ಪಾಕ್​ಗೆ ಜಲಕಂಟಕ: ವಿದ್ಯುತ್​ ಉತ್ಪಾದನೆಗೆ ಹೊಡೆತ

putin (2)
Published on

ಭಾರತದ ಬಳಿಕ ಅಪ್ಘಾನಿಸ್ತಾನ ಕೂಡ ಪಾಕಿಸ್ತಾನಕ್ಕೆ ನೀರು ಹರಿಸುವುದನ್ನು ನಿಲ್ಲಿಸಲಿದೆ. ಇದರಿಂದ ಪಾಕ್​ಗೆ ವಾರ್ಷಿಕ 3 ಸಾವಿರ ಕೋಟಿ ರೂಪಾಯಿಗಳ ಆರ್ಥಿಕ ನಷ್ಟ ಉಂಟಾಗಲಿದೆ ಎಂದಿದ್ದಾರೆ ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕರು. ನೆರೆ ರಾಷ್ಟ್ರ ಅಪ್ಘಾನ್ ಜತೆಯೂ ವೈರತ್ವ ಬೆಳೆಸಿಕೊಂಡಿರುವ ಪಾಕ್ ಈ ಮೂಲಕ ಭೀಕರ ಜಲಸಂಕಟಕ್ಕೆ ಸಿಲುಕಲಿದೆ. ವಿದ್ಯುತ್ ಉತ್ಪಾದನೆ ಕೂಡ ತಗ್ಗಲಿದೆ. ಪಾಕ್ ತಾನೇ ಆಹ್ವಾನಿಸಿಕೊಂಡ ಜಲ ವಿಪತ್ತಿನ ಕುರಿತಾದ ಅವಲೋಕನ ಇಲ್ಲಿದೆ.

‘ಭಯೋತ್ಪಾದನೆಯ ತೋಟ’ ಪಾಕಿಸ್ತಾನ ಈಗ ನೀರಿಲ್ಲದೆ ಸೊರಗಲಿದೆ! ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ 2025ರ ಏಪ್ರಿಲ್​ನಲ್ಲಿ ಪ್ರವಾಸಿಗರ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಪಾಕ್ ವಿರುದ್ಧ ಭಾರತ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿತು. ‘ಆಪರೇಷನ್ ಸಿಂಧೂರ’ ಆರಂಭಿಸುವ ಮೊದಲೇ ಪಾಕ್ ಜತೆಗಿನ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿ, ಶತ್ರುರಾಷ್ಟ್ರಕ್ಕೆ ನೀರು ಹರಿಸುವುದನ್ನು ನಿಲ್ಲಿಸುವ ದಿಟ್ಟ ನಿರ್ಧಾರವನ್ನು ಭಾರತ ಸರ್ಕಾರ ಕೈಗೊಂಡಿತು. ‘ಸಿಂಧೂ ನದಿ ನೀರು ಹರಿಸುವುದನ್ನು ನಿಲ್ಲಿಸಿದರೆ ಭಾರತದಲ್ಲಿ ರಕ್ತ ಹರಿಸುತ್ತೇವೆ’ ಎಂದು ಪಾಕ್ ನಾಯಕರು ಬೆದರಿಕೆ ಹಾಕಿದರು. ಕೇಂದ್ರ ಸರ್ಕಾರ ತಲೆ ಕೆಡಿಸಿಕೊಳ್ಳಲಿಲ್ಲ. ಭಾರತದಿಂದ ಇಂಥ ಕ್ರಮವನ್ನು ನಿರೀಕ್ಷಿಸದಿದ್ದ ಪಾಕ್ ಪೇಚಿಗೆ ಸಿಲುಕಿತು. ಈ ಸಂದಿಗ್ಧ ಸ್ಥಿತಿ ಎದುರಿಸಲು ಸನ್ನದ್ಧವಾಗುವ ಮುಂಚೆಯೇ ಈಗ ಪಾಕ್ ವಿರುದ್ಧ ಅಫ್ಘಾನಿಸ್ತಾನ ಕೂಡ ಜಲಾಸ್ತ್ರ ಪ್ರಯೋಗಿಸಿದೆ!

