

ನವದೆಹಲಿ: ಓಯೋ ಹೆಸರು ಕೇಳದವರಿಲ್ಲ. ದೂರದ ಊರಲ್ಲಿ ತಂಗುವುದಕ್ಕೆ ಸುಲಭ ಹಾದಿಯನ್ನು ಹುಡುಕಿಕೊಟ್ಟ ಒಯೋ ಸಂಸ್ಥಾಪಕನ ಕಥೆ ನೀವು ತಿಳಿದುಕೊಳ್ಳಲೇಬೇಕು.
ಒಡಿಸ್ಸಾ ಮೂಲದ ರಿತೇಶ್ ಅಗರರ್ವಾಲ್ ಒಯೋ ಸಂಸ್ಥಾಪಕ. ಕೇವಲ 26 ವಯಸ್ಸಿನ ರಿತೇಶ್ಗೆ ಉದ್ಯಮಿ ಎನ್ನುವ ಪದ ಪರಿಚಯವಾಗಿದ್ದು ಆತ ನಾಲ್ಕನೇ ತರಗತಿಯಲ್ಲಿದ್ದಾಗ. ಅಂದಿನಿಂದ ಯಾರೇ ನೀನು ಏನಾಗಬೇಕು ಎಂದು ಕೇಳಿದರೂ ಉದ್ಯಮಿ ಎಂದು ತಟ್ ಅಂತ ಉತ್ತರ ಕೊಟ್ಟುಬಿಡುತ್ತಿದ್ದರಂತೆ.
ಒಡಿಸ್ಸಾದ ರಾಯಗಡದಲ್ಲಿದ್ದ ರಿತೇಶ್ಗೆ ದೊಡ್ಡ ಉದ್ಯಮಿಯಾಗಬೇಕೆಂಬ ಕನಸಿತ್ತಂತೆ. ಸಿಮ್ ಮಾರಾಟ ಮಾಡುವ ಅಂಗಡಿಯಿಂದ ಹಿಡಿದು ಅನೇಕ ರೀತಿಯ ವ್ಯಾವಹಾರಿಕ ಹುದ್ದೆಗಳನ್ನು ಬಾಲ್ಯದಲ್ಲೇ ಮಾಡಿ ಸೈ ಎನಿಸಿಕೊಂಡಿದ್ದರಂತೆ. ಕಂಪ್ಯೂಟರ್ ಉದ್ಯಮ ಮಾಡಬೇಕು ಎನ್ನುವ ಮಹದಾಸೆಯನ್ನು ಹೊತ್ತಿದ್ದ ಅವರು ಅದೇ ಆಸೆಯೊಂದಿಗೆ ಕೋಟಾಕ್ಕೆ ಬರುತ್ತಾರೆ. ಅಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡುತ್ತಾ ಜತೆಜತೆಗೆ ದೆಹಲಿಯಲ್ಲಿ ನಡೆಯುತ್ತಿದ್ದ ಉದ್ಯಮಿಗಳ ಕಾರ್ಯಕ್ರಮದಲ್ಲಿಯೂ ಪಾಲ್ಗೊಳುತ್ತಾರೆ. ಕಾಲೇಜಿನಲ್ಲಿ ಹಾಜರಾತಿಯ ತೊಂದರೆಯೇನು ಆಗದ ಕಾರಣ ಪರೀಕ್ಷೆಯ ಸಮಯದಲ್ಲಿ ಮಾತ್ರ ಕಾಲೇಜಿಗೆ ಹೋಗುವ ಅಭ್ಯಾಸ ಮಾಡಿಕೊಳ್ಳುತ್ತಾರೆ.
ಮುಂದೊಂದು ದಿನ ರಿತೇಶ್ ಅವರ ಅಪ್ಪ ಮಗನನ್ನು ಭೇಟಿ ಮಾಡುವ ಸಲುವಾಗಿ ಕೋಟಾಕ್ಕೆ ಬಂದಾಗ ಅಲ್ಲಿ ಮಗ ಇರಲಿಲ್ಲ. ಆತ ಕಾಲೇಜಿಗೆ ಸರಿಯಾಗಿ ಹೋಗುತ್ತಿಲ್ಲವೆಂಬ ವಿಚಾರ ತಿಳಿದು ಅವನಿಗೆ ತಂದೆ ಬೈಯಲಾರಂಭಿಸಿದಾಗ ಆತನ ತಾಯಿ ಸಮಾಧಾನ ಮಾಡಿ ಪ್ರೋತ್ಸಾಹಿಸಿದ್ದರಂತೆ.
ತನ್ನ ಕಷ್ಟದ ಹಾದಿಯನ್ನು ನೆನೆಸಿಕೊಂಡಿರುವ ರಿತೇಶ್ ತಾನು ಹೋಟೆಲ್ನಲ್ಲಿ ಸ್ವಚ್ಛತೆ ಮಾಡುವುದರಿಂದ ಹಿಡಿದು, ಶಿಶುಪಾಲಕನಾಗಿಯೂ ಸಹ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ. ಕಾಲೇಜು ಬಿಟ್ಟು ಉದ್ಯಮದತ್ತ ತಿರುಗಿದ ತಮಗೆ ದೇಶ ವಿದೇಶ ಸುತ್ತುವ ಅವಕಾಶ ದೊರಕಿತು ಎಂದು ಹೇಳಿಕೊಂಡಿದ್ದಾರೆ.
ಪೀಟರ್ ಥಿಯೆಲ್ ಫೆಲೋಶಿಪ್ಗೆ ಅರ್ಹರಾಗಿರುವ ಏಷ್ಯಾದ ಮೊದಲ ಉದ್ಯಮಿ ಎಂದು ಸಂತಸದಿಂದ ಹೇಳಿಕೊಂಡಿರುವ ರಿತೇಶ್, ಪ್ರತಿ ಬೀದಿಯಲ್ಲೂ ಓಯೋ ಕಾಣಿಸಿದಾಗ, ಲಕ್ಷಾಂತರ ಜನರು ಅಲ್ಲಿ ವಾಸಿಸುವಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)