

ಬೆಂಗಳೂರು: ನಿರ್ದೇಶಕ ಯೋಗರಾಜ್ ಭಟ್ ನಿರ್ಮಾಣದ ಹರಿಪ್ರಸಾದ್ ಜಯಣ್ಣ ನಿರ್ದೇಶನದ ಚಿತ್ರ ‘ಪದವಿ ಪೂರ್ವ’. ಈ ಚಿತ್ರದಲ್ಲಿ 1990ರ ದಶಕದ ಕಾಲೇಜು ದಿನಗಳನ್ನು ತೆರೆಯ ಮೇಲೆ ಮರುಸೃಷ್ಟಿ ಮಾಡುವ ಪ್ರಯತ್ನ ಮಾಡಲಾಗಿದೆ. ಇತ್ತೀಚೆಗಷ್ಟೆ ನಟ, ಎಂಎಲ್ಸಿ ಜಗ್ಗೇಶ್ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದರು. ಅದರ ಬೆನ್ನಲ್ಲೇ ಕಿಚ್ಚ ಸುದೀಪ್, ಚಿತ್ರದ ಹಾಡೊಂದನ್ನು ರಿಲೀಸ್ ಮಾಡಿದ್ದಾರೆ.
‘ಯಾಕೆ ಸಿಕ್ಕೆ...’ ಎಂದು ಸಾಗುವ ಈ ಹಾಡಿಗೆ ಖುದ್ದು ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ. ಎಂದಿನಂತೆ ವಿಭಿನ್ನ ಶೈಲಿಯ ಬರವಣಿಗೆಯ ಯೋಗರಾಜ್ ಭಟ್ ಸಾಲುಗಳು ಸಂಗೀತಪ್ರಿಯರನ್ನು ಸೆಳೆಯುತ್ತಿವೆ. ‘ಪದವಿಪೂರ್ವ’ ಮೂಲಕ ಪೃಥ್ವಿ ಶಾಮನೂರು ನಾಯಕನಾಗಿ ಡೆಬ್ಯೂ ಮಾಡುತ್ತಿದ್ದಾರೆ. ಅವರಿಗೆ ಅಂಜಲಿ ನಾಯಕಿಯಾಗಿದ್ದು, ಯಶಾ ಶಿವಕುಮಾರ್ ಪ್ರಮುಖ ತಾರಾಗಣದಲ್ಲಿದ್ದಾರೆ. ಇದೇ ಡಿ. 30ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.