ಎಸ್​ಎನ್​ಆರ್​ ಅವ್ಯವಸ್ಥೆಗೆ ಜನಪ್ರತಿನಿಧಿಗಳಿಂದಲೇ ಆಕ್ರೋಶ

klr hospital
ಕೋಲಾರ ನಗರದ ಎಸ್​ಎನ್​ಆರ್​ ಆಸ್ಪತ್ರೆಯ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಳ ರೋಗಿಗಳು.
Published on

* ಕಿರುವಾರ ಎಸ್​.ಸುದರ್ಶನ್​ ಕೋಲಾರ

ಬಡವರ ಪಾಲಿಗೆ ಬೆಳಕಾಗಿದ್ದ ನಗರದ ಜಿಲ್ಲಾ ಎಸ್​ಎನ್​ಆರ್​ ಆಸ್ಪತ್ರೆಯೂ ಈಗ ನರಕವಾಗಿ ಮಾರ್ಪಟ್ಟಿದ್ದು, ಇಲ್ಲಿನ ಅವ್ಯವಸ್ಥೆ ಜನಪ್ರತಿನಿಧಿಗಳ ಆಕ್ರೋಶಕ್ಕೂ ಕಾರಣವಾಗಿದೆ.

ಅಧಿಕಾರಿಗಳ ಹೊಂದಾಣಿಕೆ ಕೊರತೆಯಿಂದ ರೋಗಿಗಳಿಗೆ ಆರೋಗ್ಯ ಸೇವೆ ದೊರೆಯುವುದು ಕಷ್ಟವಾಗುತ್ತಿದೆ. ಸರ್ಕಾರವು ಆರೋಗ್ಯ ಸೇವೆಯನ್ನು ತುರ್ತು ಸೇವೆ ಎಂದು ಪರಿಗಣಿಸಿದ್ದು, ವಿವಿಧ ಯೋಜನೆಗಳಡಿ ಸಾಕಷ್ಟು ಅನುದಾನ ಬಿಡುಗಡೆಯಾಗಿದ್ದರೂ ಅಧಿಕಾರಿಗಳು ಅನುದಾನದ ಕೊರತೆ ನೆಪ ಹೇಳುವುದು ವಾಡಿಕೆಯಾಗಿದೆ.

ಹಲವು ಕೆಡಿಪಿ ಸಭೆಗಳಲ್ಲಿ ಎಸ್​ಎನ್​ಆರ್​ ಸೇರಿ ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಬಗ್ಗೆ ಶಾಸಕರು, ಸಚಿವರು ಚರ್ಚೆ ಮಾಡಿ ಸರಿಪಡಿಸಿಕೊಳ್ಳುವಂತೆ ಸೂಚಿಸಿದ್ದರೂ ಯಾವುದೇ ಕ್ರಮವಾಗಿಲ್ಲ.

ಸೇವೆ ಪಡೆದುಕೊಳ್ಳಲು ಬಹುತೇಕವಾಗಿ ನಗರ ಸೇರಿ ಜಿಲ್ಲೆಯ ವಿವಿಧ ತಾಲೂಕುಗಳಿಂದಲೂ ರೋಗಿಗಳು ಆಗಮಿಸುತ್ತಾರೆ. ಮೂಲ ಸೌಲಭ್ಯಗಳ ಕೊರತೆಯ ಜತೆಗೆ ಔಷಧಗಳ ಸರಬರಾಜಿನಲ್ಲೂ ಭಾರಿ ವ್ಯತ್ಯಾಸಗಳಾಗುತ್ತಿದ್ದು, ಬಿಳಿ ಚೀಟಿ ದಂಧೆ ಅವ್ಯಾಹತವಾಗಿವೆ.

ಮೂಳೆ, ಸರ್ಜನ್​ ವಿಭಾಗಗಳಿಗೂ ಅಗತ್ಯವಾಗಿ ಬೇಕಾಗಿರುವ ಸಲಕರಣೆಗಳು ಸಕಾಲಕ್ಕೆ ಸರಬರಾಜು ಆಗದೆ ಇರುವುದು ವೈದ್ಯರ, ರೋಗಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಎಸ್​ಎನ್​ಆರ್​ ಆಸ್ಪತ್ರೆಯು 350 ಹಾಸಿಗೆ ಸಾಮರ್ಥ್ಯ ಹೊಂದಿದ್ದು, ಆ ಪೈಕಿ ಐಸಿಯು 50, ಒಳರೋಗಿಗಳಿಗಾಗಿ 250, ಹೆರಿಗೆ ವಿಭಾಗಕ್ಕೆ ಮೀಸಲಿರಿಸಲಾಗಿದೆ.

