VIDEO: ಹಿಂದೆ ಎಮ್ಮೆಗಳ ಎದುರು ಚಾನಲ್​ ಲೋಗೋ ಹಿಡಿದು, ಕತ್ತೆಗಳ ಮೇಲೆ ಕುಳಿತು ವರದಿ ಮಾಡಿದ್ದ ಪಾಕಿಸ್ತಾನಿ ಪತ್ರಕರ್ತನ ಮತ್ತೊಂದು ಫನ್ನಿ ವರದಿಗಾರಿಕೆ...

Pakistan 15 Jan 20
Published on

ಲಾಹೋರ್​: ಪಾಕಿಸ್ತಾನದ ಪತ್ರಕರ್ತ ಚಾಂದ್​ ನವಾಬ್​ ಕೆಲವರಿಗಾದರೂ ನೆನಪಿರಬಹುದು. ನ್ಯೂಸ್​ ಚಾನಲ್​ವೊಂದರ ವರದಿಗಾರರಾಗಿದ್ದ ಅವರು ತಮ್ಮ ವಿಭಿನ್ನ ಶೈಲಿಯ ವರದಿಗಾರಿಕೆಯಿಂದಲೇ ಹೆಸರಾದವರು.

ಅದರಲ್ಲೂ 2008ರಲ್ಲಿ ಕರಾಚಿ ರೈಲ್ವೆ ಸ್ಟೇಶನ್​ನ ಮೆಟ್ಟಿಲುಗಳ ಮೇಲೆ ನಿಂತು ಚಾನಲ್​ಗಾಗಿ ಒಂದು ವಿಡಿಯೋ ರೆಕಾರ್ಡ್​ ಮಾಡಲು ಪ್ರಯತ್ನಿಸಿದ ವಿಡಿಯೋವೊಂದು ಇಂಟರ್​ನೆಟ್​​ನಲ್ಲಿ ಸಖತ್ ವೈರಲ್​ ಆಗಿ ನೆಟ್ಟಿಗರ ಮನ ಗೆದ್ದಿತ್ತು. ನವಾಬ್​ ಚಾಂದ್​ ಕ್ಯಾಮರಾ ಎದುರು ನಿಂತು ಮಾತನಾಡಲು ಪ್ರಯತ್ನಿಸುತ್ತಿದ್ದರು, ಆದರೆ ಪದೇಪದೆ ಅಲ್ಲಿನ ಪ್ರಯಾಣಿಕರು ಅವರಿಗೆ ಅಡ್ಡಬರುತ್ತಿದ್ದರು. ಆಗ ಮುಂದೆ ಮಾತನಾಡಲು ಸಾಧ್ಯವಾಗದೆ ತಾಳ್ಮೆ ಕಳೆದುಕೊಂಡಿದ್ದರು. ಅದೊಂದು ಫನ್ನಿ ವಿಡಿಯೋವಾಗಿತ್ತು. ಆಮೇಲೆ ಅದೇ ಸನ್ನಿವೇಶನವನ್ನು ಸಿನಿಮಾ ನಿರ್ದೇಶಕ ಖಬೀರ್​ ಖಾನ್​ ತಮ್ಮ ಭಜರಂಗಿ ಭಾಯಿಜಾನ್​ ಸಿನಿಮಾದಲ್ಲಿ ಮರುಸೃಷ್ಟಿಸಿದ್ದರು. ಅದಾದ ಬಳಿಕವಂತೂ ಚಾಂದ್​ ನವಾಬ್​ ಇನ್ನಷ್ಟು ಪ್ರಸಿದ್ಧತೆ ಪಡೆದಿದ್ದರು.

