತ್ರಣ ರೇಖೆ ಬಳಿ ಲುನಿ, ಪುಟ್ವಾಲ್, ತೈಪು ಪೋಸ್ಟ್, ಜಮಿಲಾ ಪೋಸ್ಟ್, ಉಮ್ರಾನ್​ವಾಲಿ, ಚಾಪ್ರಾರ್, ಫಾರ್ವರ್ಡ್ ಕಹುತಾ, ಚೋಟಾ ಚಕ್ ಮತ್ತು ಜಂಗ್ಲೋರಾ ಪ್ರದೇಶಗಳಲ್ಲಿ ದಟ್ಟ ಅರಣ್ಯದೊಳಗೆ ಸಣ್ಣದಾದ ಮತ್ತು ಹೈಟೆಕ್ ಉಗ್ರರ ತರಬೇತಿ ಕ್ಯಾಂಪ್​ಗಳನ್ನು ನಿರ್ವಿುಸಲಾಗುತ್ತಿದೆ. ಈ ಕ್ಯಾಂಪ್​ಗಳು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಇವುಗಳನ್ನು ಥರ್ಮಲ್ ಇಮೇಜಿಂಗ್ ತಂತ್ರಜ್ಞಾನ, ರೆಡಾರ್ ಮತ್ತು ಉಗ್ರಹ ಕಣ್ಗಾವಲು ಮೂಲಕ ಪತ್ತೆ ಹಚ್ಚಲು ಸಾಧ್ಯವಾಗದಂತೆ ನಿರ್ವಿುಸಲಾಗುತ್ತಿದೆ.

ಇಲ್ಲಿ ತರಬೇತಿ ಪಡೆದ ಉಗ್ರರನ್ನು ಕಾಶ್ಮೀರದೊಳಗೆ ಕಳುಹಿಸಲು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಕೆಲ್, ಶಾರ್ಡಿ, ದುಧಿ್ನುಲ್, ಅಥ್ಮುಖಮ್ ಜುರಾ, ಲೀಪಾ ವ್ಯಾಲಿ, ಪಚಿಬಲ್ ಚಮನ್, ತಾಂಡ್ಪಾನಿ, ನೈಯಾಲಿ, ಜಂಕೋಟ್, ಚಕೋಟಿ, ನಿಕೈಲ್ ಮತ್ತು ಫಾರ್ವರ್ಡ್ ಕಹುತಾ ಸೇರಿದಂತೆ 13 ಪ್ರದೇಶಗಳಲ್ಲಿ ಲಾಂಚ್ ಪ್ಯಾಡ್​ಗಳನ್ನು ಮರು ಅಭಿವೃದ್ಧಿಪಡಿಸಲಾಗುತ್ತಿದೆ. ಇದರೊಂದಿಗೆ ಆಪರೇಷನ್ ಸಿಂಧೂರ ವೇಳೆ ಜಮ್ಮು ವಲಯದ ಅಂತಾರಾಷ್ಟ್ರೀಯ ಗಡಿ ಬಳಿ ಮಸ್ರೂರ್ ಬಡಾ ಭಾಯ್, ಚಾಪ್ರಾರ್, ಲುನಿ ಬಳಿ ಇದ್ದ ಉಗ್ರರ ಲಾಂಚ್ ಪ್ಯಾಡ್​ಗಳು ಮತ್ತು ಶಕರ್​ಗಢದಲ್ಲಿದ್ದ ಡ್ರೋನ್ ಕೇಂದ್ರವನ್ನು ನಾಶಗೊಳಿಸಲಾಗಿತ್ತು, ಇವುಗಳನ್ನು ಮರು ನಿರ್ಮಾಣ ಮಾಡಲಾಗುತ್ತಿದೆ. ಇವುಗಳ ಜತೆ ಪಾಕಿಸ್ತಾನ್ ರೇಂಜರ್ಸ್ ಪೋಸ್ಟ್​ಗಳನ್ನೂ ಮರುನಿರ್ವಿುಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸಣ್ಣ ಸಣ್ಣ ಕ್ಯಾಂಪ್​ಗಳು

ಆಪರೇಷನ್ ಸಿಂಧೂರ ಬಳಿಕ ಎಚ್ಚೆತ್ತುಕೊಂಡಿರುವ ಐಎಸ್​ಐ ಭಾರತೀಯ ಸೇನೆಯ ಕಣ್ಗಾವಲನ್ನು ತಪ್ಪಿಸಲು ದೊಡ್ಡ ಕ್ಯಾಂಪ್ ಬದಲು ಸಣ್ಣ ಸಣ್ಣ ಕ್ಯಾಂಪ್​ಗಳನ್ನು ನಿರ್ವಿುಸುತ್ತಿದೆ. ಈ ಕ್ಯಾಂಪ್​ಗಳ ಬಳಿ ಪಾಕ್ ಸೇನೆಯಿಂದ ವಿಶೇಷವಾಗಿ ತರಬೇತಿ ಪಡೆದ ಯೋಧರು ಭದ್ರತೆಗಾಗಿ ನಿಯೋಜಿತರಾಗಲಿದ್ದಾರೆ. ಇವರು ಥರ್ಮಲ್ ಸೆನ್ಸಾರ್​ಗಳು, ಲೋ ಫ್ರೀಕ್ವೆನ್ಸಿ ರೆಡಾರ್ ಸಿಸ್ಟಮ್ ಮತ್ತು ಆಂಟಿ ಡ್ರೋನ್ ತಂತ್ರಜ್ಞಾನವನ್ನು ಬಳಸಿ ಕ್ಯಾಂಪ್ ಸುತ್ತಲೂ ನಿಗಾ ಇರಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಏಪ್ರಿಲ್ 22ರಂದು ಪಹಲ್ಗಾಮ್ಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿ 26 ಜನರನ್ನು ಹತ್ಯೆ ಮಾಡಿದ ಬಳಿಕ ಭಾರತೀಯ ಸೇನಾ ಪಡೆಗಳು ಮೇ 7 ರಂದು ಆಪರೇಷನ್ ಸಿಂಧೂರ ಕಾರ್ಯಾಚರಣೆ ಆರಂಭಿಸಿದ್ದವು. ಈ ದಾಳಿಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜೈಷ್ ಎ ಮೊಹಮ್ಮದ್, ಲಷ್ಕರ್ ಎ ತೋಯ್ಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗಳ ನೆಲೆಗಳ ಮೇಲೆ ದಾಳಿ ನಡೆಸಲಾಗಿತ್ತು. ಮುಖ್ಯವಾಗಿ ಬಹಾವಲ್ಪುರದಲ್ಲಿರುವ ಜೈಷ್ ಸಂಘಟನೆಯ ಮುಖ್ಯ ಕಚೇರಿಯನ್ನು ಧ್ವಂಸಗೊಳಿಸಲಾಗಿತ್ತು. ಈ ದಾಳಿಯಲ್ಲಿ 100 ಕ್ಕೂ ಹೆಚ್ಚು ಉಗ್ರ ನಾಯಕರು ಮತ್ತು ಉಗ್ರರು ಮೃತಪಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net