ಪ್ರತಿ ದಿನ 1 ಸಾವಿರಕ್ಕೂ ಹೆಚ್ಚು ಹೊರ ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ರೋಗಿಗಳ ಸಂಖ್ಯೆಗೆ ತಕ್ಕಂತೆ ಒಪಿಡಿ ಚೀಟಿ ವಿತರಣಾ ಕೌಂಟರ್​, ಬಿಲ್ಲಿಂಗ್​ ಕೌಂಟರ್​, ಸ್ಕಾ$ನಿಂಗ್​ ಯಂತ್ರಗಳೇ ಇಲ್ಲದಿರುವುದು ಇಲ್ಲಿನ ದುಸ್ಥಿತಿಯನ್ನು ತೆರೆದಿಡುತ್ತದೆ.

ಆಡಳಿತ ವಿಭಾಗ, ಒಟಿಯಲ್ಲಿ ಸುಮಾರು ವರ್ಷಗಳಿಂದ ಕೆಲ ಸಿಬ್ಬಂದಿ ಠಿಕಾಣಿ ಹೂಡಿದ್ದು, ಸೇವಾ ಅನುಭವದ ಮೇರೆಗೆ ಬೇರೆೆ ಕಡೆಗೆ ವರ್ಗಾಯಿಸಿದರೂ ಪ್ರಭಾವ ಬಳಸಿ ಮೂಲ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಸದ್ಯ ಕೆಲಸ ಮಾಡುತ್ತಿರುವ ಸ್ಥಾನದಲ್ಲಿ ಸುಲಭವಾಗಿ ಹಣ ಮಾಡುವ ಮಾರ್ಗ ಕಂಡುಕೊಂಡಿದ್ದಾರೆ ಎಂಬ ಆರೋಪವಿದೆ. ಆದ್ದರಿಂದ ಯಾರ ಆದೇಶಕ್ಕೂ ಮಣಿಯುವುದಿಲ್ಲ. ಬಹುತೇಕ ಅಧಿಕಾರಿಗಳು ಸ್ಥಳಿಯರೇ ಆಗಿರುವುದರಿಂದ ತಳವೂರಿರುವುದು ಆಸ್ಪತ್ರೆಯ ಅವ್ಯವಸ್ಥೆಗೆ ಕಾರಣವಾಗಿದೆ.

* ಹೆಚ್ಚುವರಿ ಯಂತ್ರಗಳು ಅವಶ್ಯ

ಗರ್ಭಿಣಿ, ಹೊಟ್ಟೆ ನೋವು ಸೇರಿ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ಸ್ಕಾ$ನಿಂಗ್​ ಮಾಡಿಸಬೇಕಾದರೆ ದಿನಗಟ್ಟಲೆ ಕಾಯಬೇಕು. ಎಸ್​ಎನ್​ಆರ್​ನಲ್ಲಿ ಒಂದೇ ಸ್ಕಾ$ನಿಂಗ್​ ಯಂತ್ರ ಕಾರ್ಯನಿರ್ವಹಿಸುತ್ತಿದ್ದು, ಒಂದು ದಿನಕ್ಕೆ 20ರಿಂದ 25 ಮಂದಿಗೆ ಮಾತ್ರ ಸ್ಕಾ$ನ್​ ಮಾಡಲಾಗುತ್ತದೆ. ರೋಗಿಗಳ ಸಂಖ್ಯೆಗೆ ತಕ್ಕಂತೆ ಇನ್ನು ಎರಡು ಯಂತ್ರಗಳ ಅಳವಡಿಕೆ ಅವಶ್ಯಕತೆಯಿದೆ. ಸ್ಕಾ$ನಿಂಗ್​ಗೂ ಟೋಕನ್​ ವ್ಯವಸ್ಥೆ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ಹೊರಗಡೆ ಸ್ಕಾ$ನಿಂಗ್​ ಮಾಡಿಸಬೇಕು. ಬೆಳಗ್ಗೆ 10.30ರಿಂದ ಸಂಜೆ 4 ಗಂಟೆ ತನಕ ಒಟ್ಟು 10 ರೀತಿಯ ಸ್ಕಾ$ನ್​ ಮಾತ್ರ ಇಲ್ಲಿ ಮಾಡಲಾಗುತ್ತದೆ. ಉನ್ನತ ಪರೀೆ ಬೇಕಾದರೆ ಖಾಸಗಿ ಸೆಂಟರ್​ಗೆ ಹೋಗಲೇಬೇಕು. ಕೇವಲ 20ರಿಂದ25 ಟೋಕನ್​ ನೀಡುತ್ತಾರೆ. ದೂರದ ಊರುಗಳಿಂದ ಬರುವವರಿಗೆ ಟೋಕನ್​ ಸಿಗುವುದು ಗ್ಯಾರಂಟಿ ಇಲ್ಲ. ಇಲ್ಲಿನ ಸಿಬ್ಬಂದಿಗೆ ದುಡ್ಡು ಕೊಟ್ಟರೆ ಮಾತ್ರ ಟೋಕನ್​ ಇಲ್ಲದಿದ್ದರೂ ಸ್ಕಾ$ನ್​ ಮಾಡಿ ಕಳುಹಿಸುತ್ತಾರೆ ಎಂಬ ಆರೋಪ ಕೇಳಿ ಬಂದಿದೆ.

