3ನೇ ಹಂತದ ಕರೊನಾ ಲಸಿಕಾ ಅಭಿಯಾನದ ಮೊದಲ ದಿನ ಲಸಿಕೆ ಪಡೆದವರ ಸಂಖ್ಯೆ ಹೀಗಿದೆ...

Vaccination
Published on

ನವದೆಹಲಿ: ಶನಿವಾರ ಒಂದೇ ದಿನಕ್ಕೆ 18 ರಿಂದ 44 ವಯಸ್ಸಿನ ಗುಂಪಿನ 84,599 ಫಲಾನುಭವಿಗಳು ಕರೊನಾ ಲಸಿಕೆಯ ಮೊದಲ ಡೋಸ್​ ಅನ್ನು ಪಡೆದುಕೊಂಡಿರುವುದಾಗಿ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಲಸಿಕಾ ಅಭಿಯಾನದ 106ನೇ ದಿನವಾದ ಶನಿವಾರ 8 ಗಂಟೆಯವರೆಗೆ ಒಟ್ಟು 16,48,192 ಕರೊನಾ ಲಸಿಕೆಯನ್ನು ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ತಾತ್ಕಾಲಿಕ ವರದಿಯ ಪ್ರಕಾರ 9,89,700 ಫಲಾನುಭವಿಗಳಿಗೆ ಮೊದಲ ಡೋಸ್‌ಗೆ ಲಸಿಕೆ ನೀಡಲಾಗಿದ್ದು, 6.58 ಲಕ್ಷ ಫಲಾನುಭವಿಗಳಿಗೆ ಎರಡನೇ ಡೋಸ್ ನೀಡಲಾಗಿದೆ. 18-44 ವಯೋಮಾನದ ಒಟ್ಟು 84,599 ಜನರಿಗೆ ಮೊದಲ ಡೋಸ್ ನೀಡಲಾಗಿದೆ.

ದೇಶಾದ್ಯಂತ ಒಟ್ಟು ಲಸಿಕೆ 15.66 ಕೋಟಿಗೆ ಏರಿದೆ. ಇದರಲ್ಲಿ ಮೊದಲ ಡೋಸ್ ಪಡೆದ 94.28 ಲಕ್ಷ ಆರೋಗ್ಯ ಕಾರ್ಯಕರ್ತರು ಮತ್ತು ಎರಡನೇ ಡೋಸ್ ತೆಗೆದುಕೊಂಡ 62.65 ಲಕ್ಷ ಜನರು, ಮೊದಲ ಡೋಸ್ ಪಡೆದ 1.26 ಕೋಟಿ ಮುಂಚೂಣಿ ಕಾರ್ಮಿಕರು ಮತ್ತು ಎರಡನೇ ಡೋಸ್ ತೆಗೆದುಕೊಂಡ 68.78 ಲಕ್ಷ ಕಾರ್ಮಿಕರು ಸೇರಿದ್ದಾರೆ.

45-60 ವಯೋಮಾನದವರಲ್ಲಿ 5.33 ಕೋಟಿ ಜನರು ಮೊದಲ ಡೋಸ್ ತೆಗೆದುಕೊಂಡರೆ, 40 ಲಕ್ಷಕ್ಕೂ ಹೆಚ್ಚು ಜನರಿಗೆ ಈವರೆಗೆ ಎರಡನೇ ಡೋಸ್ ನೀಡಲಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟ 5.26 ಕೋಟಿ ಜನರು ಮೊದಲ ಡೋಸ್ ಮತ್ತು 1.14 ಕೋಟಿ ಫಲಾನುಭವಿಗಳು ಎರಡನೇ ಡೋಸ್ ತೆಗೆದುಕೊಂಡಿದ್ದಾರೆ.

ಮೂರನೇ ಹಂತದ ಲಸಿಕಾ ಅಭಿಯಾನ ಮೇ 1 ರಿಂದ ಜಾರಿಗೆ ಬಂದಿದೆ. ಸ್ವಯಂಸೇವಕ ಗುಂಪುಗಳು ಮತ್ತು ಎನ್‌ಜಿಒಗಳ ನೆರವಿನೊಂದಿಗೆ ಸಹಾಯ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net