

ಪೆಶಾವರ: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಪಾಕಿಸ್ತಾನದ ಹಿರಿಯ ಪತ್ರಕರ್ತರೊಬ್ಬರನ್ನು ಅಪರಿಚತ ಬಂದೂಕುಧಾರಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮಂಗಳವಾರ ತಮ್ಮ ಸ್ನೇಹಿತನ ಜೊತಗೆ ಪತ್ರಕರ್ತ ಖಲೀಲ್ ಜಿಬ್ರಾನ್ ಅವರು ಕಾರಿನಲ್ಲಿ ತಮ್ಮ ನಿವಾಸಕ್ಕೆ ಹೊರಟಿದ್ದರು. ಈ ಸಂದರ್ಭದಲ್ಲಿ ಜಿಲ್ಲೆಯ ಲಂಡಿ ಕೋಟಲ್ ಎಂಬಲ್ಲಿ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿದರು. ಬಳಿಕ ಜಿಬ್ರಾನ್ ಅವರನ್ನು ಕಾರಿನಿಂದ ಹೊರೆಗೆಳೆದು ಈ ಕೃತ್ಯವೆಸಗಿದ್ದಾರೆ. ಜಿಬ್ರಾನ್ ಅವರ ಜೊತೆಗಿದ್ದ ಸ್ನೇಹಿತ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡಿನ ದಾಳಿಯಲ್ಲಿ ಸಾಜಿದ್ ಎಂದು ಗುರುತಿಸಲಾದ ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಮೃತ ಪತ್ರಕರ್ತ ಜಿಬ್ರಾನ್ ಅವರಿಗೆ ಭಯೋತ್ಪಾದಕರಿಂದ ಅಗ್ಗಾಗ್ಗೆ ಬೆದರಿಕೆ ಕರೆಗಳು ಬರುತ್ತಿದ್ದವು ಎನ್ನಲಾಗಿದೆ. ಪತ್ರಕರ್ತ ಜಿಬ್ರಾನ್ ಹತ್ಯೆ ಖಂಡಿಸಿ ಪತ್ರಕರ್ತರು ಖೈಬರ್-ಪಾಕ್-ಅಫ್ಗಾನ್ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ಈ ಕೃತ್ಯವೆಸಗಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಬುಡಕಟ್ಟು ಜಿಲ್ಲೆಯ ಮಜ್ರಿನಾ ಪ್ರದೇಶ ಉಗ್ರಗಾಮಿಗಳ ತಾಣವಾಗಿದೆ. ಜಿಬ್ರಾನ್ ಹತ್ಯೆಯನ್ನು ಕುಟುಂಬದ ಮೂಲಗಳು ದೃಢಪಡಿಸಿವೆ ಮತ್ತು ಹಿರಿಯ ಪತ್ರಕರ್ತರೊಬ್ಬರು ಇದು ಉದ್ದೇಶಿತ ಹತ್ಯೆ ಎಂದು ಆರೋಪಿಸಿದ್ದಾರೆ.
ಪತ್ರಕರ್ತ ಜಿಬ್ರಾನ್ ಹತ್ಯೆಯನ್ನು ವಿದ್ಯುನ್ಮಾನ ಮಾಧ್ಯಮ ಸಂಪಾದಕರ ಸಂಘ ಖಂಡಿಸಿದೆ ಮತ್ತು ದಾಳಿಕೋರನನ್ನು ಬಂಧಿಸುವಂತೆ ಒತ್ತಾಯಿಸಿದೆ. ಖೈಬರ್ ಯೂನಿಯನ್ ಆಫ್ ಜರ್ನಲಿಸ್ಟ್ಸ್ ಮತ್ತು ಪೇಶಾವರ ಪ್ರೆಸ್ ಕ್ಲಬ್ ಸಹ ಪ್ರಾಂತೀಯ ಸರ್ಕಾರವು ಪತ್ರಕರ್ತರ ರಕ್ಷಣೆ ಮತ್ತು ಭದ್ರತೆಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿದೆ.