

Pahalgam: 26 ಜೀವಗಳನ್ನು ಬಲಿತೆಗೆದುಕೊಂಡ ಭಯೋತ್ಪಾದನೆಯಿಂದ ತತ್ತರಿಸಿದ್ದ ಪಹಲ್ಗಾಮ್, ಐದು ದಿನಗಳ ನಂತರ ಮತ್ತೆ ಪ್ರವಾಸಿಗರಲ್ಲಿ ಭರವಸೆ, ವಿಸ್ವಾಸವನ್ನು ಮೂಡಿಸಿದೆ. ಹುಲ್ಲುಗಾವಲಿನಿಂದ ಕೂಡಿದ್ದ ಪೈನ್ ಕಾಡುಗಳಿಂದ ಹೊರಬಂದ ಉಗ್ರರ ಗುಂಪು ಪ್ರವಾಸಿಗರ ಗುಂಪಿನ ಮೇಲೆ ಗುಂಡು ಹಾರಿಸಿದ ನಂತರ, ಕಾಶ್ಮೀರದ ಪಹಲ್ಗಾಮ್ ಬಹುತೇಕ ಖಾಲಿಯಾಗಿತ್ತು.
"ಲಿಟಲ್ ಸ್ವಿಟ್ಜರ್ಲೆಂಡ್" ಎಂದು ಫೇಮಸ್ ಆಗಿದ್ದ ಈ ಸುಂದರ ಪ್ರವಾಸಿ ತಾಣ ಮಂಗಳವಾರ(ಏ.22)ದ ದಾಳಿಯ ಒಂದೆರಡು ದಿನಗಳ ನಂತರ ಪ್ರವಾಸಿಗರಿಗೆ ತೆರೆಯಲಾಯಿತು. ಆದರೆ ದಾಳಿ ನಡೆದಿರುವ ಸ್ಥಳವಾದ ಬೈಸರನ್ ಹುಲ್ಲುಗಾವಲು ಇನ್ನೂ ಮುಚ್ಚಲ್ಪಟ್ಟಿದೆ.
ದಿನಕ್ಕೆ 5,000 ರಿಂದ 7,000 ಪ್ರವಾಸಿಗರಿದ್ದ ಈ ಸ್ಥಳದಲ್ಲಿ, ದಾಳಿಯ ನಂತರ ಕೇವಲ 100 ಜನರು ಮಾತ್ರ ಕಾಣಿಸಿಕೊಂಡಿದ್ದು, ಪ್ರವಾಸೋದ್ಯಮವನ್ನು ಹೆಚ್ಚಾಗಿ ಅವಲಂಬಿಸಿರುವ ಸ್ಥಳೀಯರಿಗೆ ನಿರುದ್ಯೋಗದ ಭೀತಿಯನ್ನು ಹೆಚ್ಚಿಸಿತ್ತು.
ಆದರೆ ಇದೀಗ ಕಾಶ್ಮೀರ ಕಣಿವೆಯಲ್ಲಿ ಬೇಸಿಗೆಯನ್ನು ಆನಂದಿಸಲು ಬಯಸುವ ಪ್ರವಾಸಿಗರಿಂದ ಮತ್ತೆ ಈ ತಾಣ ಚೇತರಿಸಿಕೊಂಡಿದೆ. ಭಾನುವಾರ(ಏ.27) ಪಹಲ್ಗಾಮ್ ಬೀದಿಗಳಲ್ಲಿ ವಿದೇಶಿ ಮತ್ತು ದೇಶೀಯ ಪ್ರವಾಸಿಗರು ಈ ಸ್ಥಳಗಳಲ್ಲಿ ಅಡ್ಡಾಡಿದ್ದಾರೆ ಹೀಗಾಗಿ ಸಧ್ಯಕ್ಕೆ ಇದು ಸಾಮಾನ್ಯತೆಯ ಭಾವವನ್ನು ಮರಳಿ ತಂದಿದೆ.
ಮಹಾರಾಷ್ಟ್ರದಿಂದ ಈ ತಾಣಕ್ಕೆ ಭೇಟಿ ನೀಡಿದ ಒಂದು ಗುಂಪು, ಟ್ರಾವೆಲ್ ಏಜೆಂಟ್ಗಳು ಮತ್ತು ಅವರ ಪ್ರವಾಸ ಗುಂಪಿನ ಬೆಂಬಲ ಇರುವುದರಿಂದ ತಾವು ಭಯಪಡುವುದಿಲ್ಲ ಎಂದು ಹೇಳಿದರು. "ನಾವು ಭಯಪಡಬಾರದು. ಏನಾಗುತ್ತದೆಯೋ ಅದು ಆಗುತ್ತದೆ" ಎಂದು ಅವರಲ್ಲಿ ಒಬ್ಬರು ಹೇಳಿದ್ದಾರೆ.
ಜೊತೆಗೆ ಕ್ರೊಯೇಷಿಯಾ ಮತ್ತು ಸೆರ್ಬಿಯಾದ ಪ್ರವಾಸಿಗರು ಪಹಲ್ಗಾಮ್ ಬೀದಿಗಳಲ್ಲಿ ಸಂಪೂರ್ಣ ನಿರಾಳವಾಗಿ ಓಡಾಡುವುದು ಸಹ ಕಂಡುಬಂದಿದೆ.
"10 ನೇ ಬಾರಿ ನಾನು ಕಾಶ್ಮೀರಕ್ಕೆ ಬಂದಿದ್ದೇನೆ ಮತ್ತು ಪ್ರತಿ ಬಾರಿಯೂ ಇದು ಅದ್ಭುತವಾಗಿದೆ. ನನಗೆ ಇದು ವಿಶ್ವದಲ್ಲೇ ನಂಬರ್ ಒನ್, ನೈಸರ್ಗಿಕ ತಾಣ ಎನಿಸಿದೆ. ಕ್ರೊಯೇಷಿಯಾದ ಮತ್ತು ಸೆರ್ಬಿಯಾದ ಜನರು ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದಾರೆ ಹಾಗೂ ತುಂಬಾ ಸಂತೋಷವಾಗಿದ್ದಾರೆ" ಎಂದು ಕ್ರೊಯೇಷಿಯಾದ ಪ್ರವಾಸಿ ವ್ಲಾಟ್ಕೊ ಹೇಳಿದರು. ಜೊತಗೆ "ನಾನು ಸಂಪೂರ್ಣವಾಗಿ ಸುರಕ್ಷಿತವಾಗಿದ್ದೇನೆಂದು ಭಾವಿಸುತ್ತೇನೆ, ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ಎಲ್ಲೆಡೆ ಜನರು ನಮಸ್ಕಾರ ಹೇಳಿತ್ತಾರೆ ಯಾವುದೇ ಭಯವಿಲ್ಲ ಎಂದು" ಸುರಕ್ಷತೆಯ ಬಗ್ಗೆ ಹೇಳಿಕೊಂಡಿದ್ದಾರೆ.(ಏಜೆನ್ಸೀಸ್)