* ಔಷಧ ದೊರೆಯುವುದು ಅಷ್ಟಕಷ್ಟೇ!

ಶಸ್ತ್ರ ಚಿಕಿತ್ಸಾ ವಿಭಾಗ, ಮೆಡಿಕಲ್​ ವಿಭಾಗ ಸೇರಿ ಹಲವು ವಿಭಾಗಗಳ ವೈದ್ಯರು ಕಾಯಿಲೆ ಚಿಕಿತ್ಸೆ ತಕ್ಕಂತೆ ಔಷಧ ತೆಗೆದುಕೊಳ್ಳಲು ಶಿಾರಸು ಮಾಡುತ್ತಾರೆ. ಆದರೆ ಆಸ್ಪತ್ರೆಯ ಮೆಡಿಕಲ್​ ಸ್ಟೋರ್​ನಲ್ಲಿ ಲಭ್ಯವಾಗುವುದು ಕೆಲವೇ ಔಷಧಗಳು, ಇಲ್ಲಿ ಲಭ್ಯವಾಗದ ಔಷಧಗಳ ಬಗ್ಗೆಯು ಸಹ ರೋಗಿಗಳಿಗೆ ಸಿಬ್ಬಂದಿ ಮಾಹಿತಿ ನೀಡುವುದಿಲ್ಲ. ಇದು ಕಾಯಿಲೆ ಗುಣವಾಗುವುದರ ಮೇಲೂ ಪರಿಣಾಮ ಬೀರುತ್ತಿದೆ. ಅಧಿಕಾರಿ ಬದಲು ಪ್ಯಾರಾ ಮೆಡಿಕಲ್​ ವಿದ್ಯಾರ್ಥಿಗಳು ಔಷಧ ವಿತರಿಸುತ್ತಾರೆ. ಲಭ್ಯವಾಗದ ಔಷಧಗಳ ಬಗ್ಗೆ ರೋಗಿಗಳ ಗಮನಕ್ಕೆ ತರುವುದೇ ಇಲ್ಲ. ಒಂದು ವೇಳೆ ಪ್ರಶ್ನೆ ಮಾಡಿದರೆ ಹೊರಗಡೆ ಮೆಡಿಕಲ್​ನಲ್ಲಿ ತೆಗೆದುಕೊಳ್ಳಿ ಎಂದು ಚೀಟಿಯ ಮೇಲೆ ಸಹಿ ಹಾಕಿ ಕಳುಹಿಸುತ್ತಾರೆ ಎಂದು ರೋಗಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ

* ರೋಗಿಗಳ ಬಗ್ಗೆ ಕಾಳಜಿಯಿಲ್ಲ?

ಮೂಳೆ ಶಸ್ತ್ರ ಚಿಕಿತ್ಸೆಗಾಗಿ ದಾಖಲಾಗಿ ಎರಡು ತಿಂಗಳು ಕಳೆದರೂ ಸಾಮಗ್ರಿಗಳು ಸರಬರಾಜು ಆಗುತ್ತಿಲ್ಲ. ಜಿಲ್ಲಾ ಎಸ್​ಎನ್​ಆರ್​ ಆಸ್ಪತ್ರೆಯ ಮೂಳೆ ವಿಭಾಗಕ್ಕೆ ಮೆಡಲ್​ ಅಥ್ರೋ ಅಸಿಸ್ಟೆಂಟ್ಸ್​ ಸಂಸ್ಥೆಯವರು ಅಗತ್ಯ ಸಲಕರಣೆಗಳನ್ನು ಸರಬರಾಜು ಮಾಡುತ್ತಿದ್ದರು. ಈಗಾಗಲೇ ಸರಬರಾಜು ಮಾಡಿರುವ ಸಲಕರಣೆಗಳ ಬಿಲ್​ 12 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದು, ಇದೀಗ ನಿಲ್ಲಿಸಿದ್ದಾರೆ. ಇದರಿಂದ ಸುಮಾರು ಮಂದಿ ರೋಗಿಗಳು ಶಸ್ತ್ರ ಚಿಕಿತ್ಸೆಗಾಗಿ ದಾಖಲಾಗಿರುವವರು ಸುಮಾರು ಎರಡು ತಿಂಗಳಿಂದ ಕಾಯುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ ಆಡಳಿತಾಧಿಕಾರಿಗಳಿಗೆ ಬಡ ರೋಗಿಗಳ ಬಗ್ಗೆ ಕಾಳಜಿಯಿಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.

