

pahalgam | ಏಪ್ರಿಲ್ 23 ರವರೆಗೆ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಪಹಲ್ಗಾಂನ ಪ್ರವಾಸಿ ತಾಣಗಳು ಈಗ ಬಿಕೋ ಎನ್ನುತ್ತಿವೆ. ಆ ಸುಂದರ ಪ್ರವಾಸಿ ತಾಣದ ಸುತ್ತಲೂ ಮೌನ ಆವರಿಸಿದಂತಿದೆ. ವರ್ಣಿಸಲು ಸಾಧ್ಯವಾಗದಷ್ಟು ನಿರ್ಜನ ಪ್ರದೇಶವಾಗಿ ಕಾಣುತ್ತಿದೆ. ಪ್ರವಾಸಿಗರ ಮೇಲಿನ ದಾಳಿಯ ನಂತರ, ಇಲ್ಲಿರುವ ಪ್ರತಿಯೊಬ್ಬರೂ ಅಳುತ್ತಿರುವ ಸದ್ದು ಕೇಳಿ ಬರುತ್ತಿದೆ.
ಇನ್ನೂ ಈ ಬಗ್ಗೆ ಅಲ್ಲಿನ ಹೋಟೆಲ್ ಮಾಲೀಕರು ಮಾತನಾಡಿದ್ದು, ಇಲ್ಲಿನ ಸಾಮಾನ್ಯ ಜನರಾದ ನಾವು ತುಂಬಾ ಸಮಸ್ಯೆಯಲ್ಲಿದ್ದೇವೆ ಎಂದು ಹೇಳಿದ್ದಾರೆ. ಎಲ್ಲಾ ಬುಕಿಂಗ್ಗಳನ್ನು ರದ್ದುಗೊಳಿಸಲಾಗಿದೆ. ಈ ದಾಳಿಯಿಂದ ನಾವು ಮಾತ್ರವಲ್ಲ, ನಮ್ಮ ಇಡೀ ಕುಟುಂಬ ಆಘಾತಕ್ಕೊಳಗಾಗಿದೆ. ಏನೇ ನಡೆದರೂ ಅದು ಮಾನವೀಯತೆಗೆ ವಿರುದ್ಧವಾಗಿದೆ, ಅದು ಧರ್ಮಕ್ಕೆ ವಿರುದ್ಧವಾಗಿದೆ. ಈ ಘಟನೆಯಿಂದಾಗಿ ಪ್ರವಾಸೋದ್ಯಮ ಸ್ಥಗಿತಗೊಂಡಿದೆ, ಈ ಘಟನೆ ನಡೆದಾಗ ನಮ್ಮ ಹೋಟೆಲ್ ಪ್ರವಾಸಿಗರಿಂದ ತುಂಬಿತ್ತು. ನಮ್ಮ ಹೋಟೆಲ್ನಲ್ಲಿ 40 ಜನರು ಕೆಲಸ ಮಾಡುತ್ತಿದ್ದರು, ಅವರೆಲ್ಲರೂ ಕೆಲಸ ಕಳೆದುಕೊಂಡಿದ್ದಾರೆ ಎಂದು ಹೋಟೆಲ್ ಮಾಲೀಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಭಯೋತ್ಪಾದಕ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಸ್ಥಳೀಯ ವ್ಯಕ್ತಿಯೊಬ್ಬರು ಆಕ್ರೋಶ ಹೊರಹಾಕಿದ್ದಾರೆ. ಪ್ರವಾಸಿಗರ ಮೇಲೆ ದಾಳಿಯಾದಾಗಿನಿಂದ, ಪ್ರವಾಸಿಗರು ಇಲ್ಲಿಗೆ ಬರುವುದನ್ನು ನಿಲ್ಲಿಸಿದ್ದಾರೆ. ದಾಳಿಗೂ ಮುನ್ನ ಹೋಟೆಲ್ ತುಂಬಿತ್ತು, ಈಗ ಎಲ್ಲವೂ ಖಾಲಿಯಾಗಿದೆ ನಮ್ಮ ಜೀವನ ಸುಧಾರಿಸುವುದು ಹೇಗೆ ಎಂಬ ಚಿಂತೆಯಲ್ಲಿ ನಾವು ಮುಳುಗಿದ್ದೇವೆ ಎಂದಿದ್ದಾರೆ.
(ಏಜೆನ್ಸೀಸ್)