ವಿದೇಶಿ ಪಿತೂರಿಗೆ ಪುರಾವೆ ನೀಡಿ; ಇಂದು ವಿಚಾರಣೆ ಮುಂದುವರಿಕೆ..

Pak
Published on

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ರಾಜಕೀಯ ಹೈಡ್ರಾಮಾ ಬುಧವಾರವೂ ಮುಂದುವರಿದಿದೆ. ಬಹುಮತ ಇಲ್ಲದ ಕಾರಣ ಅಸೆಂಬ್ಲಿ ವಿಸರ್ಜಿಸಿದ್ದಾಗಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಸುಪ್ರೀಂಕೋರ್ಟ್ ವಿಚಾರಣೆ ವೇಳೆ ತಿಳಿಸಿದರು. ಈ ನಡುವೆ, ಸಾರ್ವತ್ರಿಕ ಚುನಾವಣೆ ನಡೆಸಲು ದಿನಾಂಕವನ್ನು ಪ್ರಸ್ತಾಪಿಸುವಂತೆ ಚುನಾವಣಾ ಆಯೋಗಕ್ಕೆ ಪ್ರೆಸಿಡೆಂಟ್ ಆರಿಫ್ ಅಲ್ವಿ ನಿರ್ದೇಶನ ನೀಡಿದ್ದಾರೆ.

ಸಂಸತ್ ವಿಸರ್ಜನೆ ಮತ್ತು ಅವಿಶ್ವಾಸ ಗೊತ್ತುವಳಿ ವಜಾ ಬಗ್ಗೆ ಸ್ವಯಂ ಪ್ರೇರಿತ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಉಮರ್ ಅತಾ ಬಂಡಿಯಲ್, ನ್ಯಾಯ ಮೂರ್ತಿಗಳಾದ ಇಜಾಜುಲ್ ಅಹ್​ಸನ್, ಮೊಹಮ್ಮದ್ ಅಲಿ ಮಜ್ಹರ್, ಮುನೀಬ್ ಅಖ್ತರ್, ಜಮಾಲ್ ಖಾನ್ ಮನ್​ಡೊಖೈಲ್ ಒಳಗೊಂಡ ಪಂಚ ಸದಸ್ಯರ ಪೀಠ, ಸರ್ಕಾರ ಉರುಳಿಸಲು ವಿದೇಶಿ ಸಂಚು ನಡೆದಿತ್ತು ಎಂಬ ಆಡಳಿತ ಪಕ್ಷದ ಆರೋಪದ ಬಗ್ಗೆ ವಿವರ ಅಗತ್ಯ ಎಂದು ಹೇಳಿತು.

ಅಮೆರಿಕದ ಹಿರಿಯ ರಾಜತಾಂತ್ರಿಕ ಡೊನಾಲ್ಡ್​ಲು ವಿದೇಶಿ ಪಿತೂರಿಯಲ್ಲಿ ಭಾಗಿ ಯಾದವರು. ಅವಿಶ್ವಾಸ ಗೊತ್ತುವಳಿಯನ್ನು ವಿಪಕ್ಷ ಮಂಡಿಸುವುದರ ಹಿಂದೆ ಇವರ ಕೈವಾಡ ಇದೆ. ಹೀಗಾಗಿ ಅವಿಶ್ವಾಸ ಗೊತ್ತುವಳಿಯಲ್ಲಿ ವಿದೇಶಿ ಪಿತೂರಿ ಕುರಿತು ತನಿಖೆ ನಡೆಸಬೇಕು ಎಂದು ಪ್ರಧಾನಿ ಇಮ್ರಾನ್ ಖಾನ್ ಪರ ವಕೀಲರು ಸುಪ್ರೀಂ ಕೋರ್ಟ್​ಗೆ ಮನವಿ ಮಾಡಿದರು. ಅಮೆರಿಕದಲ್ಲಿನ ಪಾಕ್ ಮಾಜಿ ರಾಯಭಾರಿ ಅಸಾದ್ ಮಜೀದ್ ಖಾನ್ ಮಾರ್ಚ್ 7ರಂದು ಕಳುಹಿಸಿದ ತಂತಿ ಸಂದೇಶ ಪ್ರಕಾರ, ಡೊನಾಲ್ಡ್​ಲು ಹೆಸರು ಮತ್ತು ಅವಿಶ್ವಾಸ ಗೊತ್ತುವಳಿ ವಿಚಾರ ಪ್ರಸ್ತಾಪವಾಗಿತ್ತು. ಈ ಅಂಶವನ್ನು ನ್ಯಾಯಪೀಠದ ಮುಂದೆ ಉಲ್ಲೇಖಿಸಿದರು. ಆದರೆ, ಈಗಾಗಲೇ ವಿಪಕ್ಷ, ಅಮೆರಿಕ ಈ ಆರೋಪವನ್ನು ತಳ್ಳಿಹಾಕಿದೆ. ಪಾಕ್ ಸೇನೆ ಕೂಡ ವಿದೇಶಿ ಷಡ್ಯಂತ್ರದ ಬಗ್ಗೆ ಸಾಕ್ಷ್ಯವಲ್ಲ ಎಂದಿದೆ.

