

ಇಸ್ಲಾಮಾಬಾದ್: ಕಳೆದ ವರ್ಷ ಫೆಬ್ರವರಿಯಲ್ಲಿ ಪುಲ್ವಾಮಾ ದಾಳಿ ಸಂಭವಿಸಿದ ನಂತರ ಭಾರತದ ವಾಯುಪಡೆಯ ವಿಂಗ್ಕಮಾಂಡರ್ ಅಭಿನಂದನ್ ವರ್ಧಮಾನ್ರನ್ನು ಬಂಧಿಸಿದ್ದ ಪಾಕ್, ಭಾರತದ ಪ್ರತೀಕಾರಕ್ಕೆ ಹೆದರಿತ್ತು. ಅವರನ್ನು ಶೀಘ್ರ ಬಿಡುಗಡೆ ಮಾಡದಿದ್ದರೆ ಭಾರತ ನಿಶ್ಚಿತವಾಗಿ ದಾಳಿ ನಡೆಸುತ್ತದೆ ಎಂಬುದನ್ನು ಅರಿತ ಪಾಕ್ ಸೇನೆಯ ಮುಖ್ಯಸ್ಥರು ನಡುಗಿಹೋಗಿದ್ದರು. ಹೀಗಾಗಿಯೇ ಪಾಕ್ 60 ತಾಸಿನೊಳಗೆ ಅಭಿನಂದನ್ರನ್ನು ಬಿಡುಗಡೆ ಮಾಡಿತು ಎಂಬ ವಿಷಯ ಈಗ ಬಯಲಾಗಿದೆ.
ವಿಮಾನ ಪತನವಾದ ಕಾರಣ ಪ್ಯಾರಾಚೂಟ್ ಮೂಲಕ ಹಾರಿದ ಅಭಿನಂದನ್ ವರ್ಧಮಾನ್ ಪಾಕ್ ಭಾಗದಲ್ಲಿ ಇಳಿದಿದ್ದರು. ಅವರನ್ನು ಸೆರೆ ಹಿಡಿಯಲಾಗಿತ್ತು. ಈ ಬೆನ್ನಲ್ಲೇ ಪ್ರತೀಕಾರ ಕ್ರಮಕ್ಕೆ ಭಾರತ ಸಿದ್ಧವಾಗಿತ್ತು. ಪಾಕಿಸ್ತಾನದ ಸಂಸದೀಯ ನಾಯಕರ ಸಭೆಯಲ್ಲಿ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿ ಕಂಗಾಲಾಗಿದ್ದರು. ಅಭಿನಂದನ್ ಬಿಡುಗಡೆ ಮಾಡುವ ನಿರ್ಧಾರ ಕೈಗೊಳ್ಳದಿದ್ದರೆ ಭಾರತ ರಾತ್ರಿ 9 ಗಂಟೆಗೆ ನಮ್ಮ ಮುಂಚೂಣಿ ಗಡಿ ಚೌಕಿಗಳ ಮೇಲೆ ದಾಳಿ ಮಾಡುತ್ತದೆ ಎಂದು ಅವರು ಸಭೆಯಲ್ಲಿ ಹೇಳಿದರು. ಇದನ್ನು ಕೇಳಿ ಭೂಸೇನೆಯ ಮುಖ್ಯಸ್ಥ ಜ. ಕಮರ್ ಜಾವೇದ್ ಬಜ್ವಾಗೆ ನಡುಕ ಉಂಟಾಯಿತು ಎಂದು ಪಿಎಂಎಲ್-ಎನ್ ನಾಯಕ ಅಯಾಜ್ ಸಾದಿಕ್ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಬಹಿರಂಗ ಪಡಿಸಿದ್ದಾರೆ.