ಪಾಕಿಸ್ತಾನ- ಅಫ್ಘಾನಿಸ್ತಾನ ನಡುವಿನ ವೈರತ್ವ ಬೆಳೆಯುತ್ತಿದ್ದು, ಪಾಕ್​ಗೆ ನೀರು ಹರಿಸುವುದಿಲ್ಲ, ತನ್ನ ನೀರು ತನ್ನ ಹಕ್ಕು ಎಂದು ಅಫ್ಘಾನ್ ಪ್ರತಿಜ್ಞೆ ಮಾಡಿದೆ. ಅಪ್ಘಾನ್ ತಾಲಿಬಾನ್​ನ ಸುಪ್ರೀಂ ನಾಯಕ ಹಿಬಾತುಲ್ಲಾ ಅಖುನಜಾದಾ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದು, ಕುನಾರ್ ನದಿಗೆ ಅಣೆಕಟ್ಟೆ ನಿರ್ವಿುಸಿ, ಪಾಕ್​ಗೆ ಹರಿಯುವ ನೀರನ್ನು ನಿಲ್ಲಿಸಲಾಗುವುದು ಎಂದಿದ್ದಾರೆ. ‘ಅಣೆಕಟ್ಟು ನಿರ್ಮಾಣ ಕಾರ್ಯಕ್ಕಾಗಿ ವಿದೇಶಿ ಕಂಪನಿಗಳಿಗೆ ಕಾಯದೆ ಅಫ್ಘಾನ್ ಕಂಪನಿಗಳಿಗೇ ಕಾಮಗಾರಿ ಆರಂಭಿಸುವಂತೆ ಸೂಚಿಸಲಾಗಿದೆ’ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಮುಹಜೇರ್ ಫರಾಯಿ ಸ್ಪಷ್ಟಪಡಿಸಿದ್ದಾರೆ. ಕುನಾರ್ ನದಿಗೆ ಅಣೆಕಟ್ಟು ನಿರ್ಮಾಣ ಪೂರ್ಣಗೊಂಡರೆ ಜಲ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾದಂತೆ. ಪಾಕ್ ಮತ್ತು ಅಫ್ಘಾನ್ ಗಡಿಯಲ್ಲಿ ಎರಡೂ ದೇಶಗಳ ಸೇನೆ ನಡುವೆ ಇತ್ತೀಚೆಗೆ ನಡೆದ ಘರ್ಷಣೆಯ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ. ಕುನಾರ್ ನದಿ ಅಫ್ಘಾನಿಸ್ತಾನದ ಪೂರ್ವ ಭಾಗದಿಂದ ಸಾಗಿ, ಪಾಕಿಸ್ತಾನದ ಚಿತ್ರಾಲ್ ಮತ್ತು ಖೈಬರ್ ಪಖ್ತುನ್ಖಾ್ವ ಪ್ರದೇಶಗಳ ಮೂಲಕ ಹರಿಯುತ್ತದೆ.

ಈ ನದಿ ಪಾಕಿಸ್ತಾನದ ಕೃಷಿ, ನೀರಾವರಿ, ಕುಡಿಯುವ ನೀರು ಹಾಗೂ ಜಲವಿದ್ಯುತ್ ಉತ್ಪಾದನೆಗೆ ಅತ್ಯಂತ ಅಗತ್ಯವಾಗಿದೆ. ಈ ನದಿಯ ನೀರು ಕಡಿತಗೊಂಡರೆ ಪಾಕಿಸ್ತಾನದ ಹಲವಾರು ಪ್ರದೇಶಗಳು ಸಂಕಷ್ಟ ಎದುರಿಸಬೇಕಾಗುತ್ತದೆ. ಅಫ್ಘಾನ್​ನ ತಾಲಿಬಾನ್ ಸರ್ಕಾರ ಈ ನದಿಯ ನೀರಿನ ಭಾಗವನ್ನು ತನ್ನದೇ ಅಭಿವೃದ್ಧಿ ಯೋಜನೆಗಳಿಗೆ ಬಳಸಲು ನಿರ್ಧರಿಸಿದೆ.

