ಪೇಂಟ್ ರವಿ ಅಧ್ಯಕ್ಷ, ಸತೀಶ್ ಉಪಾಧ್ಯಕ್ಷರಾಗಿ ಆಯ್ಕೆ

25blrp1
ಬೇಲೂರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ನೂತನ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದ ಪೇಂಟ್ ರವಿ, ಕೊರಟಿಕೆರೆ ಸತೀಶ್ ಸೇರಿದಂತೆ ನಿರ್ದೇಶಕರನ್ನು ಬೆಂಬಲಿಗರು ಅಭಿನಂದಿಸಿದರು. ಬಿ.ಎಂ.ಪ್ರಸನ್ನ, ಎಂ.ಪಿ.ತಾರಾನಾಥ್, ಎಸ್.ಕೆ.ನಾಗೇಶ್, ಬಿ.ಬಿ.ಶಿವರಾಜ್, ಶಿವಶಂಕರ್, ಜಗದೀಶ್ ಇದ್ದರು.
Published on

ಬೇಲೂರು: ಬೇಲೂರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಪೇಂಟ್ ರವಿ ಹಾಗೂ ಉಪಾಧ್ಯಕ್ಷರಾಗಿ ಸತೀಶ್ ಕೊರಟಿಕೆರೆ 1ಮತಗಳ ಅಂತರದಿಂದ ಪ್ರತಿಸ್ಪರ್ಧಿಗಳ ವಿರುದ್ಧ ಮಂಗಳವಾರ ಆಯ್ಕೆಯಾದರು.

ಬೇಲೂರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ನಿರ್ದೇಶಕರ ಸ್ಥಾನಗಳಿಗೆ ಇತ್ತೀಚೆಗೆ ಚುನಾವಣೆ ನಡೆದಿತ್ತು. 13 ನಿರ್ದೇಶಕರಿರುವ ಬ್ಯಾಂಕ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಪೇಂಟ್ ರವಿ ಹಾಗೂ ಬಲರಾಮೇಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಸತೀಶ್ ಕೊರಟಿಕೆರೆ ಮತ್ತು ಕೇಬಲ್ ವಿಜಯ್‌ಕುಮಾರ್ ನಾಮಪತ್ರ ಸಲ್ಲಿಸಿದ್ದರು. ಆದರೆ ನಾಮಪತ್ರ ವಾಪಸ್ ಪಡೆಯಲು ಸಮಯವಕಾಶ ಮೀರಿದರೂ ಯಾರೋಬ್ಬರೂ ತಮ್ಮ ನಾಮಪತ್ರಗಳನ್ನು ವಾಪಸ್ ಪಡೆಯದ ಕಾರಣ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.

ಈ ಸಂದರ್ಭ ಪೇಂಟ್ ರವಿ 7 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಬಲರಾಮೇಗೌಡ 6 ಮತಗಳನ್ನು ಪಡೆದರು. ಉಪಾಧ್ಯಕ್ಷರ ಸ್ಥಾನದಲ್ಲಿ ಸತೀಶ್ 7 ಮತಗಳನ್ನು ಪಡೆದರೆ, ವಿಜಯ್‌ಕುಮಾರ್ 6 ಮತಗಳನ್ನು ಪಡೆದಿದ್ದರಿಂದ, ಚುನಾವಣಾಧಿಕಾರಿಯಾಗಿದ್ದ ಸಹಕಾರ ಸಂಘಗಳ ಉಪ ನಿಭಂದಕಿ ಲೀಲಾ ಒಂದೊಂದು ಮತ ಹೆಚ್ಚಿಗೆ ಪಡೆದ ಪೇಂಟ್ ರವಿ ಹಾಗೂ ಸತೀಶ್ ಅವರು ಕ್ರಮವಾಗಿ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.

ನೂತನ ಅಧ್ಯಕ್ಷ ಪೇಂಟ್ ರವಿ ಮಾತನಾಡಿ, ಬ್ಯಾಂಕಿನ ಷೇರುದಾರರು ನನ್ನ ಮೇಲೆ ನಂಬಿಕೆ ಇಟ್ಟು ಆರ್ಶಿರ್ವದಿಸಿದ್ದರು. ಅದೇ ರೀತಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ನಮ್ಮ ಪರವಾಗಿ 7 ಜನರು ಮತ ನೀಡಿದ್ದರಿಂದ ಅಧ್ಯಕ್ಷನಾಗಿದ್ದೇನೆ. ನಾನು ಇಲ್ಲಿಗೆ ಬರುವುದಕ್ಕೆ ಕಾರಣರಾದ ಷೇರುದಾರರ ಹಾಗೂ ನಿರ್ದೇಶಕರ ನಂಬಿಕೆ ಉಳಿಸಿಕೊಂಡು ಅವರ ಆಶಯದಂತೆ ಬ್ಯಾಂಕಿನ ಅಭಿವೃದ್ಧಿಗೆ ಎಲ್ಲ ನಿರ್ದೇಶಕರ ಹಾಗೂ ಹಿರಿಯರ ಮಾರ್ಗದರ್ಶನ ಪಡೆದು ಕೆಲಸ ಮಾಡಲಿದ್ದೇನೆ. ಜತೆಗೆ ನನ್ನ ಅವಧಿಯಲ್ಲಿ ಬ್ಯಾಂಕ್‌ಗೆ ಸ್ವಂತ ನಿವೇಶನ ಮತ್ತು ಕಟ್ಟಡ ನಿರ್ಮಿಸಲು ಎಲ್ಲ ಸದಸ್ಯರ ಸಹಕಾರದೊಂದಿಗೆ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಇದೇ ಸಂದರ್ಭ ಅಭಿಮಾನಿಗಳು ಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಂಬ್ರಮಿಸಿ ನೂತನ ಅಧ್ಯಕ್ಷ-ಉಪಾಧ್ಯಕ್ಷರು ಮತ್ತು ನಿರ್ದೇಶಕರನ್ನು ಮೆರವಣಿಗೆಯಲ್ಲಿ ಕರೆದೊಯ್ದರು.

ಬೇಲೂರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಕೊರಟಿಕೆರೆ ಸತೀಶ್, ನಿರ್ದೇಶಕರಾದ ಬಿ.ಎಂ.ಪ್ರಸನ್ನ, ಎಂ.ಪಿ.ತಾರಾನಾಥ್, ಎಸ್.ಕೆ.ನಾಗೇಶ್, ಬಿ.ಬಿ.ಶಿವರಾಜ್, ಬಿ.ಎಲ್.ಲಕ್ಷ್ಮಣ್, ಬ್ಯಾಂಕ್ ವ್ಯವಸ್ಥಾಪಕ ಶಿವಶಂಕರ್, ಪುರಸಭೆ ಸದಸ್ಯ ಜಗದೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net