

ಇಸ್ಲಾಮಾಬಾದ್: ರಾಜಕೀಯವಾಗಿ ನಾಟಕೀಯ ತಿರುವು ಪಡೆಯುತ್ತಿರುವ ಪಾಕಿಸ್ತಾನದಲ್ಲಿ ಎರಡನೇ ದಿನವೂ ಗೊಂದಲ ಮುಂದುವರಿದಿದೆ. ಅಧ್ಯಕ್ಷ ಆರಿಫ್ ಅಲ್ವಿ ಹಂಗಾಮಿ ಪ್ರಧಾನಿಯನ್ನು ನೇಮಕ ಮಾಡಿಲ್ಲ. ಬದಲಿಗೆ ಅರ್ಹರ ಹೆಸರನ್ನು ಶಿಫಾರಸು ಮಾಡಲು ಹಾಲಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್ಗೆ ಪತ್ರ ಬರೆದಿದ್ದಾರೆ. ಈ ಮಧ್ಯೆ, ಸುಪ್ರೀಂಕೋರ್ಟ್ ನಿಂದಲೂ ಸಂಸತ್ ವಿಸರ್ಜನೆ ಹಾಗೂ ಅವಿಶ್ವಾಸ ನಿಲುವಳಿ ವಜಾ ಕುರಿತಂತೆ ಯಾವುದೇ ಆದೇಶ ಹೊರಬಿದ್ದಿಲ್ಲ. ಪಾಕ್ ರಾಷ್ಟ್ರೀಯ ಅಸೆಂಬ್ಲಿ ವಿಸರ್ಜನೆಗೊಂಡು, ಸರ್ಕಾರ ಬರ್ಖಾಸ್ತು ಆಗಿದ್ದರೂ ಹಂಗಾಮಿ ಪ್ರಧಾನಿ ನೇಮಕ ಆಗುವವರೆಗೆ ಇಮ್ರಾನ್ ಖಾನ್ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಅಧ್ಯಕ್ಷರ ಕಚೇರಿಯ ಪ್ರಕಟಣೆ ತಿಳಿಸಿದೆ.
ಹಂಗಾಮಿ ಪ್ರಧಾನಿ ಹೆಸರು ಶಿಫಾರಸು: ಅವಿಶ್ವಾಸ ಮತದ ಸೋಲಿನಿಂದ ಬಚಾವಾದ ಪ್ರಧಾನಿ ಇಮ್ರಾನ್ ಖಾನ್, ಹಂಗಾಮಿ ಪ್ರಧಾನಿಯಾಗಲು ಸುಪ್ರೀಂ ಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ಗುಲ್ಜರ್ ಅಹ್ಮದ್ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ. ಅವಿಶ್ವಾಸ ನಿಲುವಳಿ ವಜಾ ಮತ್ತು ರಾಷ್ಟ್ರೀಯ ಅಸೆಂಬ್ಲಿ ಬರ್ಖಾಸ್ತು ಕುರಿತು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಮಾಜಿ ಕ್ರಿಕೆಟಿಗ ಇಮ್ರಾನ್ ಈ ’ಗೂಗ್ಲಿ’ ಎಸೆದಿದ್ದಾರೆ. ಪಾಕಿಸ್ತಾನ್ ತೆಹ್ರಿಕ್- ಎ- ಇನ್ಸಾಫ್ (ಪಿಟಿಐ) ಪಕ್ಷದ ಕೇಂದ್ರೀಯ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು ಎಂದು ಇಮ್ರಾನ್ ಸಂಪುಟದಲ್ಲಿದ್ದ ವಾರ್ತಾ ಸಚಿವ ಫವಾದ್ ಚೌಧರಿ ಹೇಳಿದ್ದಾರೆ. ಈ ಮಧ್ಯೆ, ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್ ಯಾವುದೇ ಹೆಸರನ್ನು ಶಿಫಾರಸು ಮಾಡಿಲ್ಲ. ಹಂಗಾಮಿ ಪ್ರಧಾನಿ ಆಯ್ಕೆಯ ಪ್ರಕ್ರಿಯೆಯೆ ಕಾನೂನುಬಾಹಿರವಾದರಿಂದ ಇದರಲ್ಲಿ ಭಾಗಿಯಾಗಲಾರೆ. ಇಮ್ರಾನ್ ಖಾನ್ ಮತ್ತು ಅಧ್ಯಕ್ಷ ಆರಿಫ್ ಅಲ್ವಿ ಸಂವಿಧಾನವನ್ನು ಮುರಿದಿದ್ದಾರೆ. ಅವರ ವಿರುದ್ಧ 6ನೇ ಅನುಚ್ಛೇದದ ಅನ್ವಯ ವಿಚಾರಣೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಫವಾದ್, ದೇಶದಲ್ಲಿ ಚುನಾವಣೆ ಎದುರಾಗಲಿದೆ. ಚುನಾವಣೆಗೆ ಪೂರ್ವಭಾವಿಯಾಗಿ ಈ ಪ್ರಕ್ರಿಯೆ ನಡೆಯುತ್ತಿದೆ. ಇದರಲ್ಲಿ ಭಾಗಿಯಾಗುವುದಿಲ್ಲ ಎಂದರೆ ಅದು ಅವರ ಆಯ್ಕೆ. ಆದರೆ ನಾವಂತೂ ಹೆಸರನ್ನು ಶಿಫಾರಸು ಮಾಡಿದ್ದೇವೆ. ಏಳು ದಿನದಲ್ಲಿ ಶೆಹಬಾಜ್ ಹೆಸರು ಕಳುಹಿಸದಿದ್ದರೆ ನಾವು ಕಳುಹಿಸಿದ ಇಬ್ಬರಲ್ಲಿ ಒಬ್ಬರು ಹಂಗಾಮಿ ಪ್ರಧಾನಿಯಾಗಿ ನೇಮಕ ಆಗುತ್ತಾರೆ ಎಂದಿದ್ದಾರೆ.
