ಭಾರತದಲ್ಲಿ ಪಿಒಕೆ ವಿಲೀನಕ್ಕೆ ಹೋರಾಟ ಪಾಕ್ ಸರ್ಕಾರ, ಸೇನೆ ವಿರುದ್ಧ ಭುಗಿಲೆದ್ದ ಪ್ರತಿಭಟನೆ

Pok
Published on

ಇಸ್ಲಾಮಾಬಾದ್: ಭಾರತದ ಜತೆ ವಿಲೀನಗೊಳಿಸುವಂತೆ ಒತ್ತಾಯಿಸಿ ಪಾಕ್ ಆಕ್ರಮಿತ ಕಾಶ್ಮೀರದ ಜನರು ಕಳೆದ ಎರಡು ವಾರಗಳಿಂದ ಪಾಕಿಸ್ತಾನದ ಸೇನೆ ಮತ್ತು ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ.

ಈಗಾಗಲೇ ಆರ್ಥಿಕ ಬಿಕ್ಕಟ್ಟು, ಆಹಾರ ಸಂಕಷ್ಟ, ಬಲೂಚಿಸ್ತಾನದಲ್ಲಿ ದಂಗೆ, ಆಫ್ಘಾನಿಸ್ತಾನದೊಂದಿಗೆ ಗಡಿ ಸಂಘರ್ಷ, ತಾಲಿಬಾನ್ ಉಗ್ರರ ಅಟ್ಟಹಾಸ ಹೀಗೆ ಸಮಸ್ಯೆಗಳ ಸರಮಾಲೆಯನ್ನೇ ಹೊದ್ದಿರುವ ಪಾಕಿಸ್ತಾನಕ್ಕೆ ಮತ್ತೊಂದು ಹೊಸ ಸಂಕಷ್ಟ ಎದುರಾಗಿದೆ. ಗಿಲ್ಗಿಟ್, ಬಾಲ್ಟಿಸ್ತಾನ್ ಪ್ರದೇಶಗಳನ್ನು ಭಾರತದೊಂದಿಗೆ ವಿಲೀನಗೊಳಿಸಬೇಕೆಂದು ಒತ್ತಾಯಿಸಿ ಪಾಕ್ ಆಕ್ರಮಿತ ಕಾಶ್ಮೀರದ ಜನರು ಹೋರಾಟ ಮಾಡುತ್ತಿದ್ದಾರೆ. ಎರಡು ದೇಶಗಳನ್ನು ಸಂರ್ಪಸುವ ಕಾರ್ಗಿಲ್ ರಸ್ತೆಯನ್ನು ಪುನಃ ತೆರೆಯುವಂತೆ ಪ್ರತಿಭಟನಾಕಾರರು ಒತ್ತಾಯಿಸುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಪಾಕ್ ಸರ್ಕಾರವು ಗಿಲ್ಗಿಟ್ ಮತ್ತು ಬಾಲ್ಟಿಸ್ಥಾನವನ್ನು ಆಕ್ರಮಿಸಿಕೊಂಡಿದೆ. ಆದರೆ ಸೌಲಭ್ಯ ಒದಗಿಸುವ ವಿಚಾರದಲ್ಲಿ ತಾರತಮ್ಯನೀತಿ ಅನುಸರಿಸುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮನ್ನು ಭಾರತದೊಂದಿಗೆ ಸೇರಿಸುವಂತೆ ಒತ್ತಾಯಿಸುತ್ತಿದ್ದಾರೆ.

ಒಂದು ತೊಲ ಚಿನ್ನದ ಬೆಲೆ 1.85 ಲಕ್ಷ ರೂ.!

ಪಾಕಿಸ್ತಾನದಲ್ಲಿ ಚಿನ್ನದ ಬೆಲೆ ಮುಗಿಲು ಮುಟ್ಟಿದ್ದು, ಒಂದು ತೊಲ (10 ಗ್ರಾಂ) ಚಿನ್ನದ ಬೆಲೆ 1,86,500 ರೂ.ಗೆ ತಲುಪಿದೆ. ವಿಶ್ವದ ಇತರೆ ದೇಶಗಳಿಗೆ ಹೋಲಿಸಿದರೆ ಪಾಕ್​ನಲ್ಲಿ ಚಿನ್ನದ ಬೆಲೆ ಹೆಚ್ಚಾಗಿದೆ. ಅಲ್ ಪಾಕಿಸ್ತಾನ್ ಸರಾಫಾ ಜೆಮ್್ಸ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ಪ್ರಕಾರ, ಪಾಕ್​ನಲ್ಲಿ ಚಿನ್ನದ ಬೆಲೆಯು ವಿಶ್ವ ಮಾರುಕಟ್ಟೆಗಿಂತ ಹೆಚ್ಚಾಗಿದೆ. ಈ ದೇಶವು ಆಮದು ಮೂಲಕ ಚಿನ್ನದ ಬೇಡಿಕೆಯನ್ನು ಪೂರೈಸುತ್ತದೆ. ಚಿನ್ನ ಖರೀದಿಸುವವರಲ್ಲಿ ಹೆಚ್ಚಿನವರು ಹೂಡಿಕೆದಾರರೇ ಆಗಿದ್ದಾರೆ ಎಂದು ತಜ್ಞರು ಹೇಳಿದ್ದಾರೆ. ಬ್ಲಾಕ್ ಮಾರ್ಕೆಟ್​ನಲ್ಲಿ ಪ್ರತಿ ಡಾಲರ್ ಎದುರು ಪಾಕಿಸ್ತಾನಿ ರೂಪಾಯಿ ಮೌಲ್ಯ 280ರಿಂದ 290 ರೂ.ಗಳಷ್ಟಿದೆ. ಅಂತರ್ ಬ್ಯಾಂಕ್ ಮಾರುಕಟ್ಟೆಯಲ್ಲಿ 228 ರೂ.ಗೆ ವಹಿವಾಟು ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net