ಅದಾದ ಮೇಲೆ ಪಾಕಿಸ್ತಾನದ ಇನ್ನೋರ್ವ ಪತ್ರಕರ್ತ ತಮ್ಮ ವಿಚಿತ್ರ ರೀತಿಯ ವರದಿಗಾರಿಕೆಯಿಂದ ಇಂಟರ್​ನೆಟ್​​ನಲ್ಲಿ ಸದ್ದು ಮಾಡಿದ್ದರು. ಪ್ರಾಣಿಗಳ ಅಕ್ರಮ ಸಾಗಣೆ ಬಗ್ಗೆ ವರದಿ ಮಾಡಿದ ಜಿಯೋ ನ್ಯೂಸ್​ನ ಅಮೀನ್ ಹಫೀಜ್​ ಎಂಬುವರು ಕತ್ತೆಯ ಮೇಲೆ ಕುಳಿತು ಸಾಗುತ್ತ ಜನರನ್ನು ಮಾತಾನಾಡಿಸಿದ್ದರು. ಅಷ್ಟೇ ಅಲ್ಲ ಕೋಣ, ಎಮ್ಮೆಗಳ ಎದುರು ಹೋಗಿ ಚಾನಲ್​ನ ಲೋಗೋ ಹಿಡಿದು ಅವರನ್ನೂ ಸಂದರ್ಶನ ಮಾಡಲು ಪ್ರಯತ್ನಿಸಿದ್ದರು. ಆ ವಿಡಿಯೋಗಳು ಕೂಡ ಇಂಟರ್​ನೆಟ್​ನಲ್ಲಿ ಸಿಕ್ಕಾಪಟೆ ಸದ್ದು ಮಾಡಿತ್ತು.

ಈಗ ಅದೇ ಅಮೀನ್ ಹಫೀಜ್​ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಯಾವುದೋ ಸುದ್ದಿಗಾಗಿ ವರದಿ ಮಾಡುವಾಗ ಕ್ಯಾಮರಾ ಎದುರು ಅಮೀನ್​ ಹಫೀಜ್​ ವಿಭಿನ್ನವಾಗಿ ನಿಂತು, ಆ್ಯಕ್ಷನ್ ಮಾಡಿದ್ದಾರೆ. ಚಕ್ರವರ್ತಿಯಂತೆ ಉಡುಪು ಧರಿಸಿ, ವೇಷ-ಭೂಷಣಗಳನ್ನು ಹಾಕಿಕೊಂಡಿದ್ದಾರೆ. ಅಲ್ಲದೆ ಕೈಯಲ್ಲಿ ಖಡ್ಗವೂ ಇದೆ. ಅವರ ಹಿಂದೆ ಇಬ್ಬರು ಸೈನಿಕರಂತೆ ಉಡುಪು ಧರಿಸಿ ನಿಂತುಕೊಂಡಿದ್ದಾರೆ.

ಅಮೀನ್​ ಹಫೀಜ್​ ಅವರು ಕ್ಯಾಮರಾ ಎದುರು ನಿಂತು ರೋಷಾವೇಶದಲ್ಲಿ ವರದಿ ಮಾಡಿದ್ದಾರೆ. ಕೊನೆಯಲ್ಲಿ ಅಮೀನ್ ಹಫೀಜ್​, ಜಿಯೋ ನ್ಯೂಸ್​, ಲಾಹೋರ್​ ಎನ್ನುತ್ತ ಖಡ್ಗವನ್ನು ತೆಗೆದಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಇದು ಸಿಕ್ಕಾಪಟೆ ಫನ್ನಿಯಾಗಿದೆ. ವಿಡಿಯೋವನ್ನು ಇನ್ನೋರ್ವ ಜರ್ನಲಿಸ್ಟ್​ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ವಿಡಿಯೋವನ್ನು ಎರಡು ಲಕ್ಷಕ್ಕೂ ಅಧಿಕ ಬಾರಿ ವೀಕ್ಷಿಸಲಾಗಿದೆ. 2.5ಸಾವಿರಕ್ಕೂ ಅಧಿಕ ಲೈಕ್ಸ್​ಗಳು ಬಂದಿವೆ. ಒಟ್ಟಿನಲ್ಲಿ ಇಂಟರ್​ನೆಟ್​ನಲ್ಲಿ ವಿಪರೀತ ವೈರಲ್ ಆಗುತ್ತಿದೆ.( ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net