

ನವದೆಹಲಿ: ಕರೊನಾದಿಂದಾಗಿ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಲಾಕ್ಡೌನ್ ಘೋಷಣೆಯಾಗಿದೆ. ತಮ್ಮ ದೇಶಗಳಿಗೆ ತೆರಳಲಾಗದೆ ಸಾವಿರಾರು ಜನರು ಸಂಕಷ್ಟಪಡುತ್ತಿದ್ದಾರೆ. ಕೆಲ ರಾಷ್ಟ್ರಗಳು, ಇವರ ಸಹಾಯಕ್ಕೆ ಧಾವಿಸಿದ್ದರೆ, ಪಾಕಿಸ್ತಾನ ಮಾತ್ರ ತನ್ನ ಪ್ರಜೆಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂಬ ಆರೋಪ ಕೇಳಿ ಬಂದಿದೆ.
ನವದೆಹಲಿ, ಪಂಜಾಬ್, ಆಗ್ರಾ ಸೇರಿ ದೇಶದ ವಿವಿಧೆಡೆ 160ಕ್ಕೂ ಹೆಚ್ಚು ಪಾಕಿಸ್ತಾನಿಯರು ಉಳಿದುಕೊಂಡಿದ್ದಾರೆ. ಮಾ.9ಕ್ಕೆ ಆಗಮಿಸಿದ್ದ ಇವರು ಮಾರ್ಚ್ 20ಕ್ಕೆ ತಮ್ಮ ದೇಶಕ್ಕೆ ತೆರಳಬೇಕಿತ್ತು. ಆದರೆ, ಅಷ್ಟರಲ್ಲಾಗಲೇ ದೇಶದ ಗಡಿಗಳನ್ನು ಬಂದ್ ಮಾಡಲಾಗಿತ್ತು ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರಕ್ಕೂ ನಿರ್ಬಂಧ ಹೇರಲಾಗಿತ್ತು. ಹೀಗಾಗಿ ಕಳೆದ ಒಂದು ತಿಂಗಳಿನಿಂದಲೂ ಅಧಿಕ ಕಾಲದಿಂದ ಇವರು ಭಾರತದಲ್ಲಿಯೇ ಉಳಿಯುವಂತಾಗಿದೆ. ತಮ್ಮಲ್ಲಿರುವ ಹಣ ಖಾಲಿಯಾಗಿ ಅಧಿಕಾರಿಗಳು ಹಾಗೂ ನಿರಾಶ್ರಿತರ ಕೇಂದ್ರದಲ್ಲಿ ನೀಡಿದ ಆಹಾರ ಸೇವಿಸಿ ದಿನ ದೂಡುತ್ತಿದ್ದಾರೆ. ನಮಗೆ ತಿಳಿಸದೇ ಗಡಿಗಳನ್ನು ಬಂದ್ ಮಾಡಲಾಗಿದೆ ಎಂಬುದು ಇವರ ಆರೋಪ.
ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿದ್ದರೂ, ತನ್ನ ಪ್ರಜೆಗಳನ್ನು ಕರೆಯಿಸಿಕೊಳ್ಳಲು ಪರಿಹಾರ ವಿಮಾನಗಳ ಹಾರಾಟಕ್ಕೆ ಎಲ್ಲ ದೇಶಗಳು ಕೆಲ ದಿನಗಳ ಹಿಂದಿನವರೆಗೂ ಮುಕ್ತ ಅವಕಾಶ ಕಲ್ಪಿಸಿದ್ದವು. ಆದರೆ, ಈ ಅವಕಾಶವನ್ನು ಪಾಕಿಸ್ತಾನ ಬಳಸಿಕೊಳ್ಳಲಿಲ್ಲ ಎಂಬುದು ಪಾಕ್ ಪ್ರಜೆಗಳ ಆರೋಪವಾಗಿದೆ.
ಪಾಕ್ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕನಿಷ್ಠ ವಾಘಾ ಗಡಿಯಲ್ಲಿ ತಮ್ಮನ್ನು ಒಳಗೆ ಬಿಟ್ಟುಕೊಂಡರೂ ತಮ್ಮೂರುಗಳಿಗೆ ತಲುಪುತ್ತೇವೆ ಎಂಬ ಆಸೆ ಇವರದ್ದಾಗಿದೆ. ಇದಕ್ಕೂ ತ್ವರಿತವಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಇವರದ್ದಾಗಿದೆ.