

Pakistan has no connection to attack in Pahalgam: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯು ದೇಶವನ್ನು ದುಃಖದಲ್ಲಿ ಮುಳುಗಿಸಿದೆ. ಪಹಲ್ಗಾಮ್ ಬಳಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಬುಧವಾರ ಹೇಳಿದ್ದಾರೆ.
ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಈ ದಾಳಿಯಲ್ಲಿ 27 ಜನರು ಸಾವನ್ನಪ್ಪಿದ್ದು, 20 ಜನರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಯೋತ್ಪಾದಕ ದಾಳಿಯ ಮರುದಿನವೇ ಪಾಕಿಸ್ತಾನ ಸರ್ಕಾರ ಪಹಲ್ಗಾಮ್ ಘಟನೆಗೆ ಪ್ರತಿಕ್ರಿಯಿಸಿತು. ಅನಂತ್‌ನಾಗ್ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.
ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಮಾತನಾಡಿ, ತಮ್ಮ ದೇಶವು ಎಲ್ಲಾ ರೀತಿಯ ಭಯೋತ್ಪಾದನೆಯನ್ನು ವಿರೋಧಿಸುತ್ತದೆ. ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ನಾವು ಯಾವುದೇ ರೂಪದಲ್ಲಿ ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ. ಪಾಕಿಸ್ತಾನವನ್ನು ಗುರಿಯಾಗಿಸುವ ಬಗ್ಗೆ ಮಾತನಾಡುವುದು ಸೂಕ್ತವಲ್ಲ ಎಂದು ಅವರು ಹೇಳಿದರು.
ಭಾರತ ಸರ್ಕಾರದ ವಿರುದ್ಧ ಆ ದೇಶದ ವಿವಿಧ ರಾಜ್ಯಗಳಲ್ಲಿ ದಂಗೆಗಳು ಮತ್ತು ಕ್ರಾಂತಿಗಳು ನಡೆಯುತ್ತಿವೆ. ಒಂದಲ್ಲ, ಎರಡಲ್ಲ... ಹತ್ತಾರು ಚಳುವಳಿಗಳು ನಡೆಯುತ್ತಿವೆ. ನಾಗಾಲ್ಯಾಂಡ್‌ನಿಂದ ಕಾಶ್ಮೀರದವರೆಗೆ ಮತ್ತು ದಕ್ಷಿಣದಲ್ಲಿ ಛತ್ತೀಸ್‌ಗಢ ಮತ್ತು ಮಣಿಪುರದಂತಹ ಸ್ಥಳಗಳಲ್ಲಿ ಭಾರತ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ್ದಾರೆ.
"ಭಾರತ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಪ್ರವಾಸಿಗರು ಸಾವನ್ನಪ್ಪಿದ ಬಗ್ಗೆ ನಮಗೆ ಕಳವಳವಿದೆ. ಮೃತರ ಸಂಬಂಧಿಕರಿಗೆ ನಮ್ಮ ಸಂತಾಪ ಸೂಚಿಸುತ್ತೇವೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ" ಎಂದು ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ದಾಳಿಗೆ ಪಾಕಿಸ್ತಾನ ಮೂಲದ ಭಯೋತ್ಪಾದಕರನ್ನು ದೂಷಿಸುವ ಬಗ್ಗೆ ಭಾರತದಿಂದ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲವಾದರೂ, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಮೊದಲೇ ಪ್ರತಿಕ್ರಿಯಿಸಿದ್ದು ಗಮನಾರ್ಹ.