ನಾವು ಈಗಾಗಲೇ ಚಂದ್ರನ ಮೇಲಿದ್ದೇವೆ! ಪಾಕ್​ ಪ್ರಜೆ ಕೊಟ್ಟ ಕಾರಣ ಕೇಳಿದ್ರೆ ನೀವು ನಗೋದು ಗ್ಯಾರಂಟಿ

Chandrayaan 3 Pak Youth
Published on

ಇಸ್ಲಮಾಬಾದ್​: ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್​ ಲ್ಯಾಂಡ್​ ಮಾಡುವ ಮೂಲಕ ಚಂದ್ರಯಾನ-3 ನೌಕೆ ಹೊಸ ಇತಿಹಾಸ ಬರೆದಿದೆ. ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳ ಸಾಲಿಗೆ ಭಾರತವೂ ಸೇರಿದೆ. ಭಾರತದ ಈ ಐತಿಹಾಸಿಕ ಸಾಧನೆಗೆ ಜಾಗತಿಕವಾಗಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಪಾಕಿಸ್ತಾನಿಗಳಿಗೆ ಮಾತ್ರ ಇದು ಖುಷಿ ತಂದಿಲ್ಲ. ಅದು ಸಹಜವೂ ಹೌದು.

ಆದರೂ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವರಾಗಿದ್ದ ಫವಾದ್ ಚೌಧರಿ ಸೇರಿದಂತೆ ಹಲವರು ಚಂದ್ರನ ಮೇಲಿನ ಭಾರತದ ಇಳಿಯುವಿಕೆಯನ್ನು ಶ್ಲಾಘಿಸಿದರು. ಅಲ್ಲದೆ, ಫವಾದ್​ ಚೌದರಿ, ರಾಷ್ಟ್ರೀಯ ದೂರದರ್ಶನದಲ್ಲಿ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡುವಂತೆ ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಿದರು. ಈ ವಿನಂತಿ ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಚರ್ಚೆಯನ್ನು ಹುಟ್ಟುಹಾಕಿತು.

ಇದೀಗ ಭಾರತದ ಚಂದ್ರಯಾನ 3 ಯಶಸ್ಸಿನ ಬಗ್ಗೆ ಪಾಕಿಸ್ತಾನದ ಯುವಕ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಭಾರತದ ಚಂದ್ರಯಾನ ಯಶಸ್ಸನ್ನು ಪಾಕಿಸ್ತಾನದ ಪ್ರಸ್ತುತ ಸ್ಥಿತಿಗೆ ಹೋಲಿಕೆ ಮಾಡಿ, ಪಾಕ್​ ಯುವಕ ಹಾಸ್ಯ ಚಟಾಕಿ ಹಾರಿಸಿದ್ದಾನೆ. ಈ ವಿಡಿಯೋವನ್ನು ಪಾಕಿಸ್ತಾನಿ ಯೂಟ್ಯೂಬರ್​ ಸೋಹಿಬ್​ ಚೌಧರಿ ಪೋಸ್ಟ್​ ಮಾಡಿದ್ದಾರೆ.

ವೈರಲ್ ವಿಡಿಯೋದಲ್ಲಿ, ಪಾಕಿಸ್ತಾನಿ ಪ್ರಜೆ, ನಾವು ಈಗಾಗಲೇ ಚಂದ್ರನ ಮೇಲೆ ವಾಸಿಸುತ್ತಿದ್ದೇವೆ ಎಂದು ವ್ಯಂಗ್ಯವಾಡಿದ್ದಾರೆ. ಅದಕ್ಕೆ ಕಾರಣ ನೀಡಿರುವ ಪಾಕ್​ ಪ್ರಜೆ, ಚಂದ್ರ ಮತ್ತು ಪಾಕಿಸ್ತಾನ ಎರಡಕ್ಕೂ ನೀರು, ಅನಿಲ ಮತ್ತು ವಿದ್ಯುತ್‌ನಂತಹ ಅಗತ್ಯ ವಸ್ತುಗಳ ಕೊರತೆಯಿದೆ ಎಂದು ಹಾಸ್ಯ ಚಟಾಕಿ ಹಾರಿಸುವ ಮೂಲಕ ಪಾಕ್​ನ ಕರಾಳ ಸ್ಥಿತಿಯನ್ನೂ ಬಹಿರಂಗಪಡಿಸಿದ್ದಾರೆ. ನಮ್ಮ ಪರಿಸ್ಥಿತಿ ಮುಂದುವರಿದರೆ ಪಾಕಿಸ್ತಾನಿಗಳು ನಿಜವಾಗಿಯೂ ಚಂದ್ರನತ್ತ ಸಾಗುವ ಅಗತ್ಯವಿಲ್ಲ ಎಂದಿದ್ದಾರೆ.

ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆದಿದೆ. ಪಾಕಿಸ್ತಾನಿಗಳು ಅತ್ಯಂತ ಕಷ್ಟದ ಸಮಯದಲ್ಲೂ ಅತ್ಯುತ್ತಮ ಹಾಸ್ಯಪ್ರಜ್ಞೆಯನ್ನು ಹೊಂದಿದ್ದಾರೆ. ಅವರು ಅತ್ಯುತ್ತಮ ಸ್ಟ್ಯಾಂಡ್-ಅಪ್ ಪ್ರದರ್ಶನಕಾರರನ್ನು ನಿರ್ಮಿಸುವುದರಲ್ಲಿ ಆಶ್ಚರ್ಯವಿಲ್ಲ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಹೀಗೆ ಸಾಕಷ್ಟು ಮಂದಿ ಕಾಮೆಂಟ್​ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ತಿಳಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net