ಪ್ರತಿಭಟನೆ ನಡೆಸಲು ಬೆಂಬಲಿಗರಿಗೆ ಇಮ್ರಾನ್ ಕರೆ: ಪಾಕಿಸ್ತಾನದ ಸರ್ಕಾರ ಪತನಗೊಳಿಸುವಲ್ಲಿ ವಿದೇಶಿ ಹಸ್ತಕ್ಷೇಪ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಬೇಕು. ಪಾಕಿಸ್ತಾನದ ಸಾರ್ವಭೌಮತೆ ಕಾಪಾಡಲು ಇದು ಅಗತ್ಯ ಎಂದು ಪ್ರಧಾನಿ ಇಮ್ರಾನ್ ಖಾನ್ ಸಾರ್ವಜನಿಕವಾಗಿ ಕರೆ ನೀಡಿದ್ದಾರೆ. ಪರೋಕ್ಷವಾಗಿ ವಿಪಕ್ಷ ನಾಯಕರಾದ ಮಿರ್ ಜಾಫರ್ ಮತ್ತು ಮಿರ್ ಸಾದಿಕ್ ಅವರನ್ನು ಟೀಕಿಸಿ, ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿದವರು ಎಂದು ಆರೋಪಿಸಿದ್ದಾರೆ.

ಜನರಲ್ ಬಜ್ವಾ ವಜಾಕ್ಕೆ ಯತ್ನ: ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ ಅವರನ್ನು ವಜಾಗೊಳಿಸುವುದಕ್ಕೆ ಪ್ರಧಾನಿ ಇಮ್ರಾನ್ ಖಾನ್ ಪ್ರಯತ್ನ ಮಾಡಿದ್ದರು ಎಂದು ಪಾಕಿಸ್ತಾನ್ ತೆಹ್ರೀಕ್ ಏ ಇನ್ಸಾಫ್ ಪಾರ್ಟಿಯ ಬಂಡಾಯ ನಾಯಕ ಆಮಿರ್ ಲಿಯಾಖತ್ ಹುಸೇನ್ ಆರೋಪಿಸಿದ್ದಾರೆ. ಪಾಕಿಸ್ತಾನದಲ್ಲಿ ಚುನಾಯಿತ ಸರ್ಕಾರಕ್ಕಿಂತ ಸೇನೆಯೇ ಹೆಚ್ಚು ಪ್ರಭಾವಶಾಲಿ ಆಗಿದೆ.

ಬೇಗ ಎಲೆಕ್ಷನ್ ನಡೆಸಿ: ಪ್ರೆಸಿಡೆಂಟ್ ಆರಿಫ್ ಅಲ್ವಿ ಅವರು ಚುನಾವಣಾ ಸಿದ್ಧತೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದ್ದಾರೆ. 90 ದಿನಗಳ ಒಳಗೆ ಸಾರ್ವತ್ರಿಕ ಚುನಾವಣೆ ನಡೆಸಬೇಕು. ಅದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಪತ್ರಕರ್ತರ ವಿರುದ್ಧ ಆಕ್ರೋಶ: ಇಮ್ರಾನ್ ಖಾನ್ ಆಪ್ತ ಮಾಜಿ ಸಚಿವ ಫವಾದ್ ಚೌಧುರಿ ಸುಪ್ರೀಂ ಕೋರ್ಟ್ ಹೊರಗೆ ಮಾಧ್ಯಮದವರ ಮೇಲೆ ಬುಧವಾರ ರೇಗಾಡಿದರು. ಪತ್ರಕರ್ತರೊಬ್ಬರು ಇಮ್ರಾನ್ ಖಾನ್ ಪತ್ನಿ ಬುಷ್ರಾ ಬೀಬಿಯ ಗೆಳತಿ ಫರಾಹ್ ಖಾನ್ ಭ್ರಷ್ಟಾಚಾರದ ವಿಚಾರ ಕುರಿತು ಪ್ರಶ್ನೆ ಕೇಳಿದ್ದರು. ಇದರಿಂದ, ಕುಪಿತರಾದ ಫವಾದ್ ಆ ಪತ್ರಕರ್ತನನ್ನು ಬಾಡಿಗೆ ಭಂಟ ಎಂದು ಬೈದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net