

Jammu and kashmir; ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ಪರಿಣಾಮಗಳ ಕುರಿತಂತೆ ಚರ್ಚಿಸಲು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ (25) ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಭೇಟಿ ಮಾಡಿದರು.
ಇದಕ್ಕೂ ಮೊದಲು ಅಲ್ಲಿನ ಸೇನಾ ಆಸ್ಪತ್ರೆಯಲ್ಲಿ ಗಾಯಗೊಂಡ ಪ್ರವಾಸಿಗರೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ, ಅಬ್ದುಲ್ಲಾ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಅವರೊಂದಿಗೆ ಚರ್ಚೆ ನಡೆಸಿದರು.
ಇಂದು ಸಂಜೆ ಪಕ್ಷದ ನಾಯಕರು, ವ್ಯಾಪಾರ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳು ಸೇರಿದಂತೆ ವಿವಿಧ ವಲಯದ ಜನರನ್ನ ರಾಹುಲ್ಗಾಂಧಿ ಭೇಟಿ ಮಾಡಲಿದ್ದಾರೆ ಎಂದು ಕಾಶ್ಮೀರದ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ಘಟನೆ ಕುರಿತಂತೆ ಒಮರ್ ಅಬ್ದುಲ್ಲಾ ಅವರಿಂದ ಮಾಹಿತಿ ಪಡೆದುಕೊಂಡ ರಾಹುಲ್ ಗಾಂಧಿ, ಸುಮಾರು 2 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು ಎನ್ನಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಐದು ಹಂತದ ರಾಜತಾಂತ್ರಿಕ ಪ್ರತಿದಾಳಿಯ ಭಾಗವಾಗಿ ಪಾಕಿಸ್ತಾನಿ ಪ್ರಜೆಗಳಿಗೆ ಎಲ್ಲಾ ವೀಸಾಗಳನ್ನು ರದ್ದುಗೊಳಿಸಿರುವುದಾಗಿ ಭಾರತ ತಿಳಿಸಿದೆ. ಇದೀಗ ಭಾರತದಲ್ಲಿ ವಾಸಿಸುತ್ತಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ ಗಡೀಪಾರು ಮಾಡುವಂತೆ ಮುಖ್ಯಮಂತ್ರಿಗಳಿಗೆ 'ಅಮಿತ್ ಶಾ' ಕರೆ ನೀಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ವಿಷಯದ ಬಗ್ಗೆ ಎಲ್ಲಾ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತಿದ್ದು, ಆಯಾ ರಾಜ್ಯಗಳಲ್ಲಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ ಅವರು ಪಾಕಿಸ್ತಾನಕ್ಕೆ ಬೇಗನೆ ಮರಳುವಂತೆ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದಾರೆ ಎಂದು ಮೂಲಗಳನ್ನು ತಿಳಿಸಿವೆ.
(ಏಜೆನ್ಸೀಸ್)