

ಕರಾಚಿ: ಪಾಕಿಸ್ತಾನ ದೇಶ ಆರ್ಥಿಕ ಬಿಕ್ಕಟ್ಟಿನಿಂದ ನಲುಗಿ ಹೋಗಿದ್ದು, ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದೀಗ ಇಂಧನ ಬೆಲೆಯಲ್ಲಿ ಮತ್ತೆ ಏರಿಕೆಯಾಗುವ ಸಾಧ್ಯತೆಯಿದೆ.ಫೆಬ್ರವರಿ 16 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್ಗೆ 32 ರೂಪಾಯಿಗಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪೆಟ್ರೋಲಿಯಂ, ತೈಲ ಮತ್ತು ಲೂಬ್ರಿಕಂಟ್ ಬೆಲೆಗಳು ಮತ್ತಷ್ಟು ಏರಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪೆಟ್ರೋಲ್ ಬೆಲೆ 272 ರೂ. ಆಗುವ ಸಾಧ್ಯತೆ ಇದೆ. ಈ ನಡುವೆ ಸರ್ಕಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮತ್ತೆ ಹೆಚ್ಚಿಸಲು ನಿರ್ಧರಿಸಬಹುದು ಎನ್ನಲಾಗುತ್ತಿದೆ.
ವರದಿಗಳಲ್ಲಿ ಉಲ್ಲೇಖಿಸಲಾದ ಮಾಹಿತಿಯಂತೆ ಪೆಟ್ರೋಲ್ ಬೆಲೆಗಳು ಶೇಕಡಾ 12.8 ರಷ್ಟು ಏರಿಕೆ ಕಾಣಬಹುದು ಎನ್ನಲಾಗಿದೆ. ಡೀಸೆಲ್ ಬೆಲೆ 12.5 ಶೇಕಡಾ ಹೆಚ್ಚಳದಿಂದ 295.64 ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಪಾಕಿಸ್ತಾನದ ರೂಪಾಯಿ ಮೌಲ್ಯ ತೀವ್ರ ಕುಸಿತ ಕಂಡಿದ್ದು, ತೈಲ ಆಮದು ವೆಚ್ಚದ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆಯಾಗುತ್ತಿವೆ. ಸರ್ಕಾರವು ಫೆಬ್ರವರಿ 1 ರಿಂದ ಫೆಬ್ರವರಿ 15 ರವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ಗೆ 35 ರೂಪಾಯಿಗಳಷ್ಟು ಹೆಚ್ಚಿಸಿತ್ತು.
ಇಂಧನ ಬೆಲೆ ಮಾತ್ರವಲ್ಲದೆ ಹಾಲು, ಮಾಂಸ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಬೆಲೆಯೂ ಪಾಕಿಸ್ತಾನದಲ್ಲಿ ಗಗನಕ್ಕೇರಿದೆ. ಪ್ರಸ್ತುತ ಪ್ರತಿ ಲೀಟರ್ಗೆ 210 ರೂ. ನೀಡಿ ಹಾಲು ಖರೀದಿಸಬೇಕಾಗಿದೆ. ಒಂದು ಕೆ.ಜಿ ಕೋಳಿಗೆ 700-800 ರೂ., ಮಾಂಸದ ಬೆಲೆ ಕೆ.ಜಿ 1,000-1,100 ರೂ. ತಲುಪಿದೆ ಎಂದು ವರದಿಯಾಗಿದೆ. (ಏಜೆನ್ಸೀಸ್)