ಪಾಕ್​-ಅಫ್ಘಾನ್​ ಸಂಘರ್ಷ: ನಾನು ಯುದ್ಧವನ್ನು ಪರಿಹರಿಸಲು ಇಷ್ಟಪಡುತ್ತೇನೆ ಎಂದ Donald Trump

Donald Trump
Published on

ನ್ಯೂಯಾರ್ಕ್: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಪರಿಹರಿಸುವುದು ನನಗೆ ಸುಲಭ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಶುಕ್ರವಾರ (ಅಕ್ಟೋಬರ್​,17) ಹೇಳಿದ್ದಾರೆ. ಅಲ್ಲದೆ, ನನ್ನ ಅಧಿಕಾರಾವಧಿಯಲ್ಲಿ ಈಗಾಗಲೇ ಅನೇಕ ಜಾಗತಿಕ ಯುದ್ಧಗಳನ್ನು ಪರಿಹರಿಸಿದ್ದೇನೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಶ್ವೇತಭವನದಲ್ಲಿ ಯುಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿರೊಂದಿಗಿನ ಭೋಜನದ ಸಮಯದಲ್ಲಿ ಮಾತನಾಡಿದ ಟ್ರಂಪ್, ಪಾಕಿಸ್ತಾನವು ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಿದೆ. ದಾಳಿಗೆ ಪ್ರತಿದಾಳಿಯಾಗಿ ಅಫ್ಘಾನ್ ಪಾಕ್​​ ಮೇಲೆ​ ದಾಳಿ ನಡೆಸಿದೆ ಎಂದು ನನಗೆ ಅರ್ಥವಾಗಿದೆ. ಈ ಯುದ್ದವನ್ನು ಪರಿಹರಿಸುವುದು ನನಗೆ ಸುಲಭವಾಗಿದೆ. ಅಲ್ಲದೆ, ಇದೆಲ್ಲದರ ಮಧ್ಯೆ, ನಾನು USA ಅನ್ನು ನಡೆಸಬೇಕು. ಆದರೆ, ಯುದ್ಧಗಳನ್ನು ಪರಿಹರಿಸಲು ನನಗೆ ಇಷ್ಟ. ಏಕೆ ಎಂದು ನಿಮಗೆ ತಿಳಿದಿದೆಯೇ? ಜನರು ಸಾಯುವುದನ್ನು ತಡೆಯಲು ನಾನು ಇಷ್ಟಪಡುತ್ತೇನೆ ಮತ್ತು ನಾನು ಲಕ್ಷಾಂತರ ಜೀವಗಳನ್ನು ಉಳಿಸಿದ್ದೇನೆ ಎಂದು ಟ್ರಂಪ್​ ಹೇಳಿದ್ದಾರೆ.

ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಕಡಿಮೆಯಾಗಿ 48 ಗಂಟೆಗಳ ಕದನ ವಿರಾಮ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಟ್ರಂಪ್​ರಿಂದ ಈ ಹೇಳಿಕೆ ಬಂದಿವೆ. ಅದರೆ ಎರೆಡು ದೇಶಗಳ ನಡುವೆ ಕದನ ವಿರಾಮವನ್ನು ವಿಸ್ತರಿಸಲಾಗಿದೆ ಎಂದು ವರದಿಯಾಗಿವೆ. ಅಲ್ಲದೆ, ಪರಿಹಾರವನ್ನು ಹುಡುಕಲು ಎರಡೂ ಕಡೆಯವರು ದೋಹಾದಲ್ಲಿ ಭೇಟಿಯಾಗುವ ನಿರೀಕ್ಷೆಯಿದೆ.

ಅಲ್ಲದೆ, ಡುರಾಂಡ್ ರೇಖೆಯ ಉದ್ದಕ್ಕೂ ಇರುವ ಪಕ್ತಿಕಾ ಪ್ರಾಂತ್ಯದ ಹಲವಾರು ಜಿಲ್ಲೆಗಳಲ್ಲಿ ಪಾಕ್​ ವೈಮಾನಿಕ ದಾಳಿ ನಡೆಸಿದೆ ಎಂದು ತಾಲಿಬಾನ್ ಹೇಳಿದೆ. ಪಾಕಿಸ್ತಾನದ ವಾಯುದಾಳಿಯ ನಂತರ, ಹಿರಿಯ ತಾಲಿಬಾನ್ ಅಧಿಕಾರಿಯೊಬ್ಬರು ಎರಡೂ ಕಡೆಯವರ ನಡುವಿನ ಕದನ ವಿರಾಮ ಮುಗಿದಿದೆ ಎಂದು ಅಂತರ್​ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.

ಯುದ್ಧಗಳನ್ನು ಪರಿಹರಿಸುವ ತಮ್ಮ ಹಳೆಯ ಹೇಳಿಕೆ ಮತ್ತು ನೊಬೆಲ್ ಶಾಂತಿ ಪ್ರಶಸ್ತಿಯ ಬಗ್ಗೆ ಮತ್ತೆ ಟ್ರಂಪ್​ ಮಾತನಾಡಿದ್ದಾರೆ. ನಾನು ಎಂಟು ಯುದ್ಧಗಳನ್ನು ಪರಿಹರಿಸಿದ್ದೇನೆ. ನಾವು ಪರಿಹರಿಸಿದ ಎಲ್ಲಾ ಯುದ್ಧಗಳನ್ನು ನೋಡಿ, ಮತ್ತು ನಾನು ಪರಿಹರಿಸಿದಾಗಲೆಲ್ಲಾ, ನೀವು ಮುಂದಿನದನ್ನು ಪರಿಹರಿಸಿದರೆ ನಿಮಗೆ ನೊಬೆಲ್ ಪ್ರಶಸ್ತಿ ಸಿಗುತ್ತದೆ ಎಂದು ಹಲವಾರು ಜನ ಹೇಳಿದ್ದಾರೆ. ನನಗೆ ನೊಬೆಲ್ ಪ್ರಶಸ್ತಿ ಸಿಗಲಿಲ್ಲ. ಯಾರೋ ಒಬ್ಬರು ನೊಬೆಲ್​ ಪಡೆದರು. ಅವರು ಯಾರೆಂದು ನನಗೆ ತಿಳಿದಿಲ್ಲ. ಆದರೆ ಅವರು ತುಂಬಾ ಉದಾರಿಯಾಗಿದ್ದರು. ನನಗೆ ಆ ಎಲ್ಲದರ ಬಗ್ಗೆ ಕಾಳಜಿ ಇಲ್ಲ. ನಾನು ಜೀವಗಳನ್ನು ಉಳಿಸುವ ಬಗ್ಗೆ ಮಾತ್ರ ಕಾಳಜಿ ವಹಿಸುತ್ತೇನೆ ಎಂದು ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net