ಕೇಳುವವರಿಲ್ಲದ ಭತ್ತ ಖರೀದಿ ಕೇಂದ್ರ

28 KRN-5
Published on

ಕೆ.ಆರ್.ನಗರ : ಮಾರುಕಟ್ಟೆಯಲ್ಲಿ ಭತ್ತಕ್ಕೆ ಉತ್ತಮ ಬೆಲೆ ಸಿಕ್ಕಿದ್ದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಬರಗಾಲದಿಂದ ತತ್ತರಿಸಿ, ಸಾಲದ ಸುಳಿಯಲ್ಲಿ ಸಿಕ್ಕಿಕೊಳ್ಳುತ್ತಿದ್ದ ರೈತರು ಈಗ ದೊರಕುತ್ತಿರುವ ಲಾಭದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ‘ಊರೆಲ್ಲ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು’ ಎಂಬಂತೆ ಸರ್ಕಾರ ಈಗ ನಗರದಲ್ಲಿ ಭತ್ತ ಖರೀದಿ ಕೇಂದ್ರ ತೆರೆದಿದೆ. ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಲು ರೈತರು ಬಾರದೆ ಖಾಲಿ ಖಾಲಿ ಹೊಡೆಯುತ್ತಿದೆ. ‘ಭತ್ತದ ಕಣಜ’ ಎಂಬ ಖ್ಯಾತಿಯ ಕೆ.ಆರ್.ನಗರದಲ್ಲಿ 1 ತಿಂಗಳಿನಿಂದ ಸುಗ್ಗಿ ಪ್ರಾರಂಭವಾಗಿತ್ತು. ರೈತರೆಲ್ಲ ತಮ್ಮ ಜಮೀನಿನಲ್ಲಿ ಬೆಳೆದ ಭತ್ತದ ಫಸಲನ್ನು ಕಟಾವು ಮಾಡುವ, ಒಕ್ಕಣೆ ಜತೆಗೆ ಮಾರಾಟ ಮಾಡುವ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಈಗಾಗಲೇ ಶೇ. 90ರಷ್ಟು ಕಟಾವಿನ ಕೆಲಸ ಮುಗಿಸಿದ್ದಾರೆ. ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲೂಕುಗಳಲ್ಲಿ ಹೆಚ್ಚಾಗಿ ನೀರಾವರಿಯ ಬೇಸಾಯ ಪದ್ಧತಿ ಇದೆ. 1,990 ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ರೈತರು ವಿವಿಧ ತಳಿಗಳ ಭತ್ತವನ್ನು ಬೆಳೆದಿದ್ದರು. ಮಳೆ ಕೈಕೊಟ್ಟರೂ ಎದೆಗುಂದದೆ ನಾಲೆಗಳಿಗೆ ಹರಿಸಿದ ನೀರಿನಲ್ಲೇ ಕಷ್ಟಪಟ್ಟು, ಸಾಲ ಮಾಡಿ ಭತ್ತ ಬೆಳೆದರು. ಈ ರೈತರಿಗೆ ನೆರವಾಗಬೇಕೆಂಬ ಉದ್ದೇಶದಿಂದ ಸರ್ಕಾರ ದಪ್ಪ ಭತ್ತಕ್ಕೆ ಕ್ವಿಂಟಾಲ್‌ಗೆ 2,083 ರೂ., ಸಣ್ಣ ಭತ್ತಕ್ಕೆ 2,203 ರೂ. ಬೆಂಬಲ ಬೆಲೆ ಘೋಷಿಸಿದೆ. ದರ ನಿಗದಿ ಕಡಿಮೆ ಆಯಿತು:ಸರ್ಕಾರ ದಪ್ಪ ಭತ್ತಕ್ಕೆ ಕ್ವಿಂಟಾಲ್‌ಗೆ 2,083 ರೂ. ಹಾಗೂ ಸಣ್ಣ ಭತ್ತಕ್ಕೆ 2,203 ರೂ. ಬೆಂಬಲ ಬೆಲೆ ಘೋಷಿಸಿದೆ. ಆದರೆ ಪ್ರಾರಂಭದಲ್ಲಿ ದಲ್ಲಾಳಿಗಳು ಮತ್ತು ಖಾಸಗಿಯವರು ಕ್ವಿಂಟಾಲ್‌ಗೆ 2,200 ಮತ್ತು 2,800 ರೂ. ನೀಡಿ ಖರೀದಿಸುತ್ತಿದ್ದರು. ಈಗ ಒಂದು ಹೆಜ್ಜೆ ಮುಂದೆ ಹೋಗಿ ಸಣ್ಣ ಭತ್ತಕ್ಕೆ 3,000 ದಿಂದ 3,200 ರೂ. ನೀಡಿ ಖರೀದಿಸುತ್ತಿದ್ದಾರೆ. ಹಾಗಾಗಿ, ಯಾವ ಕೃಷಿಕರೂ ಖರೀದಿ ಕೇಂದ್ರದತ್ತ ಬರುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net