ಉತ್ತರ ಪ್ರದೇಶ ಮೂಲದ ಯುವ ವೈದ್ಯೆ ಸಾವಿಗೆ ಶರಣು: ಪಾಗಲ್​ ಪ್ರೇಮಿ ಕೊಟ್ಟ ಕಾಟಕ್ಕೆ ಬೇಸತ್ತು ಬದುಕಿಗೆ ಅಂತ್ಯ

Young Doctor
Published on

ಬೆಂಗಳೂರು: ಪಾಗಲ್​ ಪ್ರೇಮಿಯ ಕಾಟಕ್ಕೆ ಮನನೊಂದು ವೈದ್ಯೆಯೊಬ್ಬಳು ಸಾವಿಗೆ ಶರಣಾಗಿರುವ ಘಟನೆ ಸಂಜಯ್ ನಗರದಲ್ಲಿ ಕಳೆದ ಜ. 25 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪ್ರಿಯಾಂಶಿ ತ್ರಿಪಾಠಿ (28) ಆತ್ಮಹತ್ಯೆ ಮಾಡಿಕೊಂಡ ವೈದ್ಯೆ. ಉತ್ತರ ಪ್ರದೇಶದ ಲಖನೌ ಮೂಲದ ಪ್ರಿಯಾಂಶಿ ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ದಂತ ವ್ಯೆದ್ಯೆಯಾಗಿ ಕೆಲಸ ಮಾಡುತ್ತಿದ್ದರು. ಅದೇ ಆಸ್ಪತ್ರೆಯ ವೈದ್ಯ ಸುಮಿತ್ ಎಂಬಾತ ಪ್ರಿಯಾಂಶಿಗೆ ಪ್ರೇಮ ನಿವೇದನೆ ಮಾಡಿದ್ದ. ಆದರೆ, ಇದಕ್ಕೆ ಆಕೆ ಒಪ್ಪಿಲಿಲ್ಲ. ಇಷ್ಟಕ್ಕೆ ಸುಮ್ಮನಾಗದ ಸುಮಿತ್​, ಮದವೆ ಆಗುವಂತೆ ಯಾವಾಗಲು ಒತ್ತಾಯ ಮಾಡುತ್ತಿದ್ದ. ಅಲ್ಲದೆ, ಹಣಕ್ಕಾಗಿ ಪೀಡಿಸುತ್ತಿದ್ದ ಎಂದು ತಿಳಿದುಬಂದಿದೆ.

ಮದ್ಯ ಸೇವನೆ ಮತ್ತು ಸಿಗರೇಟ್​ ಸೇದುವಂತೆ ಪ್ರಿಯಾಂಶಿಗೆ ಒತ್ತಾಯ ಮಾಡುತ್ತಿದ್ದ ಸುಮಿತ್​, ಆಕೆಯ ನಡತೆ ಬಗ್ಗೆ ಆಸ್ಪತ್ರೆಯಲ್ಲೆಲ್ಲ ಸುಳ್ಳು ಹೇಳಿದ್ದ. ಆಕೆ ಸರಿಯಿಲ್ಲ., ಆಕೆಯನ್ನು ಯಾರು ಮದುವೆ ಆಗಲ್ಲ ಎಂದು ನಿಂದಿಸಿದ್ದ. ಸುಮಿತ್​ ಕಾಟವನ್ನು ತಡೆಯದೇ ಪ್ರಿಯಾಂಶಿ ಮನೆಯವರಿಗೆ ವಿಷಯ ತಿಳಿಸಿದ್ದಳು. ನನ್ನನ್ನು ವಾಪಸ್​ ಲಖನೌಗೆ ಕರೆದುಕೊಂಡು ಹೋಗಿ, ನನ್ನನ್ನು ಸುಮಿತ್​ ಬದುಕಲು ಬಿಡುತ್ತಿಲ್ಲ ಎಂದು ಹೇಳಿದ್ದಳು. ಆದರೆ, ಪ್ರಿಯಾಂಶಿ ಪಾಲಕರು ಸುಮಿತ್​ಗೆ ಬುದ್ಧಿಮಾತು ಹೇಳಿದ್ದರು. ಅಲ್ಲದೆ, ಆತನ ತಂದೆಗೆ ಕರೆ ಮಾಡಿ ಮಗನ ಬಗ್ಗೆ ದೂರು ನೀಡಿ, ತಮ್ಮ ಮಗಳ ವಿಚಾರಕ್ಕೆ ಬರದಿರುವಂತೆ ತಿಳಿಹೇಳಿ ಎಂದಿದ್ದರು.

ಇಷ್ಟೆಲ್ಲ ಆದರೂ ಬುದ್ಧಿ ಕಲಿಯದ ಸುಮಿತ್​, ಮತ್ತೆ ಪ್ರಿಯಾಂಶಿಗೆ ತೊಂದರೆ ಕೊಡಲು ಆರಂಭಿಸಿದ್ದ. ಆಕೆಯ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುತ್ತಿದ್ದ. ಇದರಿಂದ ಮನನೊಂದ ಪ್ರಿಯಾಂಶಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು. ಜ.24ರ ಬೆಳಗ್ಗೆ ಪ್ರಿಯಾಂಶಿ ತಾಯಿ ಆಕೆಗೆ ಕರೆ ಮಾಡಿದ್ದಾರೆ. ಆದರೆ, ಎಷ್ಟು ಬಾರಿ ರಿಂಗ್​ ಆದರೂ ಕರೆ ಸ್ವೀಕರಿಸಿದ ಹಿನ್ನೆಲೆಯಲ್ಲಿ ಗಾಬರಿಗೊಂಡ ಪ್ರಿಯಾಂಶಿ ತಾಯಿ, ಮಗಳು ವಾಸವಿದ್ದ ಮನೆಯ ಮಾಲೀಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಮಾಲೀಕರು ಮನೆಯ ಬಳಿ ಹೋಗಿ ನೋಡಿದಾಗ ಪ್ರಿಯಾಂಶಿ ಒಳಗಡೆಯಿಂದ ಲಾಕ್​ ಮಾಡಿರುವುದು ಕಂಡುಬಂದಿದೆ. ತಕ್ಷಣ ಮಾಲೀಕರು ಸಂಜಯ್​ ನಗರ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಅದೇ ದಿನ ಸಂಜೆ 5 ಗಂಟೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆಗೆ ಬಾಗಿಲು ತೆರೆದು ನೋಡಿದಾಗ ಪ್ರಿಯಾಂಶಿ ನೇಣು ಬಿಗಿದುಕೊಂಡಿರುವುದು ಬಯಲಾಗಿದೆ.

ಈ ಸಂಬಂಧ ಪ್ರಿಯಾಂಶಿ ತಂದೆ ಸುಶೀಲ್ ತ್ರಿಪಾಠಿ ಅವರು ವೈದ್ಯ ಸುಮಿತ್​ ವಿರುದ್ಧ ದೂರು ದಾಖಲಿಸಿದ್ದಾರೆ. ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದೇ ಮಗಳ ಆತ್ಮಹತ್ಯೆಗೆ ಕಾರಣ ಎಂದು ದೂರಿನಲ್ಲಿ ಪ್ರಿಯಾಂಶಿ ತಂದೆ ಉಲ್ಲೇಖಿಸಿದ್ದಾರೆ. ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net