17,824 ಸರ್ಕಾರಿ ಶಾಲೆಗಳಿಗಿಲ್ಲ ಮಾಲೀಕತ್ವ

school
ಮಕ್ಕಳ ಹಾಗೂ ಶಿಕ್ಷಕರ ಕೊರತೆಯಿಂದ ಬೀಗ ಹಾಕಲಾದ ಸೂಡ ಪಡುಬೆಟ್ಟು ಸರ್ಕಾರಿ ಶಾಲೆ.
Published on

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ರಾಜ್ಯದಲ್ಲಿ 1,574 ಪ್ರೌಢಶಾಲೆಗಳು ಸೇರಿ 17,824 ಸರ್ಕಾರಿ ಶಾಲೆಗಳಿಗೆ ಮಾಲೀಕತ್ವ ನೀಡುವ ಖಾತೆಯೇ ಇಲ್ಲದೆ ಕಾರ್ಯನಿರ್ವಹಿಸುತ್ತಿವೆ. ಆದರಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಆಯಾ ಶಾಲೆ ಹೆಸರಿಗೆ ಖಾತಾ ನೋಂದಾಯಿಸಲು ಅಭಿಯಾನ ಪ್ರಾರಂಭಿಸಲು ಮುಂದಾಗಿದೆ.

ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳಲ್ಲಿ 41,589 ಸರ್ಕಾರಿ ಪ್ರಾಥಮಿಕ ಶಾಲೆಗಳು ಮತ್ತು 4,871 ಸರ್ಕಾರಿ ಪ್ರೌಢ ಶಾಲೆಗಳಿವೆ. ಅಂದಾಜು 16,250 ಪ್ರಾಥಮಿಕ ಶಾಲೆಗಳು ಮತ್ತು 1,574 ಪ್ರೌಢ ಶಾಲೆಗಳು ಆಸ್ತಿ ಮಾಲೀಕತ್ವವನ್ನು ಹೊಂದಿಲ್ಲ. ಅಂಕಿಅಂಶಗಳ ಪ್ರಕಾರ 41,589 ಪ್ರಾಥಮಿಕ ಶಾಲೆಗಳಲ್ಲಿ 25,339 ಮತ್ತು 4,871 ಪ್ರೌಢಶಾಲೆಗಳಲ್ಲಿ 3,297 ಶಾಲೆಗಳು ಮಾತ್ರ ಆಯಾ ಶಾಲೆಗಳು ಅಥವಾ ಶಿಕ್ಷಣ ಇಲಾಖೆಯ ಹೆಸರಿನಲ್ಲಿ ತಮ್ಮ ಆಸ್ತಿಗಳನ್ನು ನೋಂದಾಯಿಸಿಕೊಂಡಿವೆ.

ಸರ್ಕಾರಿ ಶಾಲೆಗಳ ಜಮೀನು ಮಾಪನ ಮತ್ತು ಆಸ್ತಿಗಳಿಗೆ ಅಂತಿಮ ಹಕ್ಕು ದಾಖಲೆಗಳನ್ನು ತಯಾರಿಸಿಕೊಡುವ ಬಗ್ಗೆ ಚರ್ಚೆ, ಸರ್ಕಾರಿ ಶಾಲೆಗಳ ಜಮೀನು ಜತನ ಮಾಡಿಕೊಳ್ಳುವುದು ಮುಖ್ಯ ಉದ್ದೇಶವಾಗಿದೆ. ಶಾಲಾ ಆಸ್ತಿ ಮಾಲೀಕತ್ವ ಕಂದಾಯ ಸರ್ಕಾರದ ಇತರ ಇಲಾಖೆಗಳ ಹೆಸರಿನಲ್ಲಿವೆ. ಮಾಲೀಕತ್ವವನ್ನು ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ವರ್ಗಾಯಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.

ಶಾಲಾ ಆಸ್ತಿಗಳ ಮಾಲೀಕತ್ವವನ್ನು ಶಾಲಾ ಶಿಕ್ಷಣ ಇಲಾಖೆಗೆ ಸಾಧ್ಯವಾದಷ್ಟು ಬೇಗ ವರ್ಗಾಯಿಸಲು ಸಹಾಯ ಮಾಡುವಂತೆ ಜಿಲ್ಲಾಡಳಿತಗಳನ್ನು ಮನವಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸಚಿವರ ನೇತೃತ್ವದಲ್ಲಿ ಚರ್ಚೆಯು ಸ್ಪಷ್ಟ ಕಾರ್ಯಸೂಚಿ, ಮಾರ್ಗಸೂಚಿ ಹಾಕಿಕೊಡುವ ನಿರೀಕ್ಷೆಯಿದೆ.

ಕೆಲವು ವ್ಯಕ್ತಿಗಳು ಶಾಲೆಗಳಿಗೆ ಭೂಮಿಯನ್ನು ದಾನ ಮಾಡಿದರು ಮತ್ತು ನಂತರ ಶಾಲಾ ಹೆಸರಿಗೆ ಖಾತಾವಾಗಿಲ್ಲ. ಆದರಿಂದ ಹಿಂದಿನ ವಾರಸುದಾರರೇ ಮರಳಿ ಹಕ್ಕು ಪಡೆದು ವಿವಾದಗಳನ್ನು ಹುಟ್ಟಿ ಹಾಕುತ್ತಿದ್ದಾರೆ. ಈ ವೇಳೆ ಶಾಲೆಗೆ ಆಸ್ತಿಯ ಮಾಲೀಕತ್ವವನ್ನು ನೋಂದಾಯಿಸುವ ಪ್ರಕ್ರಿಯೆ ವಿಳಂಬ ಆಗುತ್ತಿದೆ. ಉಳಿದಂತೆ ಕಾನೂನು ಬದ್ಧವಾಗಿ ಹಕ್ಕು ವರ್ಗಾವಣೆಗೆ ಆಗುತ್ತಿದೆ. ಈ ಎಲ್ಲದರ ಬಗ್ಗೆ ಚರ್ಚೆ ನಡೆಸಿ ಮಾರ್ಗಸೂಚಿಗಳನ್ನು ರೂಪಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಶಿವಮೊಗ್ಗ ಅಗ್ರಸ್ಥಾನ

ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ಪಟ್ಟಿಯಲ್ಲಿ ಶಿವಮೊಗ್ಗ ಅಗ್ರಸ್ಥಾನದಲ್ಲಿದೆ. 1,113 ಆಸ್ತಿಗಳನ್ನು ಶಾಲೆಗಳ ಹೆಸರಿನಲ್ಲಿ ನೋಂದಾಯಿಸಲಾಗಿದೆ. ತುಮಕೂರು 959 ಆಸ್ತಿಗಳೊಂದಿಗೆ 2ನೇ ಸ್ಥಾನದಲ್ಲಿದೆ ಮತ್ತು ಬೆಳಗಾವಿ 159 ಶಾಲಾ ಆಸ್ತಿಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.

ಖಾತಾ ಬಾಕಿ ಇರುವ ಮೊದಲ ಐದು ಜಿಲ್ಲೆಗಳ ಪಟ್ಟಿ

-----------------------------------

ಜಿಲ್ಲೆ                ಬಾಕಿ ಶಾಲೆಗಳ ಸಂಖ್ಯೆ

---------------------------------

ಶಿವಮೊಗ್ಗ             1,114

ತುಮಕೂರು          960

ಕಲಬುರಗಿ            901

ಮಂಡ್ಯ                879

ದಕ್ಷಿಣ ಕನ್ನಡ         828

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net