

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಕರೊನಾ ವೈರಸ್ನಿಂದ ಮೃತಪಟ್ಟ ಒಟ್ಟು 179 ಮಂದಿಯಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಕೊಳಗೇರಿ ಹಾಗೂ ವಸತಿ ಸಂಕೀರ್ಣದಲ್ಲಿ ವಾಸಿಸುತ್ತಿದ್ದವರೇ ಆಗಿದ್ದಾರೆ. ಇಲ್ಲಿಯವರೆಗೆ ಶೇ. 58 ರಷ್ಟು ಸಾವು ಇಲ್ಲಿನ ಪ್ರದೇಶಗಳಲ್ಲಿ ವರದಿಯಾಗಿದೆ.
ಜಿ- ಸೌಥ್ ವಾರ್ಡ್ನ ಸ್ಲಮ್ ಮತ್ತು ವಸತಿ ಸಂಕೀರ್ಣದಲ್ಲಿ ಹೆಚ್ಚು ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, 20 ಮಂದಿ ಮೃತಪಟ್ಟಿದ್ದಾರೆ. ಜಿ-ಸೌಥ್ ವಾರ್ಡ್, ರೋಲಿ ನಾಕಾದಲ್ಲಿನ ಕಿಕ್ಕಿರಿದು ತುಂಬಿರುವ ರೊಲಿ-ಕೊಯಿಲ್ವಾಡ, ಜಿಜಾಮಾತ ನಗರ ಸ್ಲಮ್ ಮತ್ತು ಬಿಡಿಡಿ ವಸತಿ ಸಂಕೀರ್ಣವನ್ನು ಸುತ್ತುವರಿದಿದ್ದು, ಇಲ್ಲಿ 534 ಪಾಸಿಟಿವ್ ಪ್ರಕರಣ ಏಪ್ರಿಲ್ 23ರವರೆಗೆ ಪತ್ತೆಯಾಗಿವೆ.
ಮುಂಬೈನಲ್ಲಿ 106 ಇದ್ದ ಕಂಟೈನ್ಮೆಂಟ್ ಝೋನ್, ಇದೀಗ 1,036ಕ್ಕೆ ಏರಿದೆ. ಒಂದಕ್ಕಿಂತ ಹೆಚ್ಚು ಪಾಸಿಟಿವ್ ಕೇಸ್ ಅಥವಾ ಐದು ಹೆಚ್ಚಿನ ಅಪಾಯದ ಸಂಪರ್ಕ ಪ್ರಕರಣಗಳು ಇರುವು ಸ್ಥಳವನ್ನು ರೆಡ್ಝೋನ್ ಎಂದು ಗುರುತಿಸಲಾಗಿದ್ದು, 1,036 ಏರಿಯಾಗಳಲ್ಲಿ 374 ಸ್ಲಮ್ ಮತ್ತು ವಸತಿ ಸಂಕೀರ್ಣಗಳು ರೆಡ್ಝೋನ್ಗೆ ಸೇರಿವೆ. ಇಲ್ಲಿ ಲಾಕ್ಡೌನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. 374 ಸ್ಲಮ್ ಮತ್ತು ವಸತಿ ಸಂಕೀರ್ಣದಲ್ಲಿ 1281 ಪಾಸಿಟಿವ್ ಕೇಸ್ಗಳಿದ್ದು, ಡಾಟಾ ಪ್ರಕಾರ 6900ಕ್ಕೂ ಹೆಚ್ಚಿನ ಅಪಾಯದ ಸಂಪರ್ಕ ಪ್ರಕರಣಗಳಿವೆ.
ಎಲ್-ವಾರ್ಡ್ ಕುರ್ಲಾ ಮತ್ತು ಸಕಿ ನಾಕಾ ಪ್ರದೇಶವನ್ನು ಸುತ್ತುವರಿದಿದ್ದು, 48 ಅತ್ಯಧಿಕ ರೆಡ್ ಝೋನ್ ಹೊಂದಿರುವ ಪ್ರದೇಶವಾಗಿದೆ. ಅಂಧೇರಿ(ಪಶ್ಚಿಮ), ಜುಹು ಮತ್ತು ವೆರ್ಸೊವಾದಲ್ಲಿ 40 ರೆಡ್ಝೋನ್ಗಳಿವೆ. ವಿಲೆ ಪರ್ಲೆ(ಪೂರ್ವ) ಹೆಚ್ಚು ಅಪಾಯದ ಸಂಪರ್ಕ ಪ್ರಕರಣಗಳಿವೆ.
ಒಟ್ಟಾರೆ ಮಹಾರಾಷ್ಟ್ರದಲ್ಲಿ ಈವರೆಗೂ 7628 ಪ್ರಕರಣಗಳು ವರದಿಯಾಗಿದ್ದು, 323 ಮಂದಿ ಸಾವಿಗೀಡಾಗಿದ್ದಾರೆ. 1076 ಮಂದಿ ಗುಣಮುಖರಾಗಿದ್ದಾರೆ. (ಏಜೆನ್ಸೀಸ್)