ಹಂಗಾಮಿ ಪ್ರಧಾನಿ ಆಯ್ಕೆ ಹೇಗೆ?: ಸಂವಿಧಾನದ 94ನೇ ಅನುಚ್ಛೇದದ ಪ್ರಕಾರ, ಹಾಲಿ ಪ್ರಧಾನಿಯನ್ನೇ ಹೊಸದಾಗಿ ಚುನಾಯಿತ ಪ್ರಧಾನಿ ಆಯ್ಕೆ ಆಗುವವರೆಗೂ ಹಂಗಾಮಿ ಎಂದು ಮುಂದುವರಿಸಬಹುದು ಅಥವಾ ಬೇರೊಬ್ಬರನ್ನು ನೇಮಿಸುವ ಅಧಿಕಾರ ಅಧ್ಯಕ್ಷರಿಗೆ ಇದೆ. 224ಎ(4) ಅನುಚ್ಛೇದದ ಪ್ರಕಾರ, ಹಂಗಾಮಿ ಪ್ರಧಾನಿಯನ್ನು ನೇಮಿಸಲು 15 ದಿನ ಅವಕಾಶ ಇದೆ. ಅಧ್ಯಕ್ಷರು ಹಂಗಾಮಿ ಪ್ರಧಾನಿಯನ್ನು ನೇಮಿಸದಿದ್ದರೆ ಅಥವಾ ನೇಮಕ ಒಪ್ಪಿತವಾಗದಿದ್ದರೆ ನಿರ್ಗಮಿತ ಪ್ರಧಾನಿ ಮತ್ತು ವಿರೋಧ ಪಕ್ಷದ ನಾಯಕ ತಲಾ ಎರಡು ಹೆಸರನ್ನು ಅಧ್ಯಕ್ಷರಿಗೆ ಶಿಫಾರಸು ಮಾಡಬಹುದು. ಈ ಶಿಫಾರಸನ್ನು ಪರಿಶೀಲನಾ ಸಮಿತಿ ಮುಂದೆ ಇರಿಸಲಾಗುತ್ತದೆ. ಈ ಸಮಿತಿಯನ್ನು ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ರಚಿಸುತ್ತಾರೆ. ಸಂಸತ್ನ ಉಭಯ ಸದನಗಳ ತಲಾ ನಾಲ್ವರು ಸದಸ್ಯರು ಇದರಲ್ಲಿ ಇರುತ್ತಾರೆ. ಸಮಿತಿಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳಿಗೆ ಸಮಾನ ಪ್ರಾತಿನಿಧ್ಯ ಇರುತ್ತದೆ. ಈ ಸಮಿತಿಯು ಆಯ್ಕೆ ಮಾಡಿದ ವ್ಯಕ್ತಿ ಹಂಗಾಮಿ ಪ್ರಧಾನಿ ಆಗುತ್ತಾರೆ.
ತ್ವರಿತ ಆದೇಶ ನೀಡದ ಕೋರ್ಟ್: ರಾಷ್ಟ್ರೀಯ ಅಸೆಂಬ್ಲಿ ವಿಸರ್ಜನೆ ಮತ್ತು ಅವಿಶ್ವಾಸ ನಿಲುವಳಿ ವಜಾ ಮಾಡಿದರ ಸಂಬಂಧ ಸುಪ್ರೀಂಕೋರ್ಟ್ ಸೋಮವಾರ ಯಾವುದೇ ಆದೇಶ ನೀಡಿಲ್ಲ. ವಿಚಾರಣೆ ಮುಂದುವರಿಸಿದೆ. ಅಧಿಕಾರ ಕಳೆದುಕೊಳ್ಳುವ ಭೀತಿಯಿಂದ ಸರ್ಕಾರ ಅಸಂವಿಧಾನಿಕ ನಡೆಯನ್ನು ಅನುಸರಿಸಿದೆ. ಇದು ದೇಶ ಮತ್ತು ಸಂವಿಧಾನದ ವಿರುದ್ಧ ಸರ್ಕಾರ ನಡೆಸಿದ ದಂಗೆ ಎಂದು ವಿರೋಧ ಪಕ್ಷಗಳು ವಿಚಾರಣೆ ವೇಳೆ ಆಪಾದಿಸಿವೆ. ಸಂವಿಧಾನದ ಪರಿಚ್ಛೇದ 5ರ ಆಧಾರದಲ್ಲಿ ಡೆಪ್ಯೂಟಿ ಸ್ಪೀಕರ್ ತೆಗೆದುಕೊಂಡ ನಿರ್ಣಯ ಸರಿ ಇದೆ. ವಿದೇಶಿ ಶಕ್ತಿಗಳ ಕುಮ್ಮಕ್ಕಿನಿಂದ ಮಂಡಿಸಲಾದ ಅವಿಶ್ವಾಸ ನಿಲುವಳಿ ಪರಿಚ್ಛೇದ 5ಕ್ಕೆ ವಿರುದ್ಧವಾಗಿದೆ ಎಂಬುದು ಸರ್ಕಾರದ ವಾದವಾಗಿದೆ.