ಕುಡಿಯುವ ನೀರಿಗೂ ಪರದಾಟ

ಕುನಾರ್-ಕಾಬೂಲ್ ನದಿ ಪಾಕ್​ನ ಪಂಜಾಬ್ ಮತ್ತು ಖೈಬರ್ ಪ್ರಾಂತ್ಯದ ಜೀವನಾಡಿ. ಈಗ ಈ ನದಿಗಳಿಂದ ನೀರು ಹರಿಯುವುದನ್ನು ನಿಲ್ಲಿಸಿದರೆ ಈ ಪ್ರಾಂತ್ಯಗಳ ಕನಿಷ್ಠ ಶೇಕಡ 21ರಷ್ಟು ಬೆಳೆಗಳು ಒಣಗಿ ಹೋಗುತ್ತವೆ. ಮಾತ್ರವಲ್ಲ, ಪಾಕ್​ನ ಪೇಶಾವರ ಹಾಗೂ ನೌಶೇರಾ ನಗರಗಳು ಕುಡಿಯುವ ನೀರಿಗಾಗಿ ಕಾಬೂಲ್ ನದಿ ನೀರಿನ ಮೇಲೆ ಅವಲಂಬಿತವಾಗಿವೆ. ಹೀಗಾಗಿ ಭವಿಷ್ಯದಲ್ಲಿ ಕುಡಿಯುವ ನೀರಿಗೂ ಈ ನಗರಗಳು ಪರದಾಟ ಪಡುವಂತಾಗುತ್ತದೆ.

ಹೆಚ್ಚುವರಿ ವೆಚ್ಚ

  • ಪಾಕಿಸ್ತಾನ ಮೊದಲಿನಿಂದಲೂ ಅಂತರ್ಜಲ ಮತ್ತು ಜಲಮೂಲಗಳ ಮೇಲೆ ಅವಲಂಬಿತವಾಗಿದೆ. ಈಗ ಅಂತರ್ಜಲದಿಂದ ನೀರು ಪಡೆಯಲು ಅದು ವರ್ಷಕ್ಕೆ ಹೆಚ್ಚುವರಿಯಾಗಿ 1825 ಕೋಟಿ ರೂ. ಖರ್ಚು ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ ಎನ್ನುತ್ತಾರೆ ಜಲತಜ್ಞರು.
  • ಕುನಾರ್-ಕಾಬೂಲ್ ನದಿಯ ನೀರು ಲಭ್ಯತೆ ಕಡಿಮೆ ಆಗುವುದರಿಂದ ಹಲವು ನಗರಗಳು ಕುಡಿಯುವ ನೀರಿನ ಸಂಕಷ್ಟ ಎದುರಿಸಲಿವೆ. ಇಂಥ ನಗರಗಳಿಗೆ ಟ್ಯಾಂಕರ್ ಮುಖಾಂತರ ನೀರು ಪೂರೈಕೆ ಮಾಡಲು ವರ್ಷಕ್ಕೆ 500 ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ.
  • ಬಲೂಚಿಸ್ತಾನ ಮತ್ತು ಸಿಂಧ್ ಪ್ರಾಂತ್ಯದಲ್ಲಿ ಉಪು್ಪನೀರನ್ನು ಸ್ವಚ್ಛಗೊಳಿಸಿ, ಅದನ್ನು ಕುಡಿಯಲು ಯೋಗ್ಯವಾಗಿಸುವ ಸಂಬಂಧ ಪಾಕ್ ಯೋಜನೆ ರೂಪಿಸುತ್ತಿದೆ. ಈ ಯೋಜನೆಗೆ 700 ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ.

ಪಾಕ್​ಗೆ ಭಾರಿ ನಷ್ಟ

ಭಾರತ ಮತ್ತು ಅಪ್ಘಾನ್ ಸಾರಿರುವ ‘ವಾಟರ್ ಸ್ಟ್ರೈಕ್’ನಿಂದ ಪಾಕ್​ಗೆ ಪ್ರತಿ ವರ್ಷ 3 ಸಾವಿರ ಕೋಟಿ ರೂ.ಗಳ ಹಾನಿ ಆಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಭಾರತ ಈಗಾಗಲೇ ಸಿಂಧೂ ಜಲ ಒಪ್ಪಂದವನ್ನು ಅನಿರ್ದಿಷ್ಟಾವಧಿಗೆ ರದ್ದುಗೊಳಿಸಿದೆ. ಅಪ್ಘಾನ್ ಸರ್ಕಾರ ಕುನಾರ್ ನದಿಯ ಮೇಲೆ ಅಣೆಕಟ್ಟು ನಿರ್ವಿುಸಲು ಸಿದ್ಧತೆ ನಡೆಸುತ್ತಿದೆ. ಇದಲ್ಲದೆ, ಶಹತೂತ್ ಮತ್ತು ಭಾರತ-ಅಫ್ಘಾನ್ ಫ್ರೆಂಡ್​ಶಿಪ್ ಡ್ಯಾಮ್ ಸಲ್ಮಾ ಮೇಲೂ ನಿರ್ಮಾಣ ಕಾರ್ಯಗಳು ಪ್ರಗತಿಯಲ್ಲಿವೆ. ಶಹತೂತ್ ಅಣೆಕಟ್ಟು ಕಾಬೂಲ್ ನದಿಯ ಮೇಲೆ ನಿರ್ವಣವಾಗುತ್ತಿದೆ. ಭಾರತ ಈ ಅಣೆಕಟ್ಟು ನಿರ್ವಣಕ್ಕಾಗಿ 236 ಮಿಲಿಯನ್ ಡಾಲರ್ ವಿತ್ತೀಯ ಹಾಗೂ ತಂತ್ರಜ್ಞಾನದ ನೆರವನ್ನು ನೀಡಿದೆ.