* ವೈದ್ಯರಿಂದ ವರದಿ ತಿರಸ್ಕಾರ

ಇನ್ನು ಎಕ್ಸ್​ ರೇ ವಿಭಾಗದಲ್ಲಿ ರೆಡಿಯಾಲಿಜಿಸ್ಟ್​ ಯಾರು..?, ಸಿಬ್ಬಂದಿ ಯಾರು...? ಎಂಬುದೇ ಗೊತ್ತಾಗುವುದಿಲ್ಲ. ಇಲ್ಲೆ ಎಲ್ಲ ಪ್ಯಾರಾ ಮೆಡಿಕಲ್​ ವಿದ್ಯಾರ್ಥಿಗಳು ಹೆಚ್ಚಾಗಿ ಇರುತ್ತಾರೆ. ಎಷ್ಟೇ ತುರ್ತು ಸಂದರ್ಭ ಇದ್ದರು ಅವರದೇ ಸಮಯಕ್ಕೆ ಪರೀೆ ಮಾಡುತ್ತಾರೆ. ರೋಗಿಗಳು ಕೌಂಟರ್​ ಬಳಿ ಬಂದು ಚೀಟಿ ನೀಡುತ್ತಾರೆ. ಅದನ್ನು ಸ್ವೀಕರಿಸುವ ವಿದ್ಯಾರ್ಥಿಗಳು ರೋಗಿಯನ್ನು ಎಕ್ಸ್​ ರೇಗೆ ಒಳಪಡಿಸುತ್ತಾರೆ. ಅದೇಷ್ಟೊ ಬಾರಿ ಎಕ್ಸ್​ ರೇ ವರದಿಯನ್ನು ವೈದ್ಯರು ತಿರಸ್ಕರಿಸಿ, ಪುನ@ ಮಾಡಿಸಿಕೊಂಡು ಬನ್ನಿ ಎಂದು ಹೇಳಿ ಕಳುಹಿಸಿರುವ ನಿದರ್ಶನಗಳು ಇವೆ.

ಕೋಟ್​..

ಮೊಣಕಾಲು ಸಮಸ್ಯೆಯಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿ 20 ದಿನಗಳು ಕಳೆದಿವೆ. ಪರೀೆಗಳನ್ನು ಮಾಡಿ ಶಸ್ತ್ರ ಚಿಕಿತ್ಸೆ ಮಾಡಬೇಕು ಅಂತ ವೈದ್ಯರು ಹೇಳಿದರು. ಇಂದು ನಾಳೆ ಅಂತ ಹೇಳುತ್ತಲೇ ಬರುತ್ತಿದ್ದಾರೆ. ತಡ ಯಾಕೆ ಅಂತ ಕೇಳಿದಕ್ಕೆ ಸಲಕರಣೆಗಳು ಬರುತ್ತಿಲ್ಲ ಅಂತ ಹೇಳುತ್ತಾರೆ.

- ನಾಗಮ್ಮ, ಪೆಗಳಪಲ್ಲಿ, ಶ್ರೀನಿವಾಸಪುರ ತಾಲೂಕು

ಕೋಟ್​...

ಶಸ್ತ್ರ ಚಿಕಿತ್ಸೆ ಮಾಡಿರುವ ಬಗ್ಗೆ ಅಧಿಕಾರಿಗಳಿಗೆ ಬಿಲ್​ ಸಲ್ಲಿಸಲಾಗಿದೆ. ಇನ್ನು ಹೆಚ್ಚು ಮಂದಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದ್ದು, ಸಲಕರಣ ಸರಬರಾಜಿಗಾಗಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.

- ಹೆಸರು ಹೇಳಲು ಇಚ್ಚಿಸದ ವೈದ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net