ಹಿನ್ನೆಲೆ ಏನು?: 2019 ಫೆಬ್ರವರಿ 14ರಂದು ಜಮ್ಮು-ಕಾಶ್ಮೀರದ ಪುಲ್ವಾಮಾ ಹೆದ್ದಾರಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ವಾಹನದ ಮೇಲೆ ಪಾಕ್ನ ಜೈಷ್-ಎ-ಮೊಹಮ್ಮದ್ ಉಗ್ರರು ನಡೆಸಿದ ಕಾರ್ ಬಾಂಬ್ ಸ್ಪೋಟದಲ್ಲಿ 40 ಯೋಧರು ಹುತಾತ್ಮರಾದರು. ಇದಕ್ಕೆ ಪ್ರತೀಕಾರವಾಗಿ ಭಾರತದ ವಾಯುಪಡೆ ಫೆ. 26ರಂದು ಪಾಕ್ನ ಬಾಲಾಕೋಟ್ ಮೇಲೆ ವೈಮಾನಿಕ ದಾಳಿ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತು. ಇದರಿಂದ ಕ್ರೋಧಿತವಾದ ಪಾಕ್, ಅಮೆರಿಕ ಪೂರೈಸಿದ ಎಫ್-16 ಸಹಿತ ಕೆಲ ಯುದ್ಧ ವಿಮಾನಗಳ ಮೂಲಕ ಭಾರತ ಮೇಲೆ ಫೆ. 27ರಂದು ದಂಡೆತ್ತಿ ಬಂತು. ಆದರೆ, ಭಾರತೀಯ ವಾಯುಪಡೆಯ ಆಕ್ರಮಣಕ್ಕೆ ನಲುಗಿ ಹಿಂದಿರುಗಿತು. ಈ ಸಂದರ್ಭದಲ್ಲಿ ಎಫ್- 16 ಯುದ್ಧ ವಿಮಾನವನ್ನು ಮಿಗ್-21 ಜೆಟ್ನಲ್ಲಿ ಬೆನ್ನಟ್ಟಿದ ವಿಂಗ್ಕಮಾಂಡರ್ ಅಭಿನಂದನ್ ವರ್ಧಮಾನ್, ಅದನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾದರು. ಆದರೆ ಅವರ ವಿಮಾನ ಪತನವಾಗಿ, ಎಲ್ಒಸಿ ಆಚೆ ಬದಿಗೆ ಇಳಿದರು. ಅವರನ್ನು ಪಾಕ್ ಪಡೆ ಬಂಧಿಸಿತ್ತು. ನಂತರ ಅವರನ್ನು ಮಾರ್ಚ್ 1ರಂದು ಅಟ್ಟಾರಿ-ವಾಘಾ ಗಡಿ ಮೂಲಕ ಬಿಡುಗಡೆ ಮಾಡಲಾಯಿತು. ಅಭಿನಂದನ್ ತೋರಿದ ಶೌರ್ಯ, ಸಾಹಸಕ್ಕಾಗಿ ಅವರಿಗೆ ವೀರಚಕ್ರ ನೀಡಿ ಗೌರವಿಸಲಾಯಿತು.
ಸಂಸದೀಯ ನಾಯಕರ ಸಭೆಗೆ ಬರಲು ಪ್ರಧಾನಿ ಇಮ್ರಾನ್ ಖಾನ್ ಒಪ್ಪಲಿಲ್ಲ. ಆದರೆ, ಸೇನಾ ಮುಖ್ಯಸ್ಥ ಜನರಲ್ ಬಜ್ವಾ ಬಂದರು. ಅವರ ಕಾಲು ಅಕ್ಷರಶಃ ನಡುಗುತ್ತಿತ್ತು. | ಅಯಾಜ್ ಸಾದಿಕ್ ಪಿಎಂಎಲ್-ಎನ್ ನಾಯಕ ವಿಂಗ್ಕಮಾಂಡರ್ ಅಭಿನಂದನ್ ವರ್ಧಮಾನ್ ಬಿಡುಗಡೆ ಮಾಡುವುದನ್ನು ಬಿಟ್ಟು ಪಾಕ್ಗೆ ಅನ್ಯ ಮಾರ್ಗವೇ ಇರಲಿಲ್ಲ. ರಾಜತಾಂತ್ರಿಕ ಮತ್ತು ರಾಜಕೀಯ ಒತ್ತಡದ ಜತೆಗೆ ಭಾರತದ ಸೇನೆಯ ಭಯ ಪಾಕ್ಗೆ ಇತ್ತು. ಭಾರತದ ಸೇನೆಯ ಶಕ್ತಿ, ಸಾಮರ್ಥ್ಯದ ಬಗ್ಗೆ ಪಾಕ್ ಸೇನಾ ಮುಖ್ಯಸ್ಥರಿಗೆ ಚೆನ್ನಾಗಿ ತಿಳಿದಿದ್ದ ಕಾರಣ ಅವರ ಕಾಲುಗಳು ಕಂಪಿಸುತ್ತಿದ್ದವು. | ಬಿ.ಎಸ್.