ಒಂದೇ ವರ್ಷದಲ್ಲಿ 600 ದಾಳಿಗಳು

ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಭಯೋತ್ಪಾದಕ ಸಂಘಟನೆಯು ಪಾಕಿಸ್ತಾನದ ಮೇಲೆ ನಿರಂತರ ದಾಳಿಗಳನ್ನು ನಡೆಸುತ್ತಿದೆ. ಟಿಟಿಪಿಗೆ ತಾಲಿಬಾನ್ ಬೆಂಬಲ ಘೋಷಿಸಿರುವುದು ಮಾತ್ರವಲ್ಲದೆ ಸಂಘಟನೆಯ ಪ್ರಮುಖ ನಾಯಕರಿಗೆ ಅಪ್ಘಾನಿಸ್ತಾನದಲ್ಲಿ ಆಶ್ರಯ ನೀಡಿರುವುದು ಪಾಕ್ ಮುನಿಸಿಗೆ ಕಾರಣ. ಟಿಟಿಪಿ ಒಂದೇ ವರ್ಷದಲ್ಲಿ ಪಾಕಿಸ್ತಾನದಲ್ಲಿ 600 ದಾಳಿಗಳನ್ನು ನಡೆಸಿದ್ದು, ಇದರಲ್ಲಿ ಹಲವು ಸೈನಿಕರು ಮತ್ತು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.

ವಿದ್ಯುತ್ ಉತ್ಪಾದನೆಗೆ ಹೊಡೆತ

ತರಬೈಲಾ ಜಲವಿದ್ಯುತ್ ಯೋಜನೆ ಸೇರಿದಂತೆ ವಿದ್ಯುತ್ ಉತ್ಪಾದನೆಯ ಹಲವು ಯೋಜನೆಗಳು ಸಂಕಷ್ಟಕ್ಕೆ ಸಿಲುಕಲಿವೆ. ವಿದ್ಯುತ್ ಉತ್ಪಾದನೆ ಹಾಗೂ ಪೂರೈಕೆ ಕಡಿಮೆಯಾಗುವುದರಿಂದ ಸ್ವಾಭಾವಿಕವಾಗಿ ಕೈಗಾರಿಕಾ ಉತ್ಪಾದನೆಯೂ ಇಳಿಕೆಯಾಗುತ್ತದೆ. ಅದರಿಂದ ಆರ್ಥಿಕತೆಗೂ ಪೆಟ್ಟು ಬೀಳುತ್ತದೆ.

ಸ್ನೇಹಿತರೇ ವೈರಿಗಳಾದರು!

