

ಸಿರಗುಪ್ಪ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಕೇಂದ್ರ ತೆರೆಯಬೇಕೆಂದು ಒತ್ತಾಯಿಸಿ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಘಟಕ ಶುಕ್ರವಾರ ಗ್ರೇಡ್-2 ತಹಸೀಲ್ದಾರ್ ಸತ್ಯಮ್ಮಗೆ ಮನವಿ ಸಲ್ಲಿಸಿತು.
ತಾಲೂಕು ಅಧ್ಯಕ್ಷ ಹುಲುಗಯ್ಯ ಮಾತನಾಡಿ, ತಾಲೂಕಾದ್ಯಂತ 35 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿದೆ. ಆದರೆ, ಇತ್ತೀಚೆಗೆ ಸುರಿದ ಭಾರಿ ಮಳೆ, ಗಾಳಿಗೆ ಭತ್ತ ನೆಲಸಮಯವಾಗಿ ರೈತರು ನಷ್ಟಕ್ಕೆ ಒಳಗಾಗಿದ್ದಾರೆ.
ಈಗ ಭತ್ತ ಕಟಾವು ಆರಂಭವಾಗಿದ್ದು, ಮಾರುಕಟ್ಟೆಯಲ್ಲಿ ದರ ಕುಸಿತಗೊಂಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದೆಲ್ಲ ಗಮನಕ್ಕಿದ್ದರೂ ಭತ್ತ ಖರೀದಿ ತೆರೆಯಲು ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಅಕ್ಕಿ ಗಿರಣಿ ಮಾಲೀಕರು ಒಂದು ಕ್ವಿಂಟಾಲ್ ಭತ್ತಕ್ಕೆ ಗುಣಮಟ್ಟ ಆಧಾರದ ಮೇಲೆ 1700 ರೂ. ಯಿಂದ 1900 ರೂ.ವರೆಗೆ ಖರೀದಿಸುತ್ತಿದ್ದಾರೆ. ಆದರೆ, ಪಕ್ಕದ ತಾಲೂಕುಗಳಾದ ಗಂಗಾವತಿ, ಸಿಂಧನೂರಿನಲ್ಲಿ 2200 ರೂ.ಯಿಂದ 23000 ರೂ.ವರೆಗೆ ಖರೀದಿಸುತ್ತಿದ್ದಾರೆ.
ಆದ್ದರಿಂದ ರೈಸ್ ಮಿಲ್ ಮಾಲೀಕರ ಸಭೆ ನಡೆಸಿ, ದರ ವ್ಯತ್ಯಾಸವನ್ನು ಸರಿಪಡಿಸಿ ಸೂಕ್ತ ಬೆಲೆಯಲ್ಲಿ ಭತ್ತ ಖರೀದಿ ಮಾಡಲು ಸೂಚಿಸಬೇಕು. ಇಲ್ಲದಿದ್ದರೆ ತಕ್ಷಣ ಖರೀದಿ ಕೇಂದ್ರ ಆರಂಭಿಸಬೇಕು. ವಾರದೊಳಗೆ ಕ್ರಮಕೈಗೊಳ್ಳದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ರೈತ ಮುಖಂಡರಾದ ಸಿದ್ದರಾಮಗೌಡ, ಶ್ರೀನಿವಾಸ, ವೀರೇಶ್, ಎಚ್.ತಿಪ್ಪಯ್ಯ ,ಓಬಳೇಶ್ವರಪ್ಪ, ಬಸವರಾಜ, ಬಸಪ್ಪ, ಕೆ.ಈರಮ್ಮ, ರುದ್ರಮ್ಮ, ಅಂಬಮ್ಮ, ಹುಲುಗಯ್ಯ ಇತರರಿದ್ದರು.