ಧನೋವಾ ನಿವೃತ್ತ ಏರ್ ಚೀಫ್ ಮಾರ್ಷಲ್ (ಪುಲ್ವಾಮಾ ದಾಳಿ ನಡೆದಾಗ ವಾಯುಪಡೆಯ ಮುಖ್ಯಸ್ಥ) ನಮ್ಮ ಸೇನೆಯನ್ನು ಕಾಂಗ್ರೆಸ್ ಯಾವಾಗಲೂ ಅಣಕ ಮಾಡುತ್ತದೆ. ಆದರೆ, ಭಾರತದ ಸೇನೆಯ ಶಕ್ತಿ ಏನು ಎಂಬುದನ್ನು ಪಾಕ್ನ ವಿರೋಧ ಪಕ್ಷದ ಮುಖಂಡರೇ ಹೇಳಿರುವ ವಿಡಿಯೋ ಸ್ಪಷ್ಟ ಪಡಿಸಿದೆ. ಆದರೆ, ಕಾಂಗ್ರೆಸ್ ರಾಜಕುಮಾರನಿಗೆ (ರಾಹುಲ್ ಗಾಂಧಿ) ನಮ್ಮ ಸೇನೆ, ಸರ್ಕಾರ, ನಾಗರಿಕರ ಮೇಲೆ ವಿಶ್ವಾಸವಿಲ್ಲ. | ಜೆ.ಪಿ.ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
ಪುಲ್ವಾಮಾದಲ್ಲಿ ಸಿಆರ್ಪಿಎಫ್ ವಾಹನದ ಮೇಲೆ ಸ್ಪೋಟಕ ತುಂಬಿದ ಕಾರ್ ನುಗ್ಗಿಸಿ ನಡೆಸಿದ ದಾಳಿ ಕುರಿತು ತನಿಖೆ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ಕಳೆದ ಆಗಸ್ಟ್ 25ರಂದು ಜಮ್ಮುವಿನ ವಿಶೇಷ ಕೋರ್ಟ್ಗೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಈ ದಾಳಿಗೆ ಪಾಕಿಸ್ತಾನ ಕಾರಣವೆಂದು ಸ್ಪಷ್ಟವಾಗಿ ಹೇಳಿದೆ. ಪಾಕ್ ಮೂಲದ ಜೈಷ್-ಎ-ಮೊಹಮದ್ (ಜೆಇಎಂ) ಉಗ್ರ ಸಂಘಟನೆಯ ನಾಯಕರಾದ ಮಸೂದ್ ಅಜರ್ ಹಾಗೂ ಆತನ ಸೋದರ ರವೂಫ್ ಅಸ್ಗರ್ ಸಂಚುಕೋರರಾದರೂ ಇವರಿಗೆ ಪಾಕ್ನ ಸೇನೆ ಹಾಗೂ ಐಎಸ್ಐ ಕುಮ್ಮಕ್ಕು ಇದೆ. 2016ರಿಂದಲೇ ಈ ದಾಳಿಗೆ ಸಂಚು ನಡೆಸುತ್ತಿದದ್ದು ಪಾಕ್ ಆಡಳಿತಕ್ಕೆ ತಿಳಿಯದ ವಿಷಯವೇನಲ್ಲ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ. 19 ಆರೋಪಿಗಳನ್ನು ಚಾರ್ಜ್ಶೀಟ್ನಲ್ಲಿ ಹೆಸರಿಸಲಾಗಿದೆ. ಅವರಲ್ಲಿ ಹಲವರು ಕಾರ್ಯಾಚರಣೆಗಳಲ್ಲಿ ಹತರಾಗಿದ್ದಾರೆ. ಪ್ರಯಾಣ ಹಾಗೂ ಸಾಗಣೆಗೆ ನೆರವು ನೀಡಿದ ಆರು ಜನರ ಹೆಸರೂ ಆರೋಪ ಪಟ್ಟಿಯಲ್ಲಿದೆ. ಪಾಕ್ನಿಂದ ತಂದಿದ್ದ 35 ಕೆ.ಜಿ. ಆರ್ಡಿಎಕ್ಸ್ ಮತ್ತು 200 ಕೆ.ಜಿ. ಸ್ಪೋಟಕಗಳ ಫೋಟೋಗಳು, ದೂರವಾಣಿ ಕರೆ ದಾಖಲೆಗಳು, ವಾಟ್ಸ್ ಆ್ಯಪ್ ಸಂಭಾಷಣೆಗಳು ಚಾರ್ಜ್ಶೀಟ್ನಲ್ಲಿವೆ. ಜೈಷ್ ಕಮಾಂಡರ್ ಉಮರ್ ಫಾರೂಕ್ನ ಫೋನ್ಗಳಲ್ಲಿ ಅವು ಸಿಕ್ಕಿದ್ದವು. ಪುಲ್ವಾಮಾ ದಾಳಿಯ ನಂತರ ಮಾರ್ಚ್ನಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಫಾರೂಕ್ ಹತನಾಗಿದ್ದ. ಈ ಫಾರೂಕ್ ಪಾಕ್ನಲ್ಲಿ ಹೊಂದಿರುವ ಬ್ಯಾಂಕ್ ಖಾತೆಗೆ ದೊಡ್ಡ ಮಟ್ಟದ ಹಣ ವರ್ಗಾವಣೆಯಾಗಿರುವುದಕ್ಕೆ ಪುರಾವೆ ಇದೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಲಾಗಿತ್ತು.