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಒಂದು ಕಾಲದಲ್ಲಿ ಮಿತ್ರರಾಷ್ಟ್ರಗಳು. ಕಾಲಚಕ್ರ ಬದಲಾಗಿದ್ದು, ಪ್ರಸಕ್ತ ಇವೆರಡೂ ದೇಶಗಳು ಬದ್ಧವೈರಿಗಳಾಗಿ ಮಾರ್ಪಟ್ಟಿವೆ. ಅದರಲ್ಲೂ, ತಾಲಿಬಾನ್ ಹಿಡಿತದಲ್ಲಿರುವ ಅಪ್ಘಾನಿಸ್ತಾನ ಭಾರತದೊಂದಿಗೆ ಸ್ನೇಹಹಸ್ತ ಚಾಚಿರುವುದು ಪಾಕ್​ಗೆ ನುಂಗಲಾರದ ತುತ್ತಾಗಿ ಪರಿಣಮಸಿದೆ. ಅಫ್ಘಾನ್ ವಿದೇಶಾಂಗ ಮಂತ್ರಿ ಅಮೀರ್ ಖಾನ್ ಮುತ್ತಾಕಿ ಇತ್ತೀಚೆಗೆ ಒಂದು ವಾರದ ಕಾಲ ಭಾರತಕ್ಕೆ ಭೇಟಿ ನೀಡಿ, ವಿದೇಶಾಂಗ ಸಚಿವ ಜೈಶಂಕರ್ ಜತೆ ಚರ್ಚೆ ನಡೆಸಿದರು. ಇದರ ಪರಿಣಾಮವಾಗಿ ಅಫ್ಘಾನ್​ನಲ್ಲಿ ಭಾರತ ತನ್ನ ರಾಯಭಾರಿ ಕಚೇರಿಯನ್ನು ಪೂರ್ಣಪ್ರಮಾಣದಲ್ಲಿ ಆರಂಭಿಸಿರುವುದು, ಭಾರತವಿರೋಧಿ ಚಟುವಟಿಕೆಗಳಿಗೆ ತನ್ನ ನೆಲದಿಂದ ಆಸ್ಪದ ನೀಡುವುದಿಲ್ಲ ಎಂದು ಅಫ್ಘಾನ್ ಸರ್ಕಾರ ಹೇಳಿರುವುದು ಸೇರಿದಂತೆ ಸರಣಿ ಬೆಳವಣಿಗೆಗಳು ಪಾಕ್​ನ ನಿದ್ದೆಗೆಡಿಸಿದೆ. ಸೌದಿ ಅರೇಬಿಯಾದ ಜತೆ ರಕ್ಷಣಾ ಒಪ್ಪಂದ ಮಾಡಿಕೊಂಡು ಬೀಗುತ್ತಿದ್ದ ಪಾಕ್, ಅಫ್ಘಾನ್ ಭಾರತಕ್ಕೆ ಹತ್ತಿರವಾಗಬಹುದು ಎಂದು ಊಹಿಸಿಯೂ ಇರಲಿಲ್ಲ. ಹೀಗಾಗಿ, ಈ ಅನಿರೀಕ್ಷಿತ ಮತ್ತು ಮಹತ್ವದಾದ ಬೆಳವಣಿಗೆಯು ಪಾಕ್​ಗೆ ತಳಮಳ ಹುಟ್ಟಿಸಿದೆ. ಇದರ ಬೆನ್ನಲ್ಲೇ ಅಫ್ಘಾನ್​ನೊಂದಿಗೆ ಸೇನಾ ಸಂಘರ್ಷ ಕೂಡ ಆರಂಭವಾಗಿದೆ. ಸದ್ಯದ ಮಟ್ಟಿಗೆ ಕದನವಿರಾಮ ಏರ್ಪಟ್ಟಿದ್ದರೂ, ಉಭಯ ರಾಷ್ಟ್ರಗಳ ನಡುವಿನ ಪರಿಸ್ಥಿತಿ ಬೂದಿ ಮೆಚ್ಚಿದ ಕೆಂಡದಂತಿದೆ.

ಅವನತಿಯ ಆರಂಭ

ಕುನಾರ್ ನದಿಗೆ ಅಣೆಕಟ್ಟು ನಿರ್ವಿುಸುವ ನಿರ್ಧಾರವನ್ನು ಅಪ್ಘಾನ್ ಸರ್ಕಾರ ಪ್ರಕಟಿಸುತ್ತಿದ್ದಂತೆ, ‘ಇದು ಪಾಕಿಸ್ತಾನ ಅವನತಿಯ ಆರಂಭ’ ಎಂದು ಪಾಕ್​ನಲ್ಲಿನ ಪತ್ರಕರ್ತರು, ಚಿಂತಕರು ಕಳವಳ ವ್ಯಕ್ತಪಡಿಸಿದ್ದಾರೆ. ಭಾರತ ಸಿಂಧೂ ಜಲ ಒಪ್ಪಂದ ರದ್ದುಗೊಳಿಸಿರುವುದರಿಂದ ಈಗಾಗಲೇ ಪಾಕ್ ನೀರಿನ ಕೊರತೆಯನ್ನು ಎದುರಿಸುತ್ತಿದ್ದು, ಕುನಾರ್ ಅಣೆಕಟ್ಟೆ ನಿರ್ವಣಗೊಂಡರೆ ಕುಡಿಯುವ ನೀರಿಗೂ ಪರದಾಡಬೇಕಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ನಡುವೆ ಅಫ್ಘಾನ್​ನಿಂದ ಪಾಕ್​ಗೆ ಉತ್ಪನ್ನಗಳ ರಫ್ತು ಕೂಡ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದ ಪಾಕ್​ನಲ್ಲಿ ಟೊಮ್ಯಾಟೋ ಕೆಜಿ ಬೆಲೆ 500-600 ರೂ.ಗೆ ತಲುಪಿದೆ. ಆಂತರಿಕವಾಗಿ ಸೊರಗುತ್ತಿರುವ ಪಾಕ್ ಈಗ ಅಪ್ಘಾನ್ ಸರ್ಕಾರವನ್ನು ಹಣೆಯಲು ಕಾರ್ಯತಂತ್ರ ರೂಪಿಸುತ್ತಿದೆಯಾದರೂ, ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತ ಬಾಹ್ಯ ಒತ್ತಡಕ್ಕೆ ಮಣಿಯದಿರಲು ನಿರ್ಧರಿಸಿದೆ.

