ಹೊರಗುತ್ತಿಗೆ ಪದ್ಧತಿ ಸಮಾಪ್ತಿಗೆ ಶಿಫಾರಸು

ವಿಧಾನಸೌಧ ಸಂಗ್ರಹಚಿತ್ರ
ವಿಧಾನಸೌಧ ಸಂಗ್ರಹಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • 2028ರ ಮಾರ್ಚ್‌ವರೆಗೆ ಸರ್ಕಾರಕ್ಕೆ ಗಡುವು
  • ಸಚಿವ ಸಂಪುಟ ಉಪಸಮಿತಿ ವರದಿ ತಯಾರು
  • ತಾತ್ಕಾಲಿಕವಾಗಿ ಸಂಘದ ಮುಖೇನ ನಿರ್ವಹಣೆ
ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ನಿಗಮ-ಮಂಡಳಿ, ಸಂಸ್ಥೆಗಳಲ್ಲಿ ಖಾಯಂ ಸ್ವರೂಪದ ಕೆಲಸಗಳಿಗೆ ಹೊರಗುತ್ತಿಗೆಯಡಿ ನೇಮಕ ಪದ್ಧತಿ ನಿಷೇಧಿಸುವಂತೆ ರಾಜ್ಯ ಸರ್ಕಾರಕ್ಕೆ ಸಚಿವ ಸಂಪುಟ ಉಪಸಮಿತಿ ಶಿಫಾರಸು ಮಾಡಿದೆ. Cabinet subcommittee
‘ಬೀದರ್ ಜಿಲ್ಲಾ ಕಾರ್ಮಿಕರ ಸೇವಾ ಸಹಕಾರ ಸಂಘಗಳ’ ಮಾದರಿ ಅಧ್ಯಯನ, ಕ್ರಮಗಳ ಬಗ್ಗೆ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ.ಪಾಟೀಲ ಅಧ್ಯಕ್ಷತೆಯ ಸಚಿವ ಸಂಪುಟ ಉಪಸಮಿತಿ ಹೊರಗುತ್ತಿಗೆ ಸಮಾಪ್ತಿಗೊಳಿಸಲು 2028ರ ಮಾರ್ಚ್ ಗಡುವು ನೀಡಿದೆ.
ಖಾಯಂ ಸ್ವರೂಪದ ಕೆಲಸಗಳಿಗೆ ಹೊರಗುತ್ತಿಗೆಯಡಿ ಸಿಬ್ಬಂದಿ ನೇಮಕ ಕಾನೂನುಬಾಹಿರವೆಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಆದೇಶಿಸಿದೆ. ಜತೆಗೆ ಸಾಮಾಜಿಕ ನ್ಯಾಯ ಉಲ್ಲಂಘನೆ, ಹೊರ ಗುತ್ತಿಗೆ ಸಂಸ್ಥೆಗಳ ಶೋಷಣೆ ಬಗ್ಗೆ ಉಪಸಮಿತಿ ಚರ್ಚಿಸಿದೆ.

ಸೇವಾ ಭದ್ರತೆಗೆ ಸೂಚನೆ

ಹೊರಗುತ್ತಿಗೆ ವ್ಯವಸ್ಥೆಯನ್ನು ಮುಂದುವರಿಸುವ ಕ್ರಮ ಸಂವಿಧಾನದ ಉಲ್ಲಂಘನೆಯಾಗುತ್ತದೆ. ಸಂವಿಧಾನದ ಅಡಿಯಲ್ಲಿ ಸರ್ಕಾರ ಕಾರ್ಯನಿರ್ವಹಿಸಬೇಕು. ಹಂತ ಹಂತವಾಗಿ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಸಚಿವ ಎಚ್.ಕೆ.ಪಾಟೀಲ ಸೂಚಿಸಿದ್ದಾರೆ.
ಪ್ರಾಣಾಪಾಯದ ಸ್ಥಳಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇಂಧನ, ಆರೋಗ್ಯ ಇಲಾಖೆಗಳ ಸಿಬ್ಬಂದಿ, ಪೌರ ಕಾರ್ಮಿಕರಿಗೆ ಹಂತ ಹಂತವಾಗಿ ಮುಂದಿನ ಮೂರು ವರ್ಷಗಳಲ್ಲಿ ಒಳಗುತ್ತಿಗೆಗೆ ಒಳಪಡಿಸಲು ಕ್ರಮವಹಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ತಿಳಿಸಿದರು.

ಪ್ರಮುಖ ಶಿಫಾರಸುಗಳು

- ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮಕೈಗೊಳ್ಳುವುದು
- ಹೊರುಗತ್ತಿಗೆಯಡಿ ನೇಮಕದಿಂದ ಸಾಮಾಜಿಕ ನ್ಯಾಯ, ಪ್ರತಿಭಾನ್ವಿತರಿಗೆ ವಂಚನೆ ನಿವಾರಣೆ
- ಹೊರ ಗುತ್ತಿಗೆ ನೌಕರರಿಗೆ ಏಜೆನ್ಸಿಗಳಿಂದ ಆಗುತ್ತಿರುವ ಅನ್ಯಾಯ ಶೋಷಣೆ ತಗ್ಗಿಸುವ ದೃಷ್ಟಿಯಿಂದ ತಾತ್ಪೂರ್ತಿಕವಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಂಘ ಸ್ಥಾಪನೆ
- ಸುಪ್ರೀಂ ಕೋರ್ಟ್, ಹೈಕೋರ್ಟ್ ತೀರ್ಪುಗಳ ಪ್ರಕಾರ ಹೊರಗುತ್ತಿಗೆ ಪದ್ಧತಿ ಸಂಪೂರ್ಣ ನಿಲುಗಡೆ ಅನಿವಾರ್ಯ
- ಆಡಳಿತಕ್ಕೆ ತೊಂದರೆ ತಪ್ಪಿಸಲು ಏಜನ್ಸಿಗಳ ಮೂಲಕ ಹೊರಗುತ್ತಿಗೆ ಕೆಲಕಾಲ ಮುಂದುವರಿಸಿ, ಸೂಕ್ತ ಕಾನೂನು ಮೂಲಕ ಹೊರಗುತ್ತಿಗೆ ಪದ್ಧತಿ ರದ್ದು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net