ತಲೆಕೆಳಗಾದ ಲೆಕ್ಕಾಚಾರ

ಅಫ್ಘಾನಿಸ್ತಾನದಲ್ಲಿ 1996-2001ರ ಅವಧಿಯಲ್ಲೂ ತಾಲಿಬಾನ್ ಆಡಳಿತವಿತ್ತು. ಆಗ ಪಾಕಿಸ್ತಾನ ಅಪ್ಘಾನ್​ನೊಂದಿಗೆ ಉತ್ತಮ ಬಾಂಧವ್ಯ ಹೊಂದಿತ್ತು. 2001ರಲ್ಲಿ ತಾಲಿಬಾನ್ ಆಡಳಿತ ಪತನಗೊಂಡ ಬಳಿಕವೂ ಈ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಮುಂಚಿನಂತೆಯೇ ಮುಂದುವರಿದಿತ್ತು. 2021ರಲ್ಲಿ ಅಮೆರಿಕ ತನ್ನ ಸೈನಿಕರನ್ನು ಅಪ್ಘಾನ್​ನಿಂದ ವಾಪಸ್ ಕರೆಸಿಕೊಂಡ ಬಳಿಕ ಮತ್ತೆ ತಾಲಿಬಾನ್ ಆಡಳಿತ ಆರಂಭವಾಯಿತು. ತಾಲಿಬಾನ್ ಆಡಳಿತದ ಆರಂಭಿಕ ವರ್ಷಗಳಲ್ಲಿ ಪಾಕಿಸ್ತಾನ ಅಫ್ಘಾನ್​ನೊಂದಿಗೆ ಸ್ನೇಹ ಹೊಂದಿತ್ತಾದರೂ, ಇತ್ತೀಚಿನ ದಿನಗಳಲ್ಲಿ ಅದು ಹಳಸಿದೆ. ತಾಲಿಬಾನಿಗಳನ್ನು ಪೋಷಿಸಿ, ಬೆಳೆಸಿದ್ದೇ ಪಾಕಿಸ್ತಾನ. ಹಾಗಾಗಿ, ತಾಲಿಬಾನ್ ಆಡಳಿತವನ್ನು ಸದಾ ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು ಎಂಬ ಲೆಚ್ಚಾಚಾರದಲ್ಲಿ ಪಾಕಿಸ್ತಾನ ಇತ್ತು. ಆದರೆ, ಎರಡನೇ ಬಾರಿ ಅಧಿಕಾರಕ್ಕೆ ಬಂದ ತಾಲಿಬಾನ್ ತನ್ನ ಆಡಳಿತ ಶೈಲಿಯನ್ನು ಬದಲಿಸಿಕೊಂಡಿದೆ. ಅಲ್ಲದೆ, ಜಾಗತಿಕ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಭಾರತ ಸೇರಿದಂತೆ ಇತರ ರಾಷ್ಟ್ರಗಳೊಂದಿಗೆ ಉತ್ತಮ ರಾಜತಾಂತ್ರಿಕ ಸಂಬಂಧ ಸ್ಥಾಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಪಾಕಿಸ್ತಾನದ ಒತ್ತಡಕ್ಕೆ ಮಣಿಯದೆ ಸ್ವತಂತ್ರ ನಿರ್ಧಾರ ಕೈಗೊಳ್ಳುತ್ತಿದೆ. ಪಾಕಿಸ್ತಾನದ ಕೈಗೊಂಬೆಯಾಗಿ ಇರಲು ನಿರಾಕರಿಸುತ್ತಿದೆ. ಪಾಕ್ ಕೆಂಗಣ್ಣು ಬೀರಲು ಇದುವೇ ಪ್ರಮುಖ ಕಾರಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net